ಆಯೋಗಕ್ಕೆ ಶಕ್ತಿ ತುಂಬಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ಚುನಾವಣಾ ಆಯೋಗ ನೀಡಿರುವುದು ಸ್ವಾಗತಾರ್ಹ. ಆದರೆ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಪ್ರಭಾವವನ್ನು ಪೂರ್ಣಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ಆಯೋಗ ಹೊಸ ಕ್ರಮಗಳನ್ನು ಜಾರಿಗೆ ತಂದರೂ ಅಕ್ರಮಗಳು ಮಾತ್ರ ಹೆಚ್ಚುತ್ತಲೇ ಇರುವುದು ವಿಪರ್ಯಾಸ. ಚುನಾವಣಾ ಕಾಲದಲ್ಲಿ ಆಯೋಗ ಜಾರಿಗೊಳಿಸುವ ನೀತಿ ಸಂಹಿತೆಯನ್ನಾಗಲಿ, ವೆಚ್ಚದ ಮೇಲೆ ವಿಧಿಸಲಾಗುವ ಮಿತಿಯನ್ನಾಗಲಿ ಬಹುಪಾಲು ಅಭ್ಯರ್ಥಿಗಳು ಗಂಭೀರವಾಗಿ ಸ್ವೀಕರಿಸುವುದೇ ಇಲ್ಲ. ಸ್ಪರ್ಧಾ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿ ಕೂಡಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯನ್ನು ಮೀರಿ ಖರ್ಚು ಮಾಡುವುದು ಗೊತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಆಯೋಗದ ಅಧಿಕಾರಿಗಳಿದ್ದಾರೆ. ಚುನಾವಣಾ ಪ್ರಕ್ರಿಯೆ ಕಾಲದಲ್ಲಿ ಆಯೋಗದ ಅಧಿಕಾರಿಗಳು ಅಕ್ರಮಗಳಲ್ಲಿ ತೊಡಗಿರುವ ಅಭ್ಯರ್ಥಿಗಳ ಮೇಲೆ ಪ್ರಕರಣಗಳನ್ನು ದಾಖಲುಗೊಳಿಸಿದರೂ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಶಿಕ್ಷೆಗೊಳಪಡಿಸಿದ ಉದಾಹರಣೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಶಿಕ್ಷೆಯ ಭಯವೊಡ್ಡದೆ ಸುಧಾರಣೆಯನ್ನೂ ಜಾರಿಗೆ ತರುವುದು ಕಷ್ಟ ಎನ್ನುವುದನ್ನು ಆಯೋಗ ಅರ್ಥ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ತಮ್ಮ ಆಸ್ತಿ ಮತ್ತು ಜವಾಬ್ದಾರಿ, ಅಪರಾಧ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಕಡ್ಡಾಯ ಮಾಡಲಾಗಿದ್ದರೂ ಅವುಗಳ ಪರಿಶೀಲನೆಗೆ ಚುನಾವಣಾ ಅಧಿಕಾರಿಗಳಿಗೆ ಸಮಯಾವಕಾಶ ಇರುವುದಿಲ್ಲ. ಈ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರವೂ ಆಯೋಗಕ್ಕೆ ಇಲ್ಲ. ಈ ಕಾರಣದಿಂದಾಗಿ ಅಭ್ಯರ್ಥಿಗಳು ಸಲ್ಲಿಸುವ ಪ್ರಮಾಣಪತ್ರ ಕೂಡಾ ಕಾಟಾಚಾರದ ಕ್ರಮವಾಗಿ ಹೋಗಿದೆ. ಅಭ್ಯರ್ಥಿಗಳು ನೀಡುವ ಆಸ್ತಿ ವಿವರವನ್ನು ವರಮಾನ ತೆರಿಗೆ ಇಲಾಖೆಯ ಗಮನಕ್ಕೆ ತಂದು ಪರಿಶೀಲನೆಗೊಳಪಡಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಅಭ್ಯರ್ಥಿಗಳ ಪ್ರಮಾಣಪತ್ರದ ವಿವರ ಅಂತರ್ಜಾಲದಲ್ಲಿ ಮಾತ್ರ ಲಭ್ಯ ಇರುವುದರಿಂದ ಬಹುಸಂಖ್ಯಾತ ಮತದಾರರನ್ನು ಈ ಮಾಹಿತಿ ತಲುಪುವುದೇ ಇಲ್ಲ. ಚುನಾವಣೆಯಲ್ಲಿನ ಅಕ್ರಮ ತಡೆಯುವ ಪ್ರಯತ್ನ ಚುನಾವಣೆಯ ಘೋಷಣೆಯಾದ ನಂತರ ಪ್ರಾರಂಭವಾಗುವುದು ಕೂಡಾ ಈಗಿನ ವೈಫಲ್ಯಕ್ಕೆ ಕಾರಣ. ಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ಅದು ಮೊದಲು ರಾಜಕೀಯ ಪಕ್ಷಗಳ ಮಟ್ಟದಿಂದಲೇ ಪ್ರಾರಂಭವಾಗಬೇಕಾಗಿದೆ. ಪ್ರತಿಯೊಂದು ಪಕ್ಷವೂ ತನ್ನ ಹಣದ ವ್ಯವಹಾರವನ್ನು ಕಡ್ಡಾಯವಾಗಿ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು ಎನ್ನುವುದರಿಂದ ಹಿಡಿದು ಅವುಗಳು ಸ್ವೀಕರಿಸುವ ದೇಣಿಗೆಯನ್ನು ಚೆಕ್‌ಗಳ ಮೂಲಕವೇ ಪಡೆಯಬೇಕೆನ್ನುವ ವರೆಗೆ ಅನೇಕ ಸುಧಾರಣಾ ಕ್ರಮಗಳನ್ನು ಆಯೋಗ ಶಿಫಾರಸು ಮಾಡಿವೆ. ಈ ಬಗ್ಗೆ ಯಾವ ರಾಜಕೀಯ ಪಕ್ಷಕ್ಕೂ ಆಸಕ್ತಿ ಇಲ್ಲ ಎನ್ನುವುದು ವಿಷಾದನೀಯ. ಚುನಾವಣೆಯಲ್ಲಿನ ಅಕ್ರಮಗಳನ್ನು ತಡೆಯಬೇಕಾದರೆ ಆಯೋಗವೇ ಶಿಫಾರಸು ಮಾಡಿರುವ ಸುಧಾರಣಾ ಕ್ರಮಗಳು ಸಮಗ್ರರೂಪದಲ್ಲಿ ಜಾರಿಗೆ ಬರಬೇಕು, ಜತೆಯಲ್ಲಿ ಮತದಾರರೂ ಜಾಗೃತರಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.