ಅನಗತ್ಯ ವಿವಾದ ಹಿಜ್ಬ್ ಉಲ್ ಮುಜಾಹಿದ್ದೀನ್ ಶಂಕಿತ ಉಗ್ರ ಲಿಯಾಖತ್ ಖಾನ್ ಬಂಧನದ ವಿಚಾರ ದೆಹಲಿ ಪೊಲೀಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮಧ್ಯದ ಮಾತುಗಳ ಚಕಮಕಿಗೆ ಕಾರಣವಾಗಿದೆ. ಹೋಳಿ ಹಬ್ಬದ ವೇಳೆ ದೆಹಲಿಯಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಉದ್ದೇಶ ಈತನದಾಗಿತ್ತು ಎಂಬುದು ದೆಹಲಿ ಪೊಲೀಸರ ವಾದ. ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ, ಇತರ ಉಗ್ರರ ಜೊತೆ ಸೇರಿ ದಾಳಿಗೆ ಈತ ಸಂಚು ನಡೆಸಿದ್ದ ಎಂಬುದು ದೆಹಲಿ ಪೊಲೀಸರ ಪ್ರತಿಪಾದನೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದೂ ಅವರು ವಾದಿಸಿದ್ದಾರೆ. ಆದರೆ ಕಾಶ್ಮೀರ ಪೊಲೀಸರು ಹೇಳುತ್ತಿರುವುದೇ ಬೇರೆ. ಕಳೆದ 15 ವರ್ಷಗಳಿಂದ ಲಿಯಾಖತ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ. ಈಗ, ಜಮ್ಮು, ಕಾಶ್ಮೀರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯ ಭಾಗವಾಗಿ, ಶರಣಾಗಲು ಭಾರತಕ್ಕೆ ಆತ ಆಗಮಿಸಿದ್ದ ಎಂಬುದು ಕಾಶ್ಮೀರ ಸರ್ಕಾರದ ವಾದ. ಆದರೆ ಈ ವಿಚಾರ ಇಷ್ಟೊಂದು ಜಟಿಲವಾಗಬೇಕೇಕೆ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಲಿಯಾಖತ್‌ನ ನಿಜವಾದ ಗುರುತು ಹಾಗೂ ಆತನ ಉದ್ದೇಶಗಳನ್ನು ಪತ್ತೆಹಚ್ಚುವ ವಿಚಾರದಲ್ಲಿ ತನಿಖಾ ಸಂಸ್ಥೆಗಳು ನಿಜಕ್ಕೂ ವೃತ್ತಿಪರತೆಯನ್ನು ಪ್ರದರ್ಶಿಸಬೇಕಿವೆ. ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹಾಗೂ ದೆಹಲಿ ಪೊಲೀಸರು ತಮ್ಮಲ್ಲಿರುವ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಬೇಕಾದದ್ದು ಇಲ್ಲಿ ಮುಖ್ಯವಾಗಬೇಕೇ ಹೊರತು ಪರಸ್ಪರರ ವಿರುದ್ಧ ಕೆಸರೆರಚಾಟವಲ್ಲ. ಅಫ್ಜಲ್ ಗುರುವಿನ ಗಲ್ಲು ಶಿಕ್ಷೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈಗಾಗಲೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಈಗ ಲಿಯಾಖತ್ ಪ್ರಕರಣ ಮತ್ತೊಂದು ಮುಜುಗರಕ್ಕೆ ಕಾರಣವಾಗಿದೆ. ಆದರೆ ದೆಹಲಿ ವಿರುದ್ಧ ಕಠಿಣ ನಿಲುವು ತಾಳಿ ಕಾಶ್ಮೀರದ ಜನರ ಮೇಲೆ ಪ್ರಭಾವ ಬೀರುವಂತಹ ಅವಕಾಶವಾಗಿ ಅವರಿಗೆ ಈ ವಿವಾದ ತೆರೆದುಕೊಂಡಿರುವುದು ವಿಪರ್ಯಾಸ. ಅನೇಕ ಸಂದರ್ಭಗಳಲ್ಲಿ ದೆಹಲಿ ಪೊಲೀಸರೂ ಎಡವಟ್ಟು ಮಾಡಿಕೊಂಡಿರುವುದನ್ನು ಮರೆಯಲಾಗದು. ಇದೇನೇ ಇರಲಿ, ರಾಷ್ಟ್ರೀಯ ಭದ್ರತೆಯಂತಹ ವಿಚಾರ ರಾಜಕೀಯ ಪ್ರಹಸನವಾಗಿ ಮಾರ್ಪಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ರಾಷ್ಟ್ರದ ಸುರಕ್ಷೆ ಅಥವಾ ಭದ್ರತೆಯ ಸಂಗತಿಗಳೂ ರಾಜಕೀಯ ಮತಗಳನ್ನು ಗಳಿಸುವ ವಿಚಾರಗಳಾಗುವುದು ಸರಿಯಲ್ಲ. ಈ ಪ್ರಕರಣದ ತನಿಖೆಯನ್ನು ಈಗ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸಿದ್ದಾರೆ. ಲಿಯಾಖತ್‌ನ ಭಾರತ ಪ್ರವೇಶದ ಉದ್ದೇಶ ನಿಜಕ್ಕೂ ಶರಣಾಗತಿಯೇ ಆಗಿತ್ತು ಎಂಬುದು ಒಂದು ವೇಳೆ ತನಿಖೆಯಿಂದ ದೃಢ ಪಟ್ಟಲ್ಲಿ, ಅದು ಜಮ್ಮು ಮತ್ತು ಕಾಶ್ಮೀರದ ಶರಣಾಗತಿ ಹಾಗೂ ಪುನರ್ವಸತಿ ನೀತಿಯ ಮೇಲೆ ದುಷ್ಪರಿಣಾಮ ಬೀರುವುದು ಸಹಜ. ಗೂಢಚರ್ಯೆ ಮಾಹಿತಿಗಳ ಹಂಚಿಕೆ ಹಾಗೂ ಉತ್ತಮ ಸಮನ್ವಯದಿಂದ ಇಂತಹ ಅನಗತ್ಯ ವಿವಾದಗಳನ್ನು ತಡೆಯಬಹುದು. ಹಾಗೆಯೇ ಉಗ್ರರ ಶರಣಾಗತಿ ಹಾಗೂ ಪುನರ್ವಸತಿ ನೀತಿಯಲ್ಲಿರುವ ಅನೇಕ ಲೋಪಗಳನ್ನು ಬಗೆಹರಿಸಲೂ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.