ಮನೆ ಕೆಡಿಸುವ ಮಾತು ಕೇಂದ್ರ ಸರ್ಕಾರ ಒಂದಲ್ಲಾ ಒಂದು ಕಾರಣದಿಂದ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿದೆ. ಸಾಲು ಸಾಲಾದ ಹಗರಣಗಳಿಂದ ಬಾಡಿಹೋಗಿದ್ದ ಯುಪಿಎಗೆ, ನಾಲಿಗೆಯ ಮೇಲೆ ಹಿಡಿತವಿಲ್ಲದ ಸಚಿವರಿಂದಲೂ ಆಗಾಗ ತೊಂದರೆ ಎದುರಾಗುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಕೇಂದ್ರ ಉಕ್ಕು ಖಾತೆ ಸಚಿವ ಬೇನಿಪ್ರಸಾದ್ ವರ್ಮಾ. ಸಮಾಜವಾದಿ ಪಕ್ಷ ಹಾಗೂ ಅದರ ಅಧ್ಯಕ್ಷ ಮುಲಾಯಂ ಸಿಂಗ್ ಅವರ ವಿರುದ್ಧ ಬೇನಿ ಮಾಡಿರುವ ಟೀಕಾ ಪ್ರಹಾರ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಮುಜುಗರ ತಂದಿದೆ. ಹಿಂದೆ ಗೃಹಸಚಿವರು ಕೂಡ ಇದೇ ರೀತಿ ಬೇಜವಾಬ್ದಾರಿ ಹೇಳಿಕೆಯ ಮೂಲಕ ಪಕ್ಷಕ್ಕೆ ಕಸಿವಿಸಿ ಉಂಟುಮಾಡಿದ್ದರು. ಇಂತಹ ವಿವಾದ ಹಸಿಯಾಗಿರುವಾಗಲೇ ಬೇನಿಪ್ರಸಾದ್ ವರ್ಮಾ, `ಮುಲಾಯಂ ಸಿಂಗ್ ಯಾದವ್ ಭಯೋತ್ಪಾದಕ' ಎಂದು ಹೇಳುವ ಮೂಲಕ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಮಾಜವಾದಿ ಪಕ್ಷದ ಸದಸ್ಯರು ಸಂಸತ್ ಕಲಾಪದ ಸಮಯದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಕೈ ಮುಗಿದು ಕ್ಷಮೆ ಯಾಚಿಸುವುದರೊಂದಿಗೆ ಈ ವಿಷಯವನ್ನು ಸಮಾಜವಾದಿ ಪಕ್ಷ ಕೈ ಬಿಟ್ಟಿತ್ತು, ಆದರೆ ಕೆಲವೇ ದಿನಗಳಲ್ಲಿ ಬೇನಿ ಪ್ರಸಾದ್ ವರ್ಮಾ ಮತ್ತೆ ಸಮಾಜವಾದಿ ಪಕ್ಷದ ಸದಸ್ಯರನ್ನು ಕೆಣಕುವ ಮೂಲಕ ಜೇನುಹುಟ್ಟಿಗೆ ಕೈಹಾಕಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ನಾಲ್ಕೇ ಸ್ಥಾನವನ್ನು ಗೆಲ್ಲುವ ಮೂಲಕ `ಅಂತಿಮ ಯಾತ್ರೆ'ಗೆ ಸಿದ್ಧತೆ ನಡೆಸಿದೆ ಎನ್ನುವ ಬೇನಿ ಮಾತಿನಲ್ಲಿ ಸ್ಥಳೀಯ ರಾಜಕೀಯ ದ್ವೇಷವೇ ಹೆಚ್ಚಾಗಿ ಕಾಣುತ್ತಿದೆ. ಅಲ್ಲದೆ, 1990 ರಲ್ಲಿ ಅಲ್ಪಸಂಖ್ಯಾತರ ವಿರುದ್ಧ ಗಲಭೆ ನಡೆದಾಗ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಜೊತೆ ಸಮಾಜವಾದಿ ಪಕ್ಷದ ನಾಯಕರು ಕೈ ಜೋಡಿಸಿದ್ದರು ಎಂದೂ ಬೇನಿಪ್ರಸಾದ್ ಹೇಳಿರುವುದು, ಇನ್ನೂ ಒಂದು ವರ್ಷ ಅಧಿಕಾರದಲ್ಲಿ ಉಳಿಯಬೇಕೆಂದು ಹಂಬಲಿಸುತ್ತಿರುವ ಕಾಂಗ್ರೆಸ್ಸಿಗೆ ತೀವ್ರ ಮುಜುಗರ ಉಂಟುಮಾಡಿದೆ. ಮೇಲಿಂದ ಮೇಲೆ ಎರಗಿ ಬಂದಿರುವ ಬಿಕ್ಕಟ್ಟುಗಳನ್ನು ನುಂಗಿಕೊಂಡೇ ಒಂಬತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಯುಪಿಎ ಮೈತ್ರಿ ಕೂಟದ ಪ್ರಧಾನಿ ಮನಮೋಹನ್‌ಸಿಂಗ್ ಅವರು ಮೈತ್ರಿ ಪಕ್ಷಗಳ ಒತ್ತಡ ತಂತ್ರವನ್ನು ನಿಭಾಯಿಸುತ್ತಲೇ, ಕಸರತ್ತಿನ ಮೂಲಕ ಆಡಳಿತ ನಡೆಸುತ್ತಿದ್ದಾರೆ. ವಿದೇಶಿ ನೇರ ಬಂಡವಾಳ ಚಿಲ್ಲರೆ ಮಾರುಕಟ್ಟೆಗೆ ಪ್ರವೇಶ ಮಾಡುವ ನೀತಿಯನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಬೆಂಬಲ ವಾಪಸು ಪಡೆದಾಗ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜಪಕ್ಷದ ಬೆಂಬಲ ಗಳಿಸಿ ಸರ್ಕಾರವನ್ನು ಉಳಿಸಿಕೊಳ್ಳಲಾಯಿತು. ಈಗ ಶ್ರೀಲಂಕಾದ ತಮಿಳರ ಪ್ರಶ್ನೆಯನ್ನು ಪ್ರಸ್ತಾಪಿಸಿ ಡಿಎಂಕೆ ಹೊರನಡೆದ ನಂತರ ಬಹುಮತ ಕಳೆದುಕೊಂಡಿರುವ ಯುಪಿಎಗೆ ಸಮಾಜವಾದಿ ಪಕ್ಷದ ಬೆಂಬಲ ಅನಿವಾರ್ಯ. ಇಂತಹ ಸಮಯದಲ್ಲಿ ಮುಲಾಯಂ ಸಿಂಗ್ ತೃತೀಯರಂಗದ ಮಾತನ್ನಾಡಿದ್ದಾರೆ. ಮೈತ್ರಿಕೂಟದ ಪಕ್ಷಗಳು ಸರ್ಕಾರದ ಬುಡವನ್ನೇ ಅಲುಗಾಡಿಸಬಲ್ಲ ಚದುರಂಗದಾಟವನ್ನು ಆಡುತ್ತಿರುವಾಗ, ಬೇನಿ ಪ್ರಸಾದ್ ವರ್ಮಾ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಇದು ಅವರ ತಲೆದಂಡಕ್ಕೂ ಕಾರಣವಾದರೆ ಆಶ್ಚರ್ಯವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.