ಅಗ್ನಿ ಸುರಕ್ಷತೆಯ ಅರಿವು ಅಗತ್ಯ ಬೆಂಗಳೂರಿನಲ್ಲಿ ಸಂಭವಿಸಿದ ಮತ್ತೊಂದು ಅಗ್ನಿ ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ಬಳಿ ಇರುವ ಎಸ್ ಆರ್ ಸೀಟಿಂಗ್ಸ್ ಸಿಸ್ಟಮ್ಸ ಕಾರ್ಖಾನೆಯ ಒಬ್ಬ ಕಾರ್ಮಿಕ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರೆ ಇನ್ನು ಐವರು ಉಸಿರುಗಟ್ಟಿ ಸತ್ತಿದ್ದಾರೆ. 2010ರಲ್ಲಿ ಒಂಬತ್ತು ಜನರನ್ನು ಬಲಿ ಪಡೆದ ಕಾರ್ಲ್‌ಟನ್ ಟವರ್ಸ್ ಅಗ್ನಿ ಅನಾಹುತದ ಕರಾಳ ನೆನಪು ಬೆಂಗಳೂರಿಗರ ಮನಸ್ಸುಗಳಿಂದ ಇನ್ನೂ ಮಾಸಿಲ್ಲ. ಇದಾದ ನಂತರ 2011ರಲ್ಲಿ ಮಾಗಡಿ ರಸ್ತೆಯ ಕಲ್ಯಾಣಮಂಟಪದಲ್ಲಿನ ಅಗ್ನಿ ಅನಾಹುತದಲ್ಲಿ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಸತ್ತು ಹಲವರು ಗಾಯಗೊಂಡಿದ್ದರು. ಹಾಗೆಯೇ 2012ರಲ್ಲಿ ರಸೆಲ್ ಮಾರ್ಕೆಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 170ಕ್ಕೂ ಹೆಚ್ಚು ಅಂಗಡಿಗಳು ಅಗ್ನಿಗಾಹುತಿಯಾಗಿದ್ದವು. ಇವಲ್ಲದೆ ಕಳೆದ ಮೂರು ವರ್ಷಗಳ ಇದೇ ಅವಧಿಯಲ್ಲಿ ಜೀವಹಾನಿಗಳಿಲ್ಲದ ಇನ್ನೂ ಅನೇಕ ಅಗ್ನಿ ಅನಾಹುತಗಳು ವರದಿಯಾಗಿವೆ. ಈ ಎಲ್ಲಾ ದುರಂತಗಳು ಸಾರ್ವಜನಿಕ ಅಗ್ನಿ ಸುರಕ್ಷೆಯ ವಿಚಾರದಲ್ಲಿ ನಮ್ಮ ಜಾಗೃತಿಯನ್ನು ಹೆಚ್ಚಿಸಲಿಲ್ಲ ಎಂಬುದು ಕಳವಳದ ಸಂಗತಿ. ಅಪಘಾತ ಸಂಭವಿಸಿದ ನಂತರವಷ್ಟೇ ಅಗ್ನಿ ಸುರಕ್ಷತಾ ಕ್ರಮಗಳ ವಿಚಾರಗಳು ಸಾರ್ವಜನಿಕ ಚರ್ಚೆಗೆ ಒಳಪಡುವುದು ವಿಪರ್ಯಾಸ. ಆದರೆ ಇಂತಹ ನಿರ್ಲಕ್ಷ್ಯಗಳಿಗಾಗಿ ನಾವು ತೆರುತ್ತಿರುವ ಬೆಲೆ ಮಾತ್ರ ಅಪಾರವಾದದ್ದು. ಈಗ ಅಗ್ನಿ ಅನಾಹುತಕ್ಕೆ ಗುರಿಯಾದ ಕಾರ್ಖಾನೆಯ ಕಟ್ಟಡಕ್ಕೆ ಇದ್ದದ್ದು ಮೂರು ತಿಂಗಳ ತಾತ್ಕಾಲಿಕ ವಿದ್ಯುತ್ ಸಂಪರ್ಕ ಮಾತ್ರ. ಅದರ ಅವಧಿಯೂ ಮುಗಿದಿದ್ದರಿಂದ ಕಾರ್ಖಾನೆಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿತ್ತು ಎಂಬುದು ನಮ್ಮ ಭ್ರಷ್ಟ ವ್ಯವಸ್ಥೆಯೆಡೆ ಬೆರಳು ಮಾಡುತ್ತದೆ. ಕಾನೂನು, ನಿಯಮಗಳನ್ನು ಗಾಳಿಗೆ ತೂರಿ ಸುರಕ್ಷಾ ಸೂತ್ರಗಳನ್ನು ಕಡೆಗಣಿಸಿ ಆರಂಭಿಸಲಾಗುವ ಇಂತಹ ಕಾರ್ಖಾನೆಗಳ ಕುರಿತಂತೆ ಆಡಳಿತಯಂತ್ರ ಎಚ್ಚರ ವಹಿಸಬೇಕಾದುದು ಮುಖ್ಯ. ಕಾರ್ಮಿಕ ಇಲಾಖೆ ಸೇರಿದಂತೆ ಅಗತ್ಯ ಇಲಾಖೆಗಳ ಪರವಾನಗಿ ಇಲ್ಲದೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ಇರಕೂಡದು. ಆದರೆ ಬಹಳ ಸಂದರ್ಭಗಳಲ್ಲಿ ಅಕ್ರಮಗಳಲ್ಲಿ ಅಧಿಕಾರಿಗಳೇ ಭಾಗಿಯಾಗಿರುತ್ತಾರೆ ಎಂಬುದು ವಾಸ್ತವ. ಇಂತಹ ವಿಚಾರಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತ್ವರಿತವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ಎಲ್ಲೆಂದರಲ್ಲಿ ಎದ್ದೇಳುತ್ತಿವೆ. ಆದರೆ ಎಲ್ಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷೆ ಈಗಲೂ ಕಡ್ಡಾಯವಿಲ್ಲ ಎಂಬಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಕಾರ್ಲ್‌ಟನ್ ಟವರ್ಸ್ ದುರಂತದ ನಂತರ, ಬೆಂಗಳೂರಿನ ಎಲ್ಲಾ ಗಗನಚುಂಬಿ ಕಟ್ಟಡಗಳ ಅಗ್ನಿ ಸುರಕ್ಷೆಯ ಪರಿಶೋಧನೆ ನಡೆಸಲು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಹೀಗಿದ್ದೂ ಈಗಲೂ ಅಗ್ನಿ ಸುರಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿಲ್ಲ ಎಂಬುದು ವ್ಯವಸ್ಥೆಯ ನಿಷ್ಕ್ರಿಯತೆಗೆ ಸಾಕ್ಷಿ. ಬೆಳೆಯುತ್ತಿರುವ ಕಟ್ಟಡಗಳ ನಾಗರಿಕತೆಗಳಿಗೆ ಅನುಗುಣವಾಗಿ ಕಟ್ಟಡಗಳ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಇಂತಹ ಅವಘಡಗಳನ್ನು ತಪ್ಪಿಸಲು ಸರ್ಕಾರ ಬದ್ಧವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.