ಕ್ರೀಡಾ ಸ್ಫೂರ್ತಿಗೆ ಕಳಂಕ ಬೇಡ ಚೆನ್ನೈಯಲ್ಲಿ ನಡೆಯುವ ಐಪಿಎಲ್ ಟ್ವೆಂಟಿ- 20 ಪಂದ್ಯಗಳಲ್ಲಿ ಶ್ರೀಲಂಕಾದ ಯಾವುದೇ ಆಟಗಾರರು ಆಡುವುದಿಲ್ಲ ಎಂಬುದು ಅಸಮರ್ಥನೀಯ. ಅಷ್ಟಕ್ಕೂ ಇದು ಆಟಗಾರರು ಕೈಗೊಂಡ ತೀರ್ಮಾನವಲ್ಲ. ಆಟಗಾರರು ಹಾಗೂ ಪ್ರೇಕ್ಷಕರ ಮೇಲೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳು ಹಾಗೂ ಐಪಿಎಲ್ ಆಡಳಿತ ಮಂಡಳಿ ಹೇರಿದ ಬಲವಂತದ ನಿರ್ಧಾರ. ಕ್ರೀಡೆಯಲ್ಲೂ ಭಾಷಾ ಭಾವೋನ್ಮಾದದ ವಿಜೃಂಭಣೆ ಮತ್ತು ವಿವೇಕದ ಕೊರತೆಗೆ ಇದೊಂದು ನಿದರ್ಶನ. ಶ್ರೀಲಂಕಾದ ವಿರುದ್ಧ ಇಲ್ಲಿನ ಜನಕ್ಕೆ ಸಿಟ್ಟಿದೆ. ಆದ್ದರಿಂದ ಚೆನ್ನೈಯಲ್ಲಿ ನಡೆಯುವ ಪಂದ್ಯಗಳಲ್ಲಿ ಲಂಕಾ ಆಟಗಾರರು ಇರಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬರೆದ ಪತ್ರ ಮತ್ತು ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಐಪಿಎಲ್ ಆಡಳಿತ ಮಂಡಳಿ ಮಣಿದದ್ದು, ಕ್ರೀಡೆಗೆ ಮಾಡಿದ ಅವಮಾನ. ಲಂಕಾ ಆಟಗಾರರು, ಅಂಪೈರ್‌ಗಳು, ಅಧಿಕಾರಿಗಳು ಅಥವಾ ಸಹಾಯಕ ಸಿಬ್ಬಂದಿ ಇದ್ದರೆ ಚೆನ್ನೈಯಲ್ಲಿ ಯಾವುದೇ ಐಪಿಎಲ್ ಪಂದ್ಯ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಜಯಲಲಿತಾ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರಧಾನಿ ತಲೆಯಾಡಿಸಿದ್ದಂತೂ ಪುಕ್ಕಲುತನದ ಪರಮಾವಧಿ. ಡಿಎಂಕೆ, ಅಣ್ಣಾಡಿಎಂಕೆಗಳ ರಾಜಕೀಯ ಮೇಲಾಟಕ್ಕೆ ಸಿಕ್ಕು ಅನೇಕ ಪ್ರಧಾನಿಗಳು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಗಳ ಮುಖಂಡರು ಹೈರಾಣಾಗಿದ್ದಾರೆ. ರಾಜಕಾರಣಕ್ಕೆ ಸೀಮಿತವಾಗಿದ್ದ ಈ ತಂತ್ರ ಈಗ ಕ್ರಿಕೆಟ್ ಆಟಕ್ಕೂ ಕಾಲಿಟ್ಟಿದೆ. `ನಮಗೆ ಆಟಗಾರರು, ಪ್ರೇಕ್ಷಕರು ಮತ್ತು ಕ್ರೀಡಾಂಗಣದ ಪ್ರತಿಯೊಬ್ಬ ಸಿಬ್ಬಂದಿಯ ಸುರಕ್ಷತೆಯೂ ಮುಖ್ಯ. ಆದ್ದರಿಂದ ಚೆನ್ನೈಯಲ್ಲಿ ಲಂಕಾ ಆಟಗಾರರನ್ನು ಆಡಿಸುವುದಿಲ್ಲ' ಎಂಬ ಐಪಿಎಲ್ ಆಡಳಿತ ಮಂಡಳಿ ನಿಲುವು ಅಸಂಬದ್ಧ. ಈ ಹಿಂದೆ ಎಷ್ಟೋ ಸಂದರ್ಭಗಳಲ್ಲಿ ಕೋಪ, ಆಕ್ರೋಶದ ವಾತಾವರಣ ಇದ್ದಾಗಲೂ ಭಾರತ- ಪಾಕ್ ಆಟಗಾರರು ಎರಡೂ ದೇಶಗಳ ನೆಲದಲ್ಲಿ ಆಡಿದ್ದಾರೆ. ಅದರಿಂದಲಾದರೂ ಪಾಠ ಕಲಿಯಬೇಕಿತ್ತು. ಸುರಕ್ಷತೆಯ ನೆಪವೊಡ್ಡಿ ಕ್ರೀಡಾ ಸ್ಫೂರ್ತಿಗೆ ಕಳಂಕ ಹಚ್ಚಬಾರದಿತ್ತು. ಈ ತೀರ್ಮಾನದಿಂದ ಚೆನ್ನೈಯ ಕ್ರೀಡಾಪ್ರೇಮಿಗಳಿಗೆ ಲಂಕಾ ಆಟಗಾರರ ಆಟ ವೀಕ್ಷಿಸುವ ಅವಕಾಶ ತಪ್ಪುತ್ತದೆ. ಐಪಿಎಲ್‌ನ ಎಲ್ಲ ತಂಡಗಳಲ್ಲೂ ಒಬ್ಬರಲ್ಲ ಒಬ್ಬರು ಲಂಕಾ ಆಟಗಾರರಿದ್ದಾರೆ. ಸಾಕಷ್ಟು ಲೆಕ್ಕಚಾರ ಮಾಡಿಯೇ ತಂಡಗಳು ಅವರನ್ನು ಹರಾಜಿನಲ್ಲಿ ಖರೀದಿಸಿವೆ. ಈಗ ಆ ಲೆಕ್ಕಾಚಾರಗಳೆಲ್ಲ ಏರುಪೇರಾಗುತ್ತವೆ. ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಲ್‌ಟಿಟಿಇಯನ್ನು ಬಗ್ಗು ಬಡಿಯುವಾಗ ಶ್ರೀಲಂಕಾ ಸೇನೆ ಅಲ್ಲಿನ ತಮಿಳರ ಮೇಲೆ ನಡೆಸಿದೆ ಎನ್ನಲಾದ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಮಿಳುನಾಡಿನ ಜನ ಪ್ರತಿಭಟಿಸುತ್ತಿದ್ದಾರೆ. ಆದರೆ ಅದೇ ಧಾಟಿಯಲ್ಲಿಯೇ ಕ್ರಿಕೆಟ್ ಆಟವನ್ನೂ ವಿರೋಧಿಸುವುದು ಕ್ರೀಡೆಗೆ ಅವಮಾನ ಮಾಡಿದಂತೆ. ಈಗಾಗಲೆ ತಮಿಳುನಾಡಿನಲ್ಲಿ ಶ್ರೀಲಂಕಾ ನಾಗರಿಕರು, ಬೌದ್ಧ ಸನ್ಯಾಸಿಗಳು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿವೆ. ಇದಕ್ಕೆ ಪ್ರತಿಯಾಗಿ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆಂಕಿಯನ್ನು ನಂದಿಸುವ ಬದಲು ಬೆದರಿಕೆಯ ತುಪ್ಪ ಹಾಕಿ ರಾಜಕಾರಣಿಗಳು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಈಗ ಕ್ರಿಕೆಟ್ ಬಲಿಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.