`ಬ್ರಿಕ್ಸ್' ದೇಶಗಳ ಹೊಸ ಬ್ಯಾಂಕ್ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಆರ್ಥಿಕ ಶಕ್ತಿಗಳಾಗಿರುವ ಭಾರತ, ಚೀನಾ, ರಷ್ಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು (ಬ್ರಿಕ್ಸ್), ಡರ್ಬನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಹೊಸ ಅಭಿವೃದ್ಧಿ ಬ್ಯಾಂಕ್ ಸ್ಥಾಪಿಸುವ ಮಹತ್ವದ, ದೂರಗಾಮಿ ಪರಿಣಾಮ ಬೀರುವ ನಿರ್ಧಾರಕ್ಕೆ ಬಂದಿವೆ. ಹೋದ ವರ್ಷ ದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತವೇ ಪ್ರಸ್ತಾಪಿಸಿದ್ದ ಈ ಸಲಹೆಗೆ ಎಲ್ಲ ಐದು ಸದಸ್ಯ ದೇಶಗಳು ಈಗ ತಾತ್ವಿಕವಾಗಿ ಸಮ್ಮತಿ ನೀಡಿರುವುದು, ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆನ್ನುವ ಭಾರತದ ನಿಲುವಿಗೆ ಬೆಂಬಲ ದೊರೆತಂತೆ ಆಗಿದೆ. ಇಂತಹ ಬ್ಯಾಂಕ್ ಸ್ಥಾಪನೆ ಕಾರ್ಯಸಾಧ್ಯವಾಗಿದ್ದು, ಭವಿಷ್ಯದ ದಿನಗಳಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ವಿಪುಲ ಅವಕಾಶಗಳು ಇವೆ ಎಂದು `ಡರ್ಬನ್ ಘೋಷಣೆ'ಯಲ್ಲಿ ಅಭಿಪ್ರಾಯಪಟ್ಟಿರುವುದು ಐದೂ ದೇಶಗಳ ಬದ್ಧತೆ ಪ್ರದರ್ಶಿಸುತ್ತದೆ. ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸು ಸೌಲಭ್ಯ ಕಲ್ಪಿಸುವುದೇ ಈ ಹೊಸ ಬ್ಯಾಂಕ್‌ನ ಮುಖ್ಯ ಉದ್ದೇಶವಾಗಿರುವುದು ಸಂಪನ್ಮೂಲ ಕೊರತೆ ಎದುರಿಸುತ್ತಿರುವ ದೇಶಗಳ ಪಾಲಿಗೆ ಹೊಸ ಆಶಾಕಿರಣವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ದೀರ್ಘಾವಧಿ ಹಣಕಾಸು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯ ಕೊರತೆಯಿಂದ ಮೂಲ ಸೌಕರ್ಯಗಳನ್ನು ನಿರೀಕ್ಷಿತ ವೇಗದಲ್ಲಿ ಕಾರ್ಯಗತಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಅಭಿವೃದ್ಧಿ ಬ್ಯಾಂಕ್, ಇಂತಹ ಹಣಕಾಸು ಕೊರತೆಯನ್ನು ಶಾಶ್ವತವಾಗಿ ದೂರ ಮಾಡಿದರೆ ಬ್ಯಾಂಕ್ ಸ್ಥಾಪನೆಯ ಉದ್ದೇಶ ಸಾರ್ಥಕವಾಗಲಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಜಾಗತಿಕ ಹಣಕಾಸು ಸಂಪನ್ಮೂಲಗಳನ್ನು ಬಳಸುವುದು ಖಂಡಿತವಾಗಿಯೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಸೆಪ್ಟೆಂಬರ್ ಹೊತ್ತಿಗೆ ಹೊಸ ಬ್ಯಾಂಕ್‌ನ ಬಂಡವಾಳದ ಸ್ವರೂಪ ಮತ್ತಿತರ ಸಂಗತಿಗಳನ್ನು ಅಂತಿಮಗೊಳಿಸಲು ಕಾಲಮಿತಿ ವಿಧಿಸಿರುವುದು ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಲಾಗುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಆರಂಭಿಕ ಮೂಲ ನಿಧಿಯು ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಂಡರೆ ಮಾತ್ರ, ಹಣಕಾಸು ನೆರವನ್ನು ಪರಿಣಾಮಕಾರಿಯಾಗಿ ಒದಗಿಸಲು ಸಾಧ್ಯವಾಗಲಿದೆ ಎನ್ನುವುದನ್ನು ಪ್ರವರ್ತಕ ದೇಶಗಳು ಮರೆಯಬಾರದು. ಪ್ರತಿಯೊಂದು ದೇಶ ತಲಾ ರೂ55,000 ಕೋಟಿಗಳಷ್ಟು ಮೂಲ ಬಂಡವಾಳ ಹೂಡಬೇಕು ಎಂದು ಉದ್ದೇಶಿಸಲಾಗಿದ್ದು, ಈ ಬಗ್ಗೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ಗಳ ಆಕ್ಷೇಪಗಳನ್ನು ಪರಿಹರಿಸಿಕೊಳ್ಳುವ ಅಗತ್ಯ ಇದೆ. ಬ್ಯಾಂಕ್‌ನ ಆಡಳಿತದಲ್ಲಿ ಚೀನಾ ಕೈ ಮೇಲಾಗದಂತೆಯೂ ನೋಡಿಕೊಳ್ಳಬೇಕಾಗಿದೆ. ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ಏಷ್ಯಾ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ಇತರ ದೇಶಗಳಿಗೂ ಹೆಚ್ಚು ಪ್ರಾತಿನಿಧ್ಯ ಮತ್ತು ಅಭಿವೃದ್ಧಿಶೀಲ ದೇಶಗಳ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸುವ ಹಕ್ಕೊತ್ತಾಯಕ್ಕೆ ಪೂರಕವಾಗಿ ಹೊಸ ಅಭಿವೃದ್ಧಿ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದೆ. ಐದು ದೇಶಗಳ ನೇತೃತ್ವದಲ್ಲಿ, ಇತರ ಸಣ್ಣ - ಪುಟ್ಟ ದೇಶಗಳ ಪಾಲ್ಗೊಳ್ಳುವಿಕೆಗೂ ಅವಕಾಶ ಮಾಡಿಕೊಡಬೇಕಾಗಿದೆ. ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಈಗಾಗಲೇ ಶ್ರಮಿಸುತ್ತಿರುವ ಬಹುಪಕ್ಷೀಯ ಮತ್ತು ಪ್ರಾದೇಶಿಕ ಹಣಕಾಸು ಸಂಸ್ಥೆಗಳ ಪ್ರಯತ್ನಗಳಿಗೆ ಹೊಸ ಬ್ಯಾಂಕ್ ಕೂಡ ಕೈಜೋಡಿಸಿದರೆ ಆರ್ಥಿಕ ಅಭಿವೃದ್ಧಿ ಚಕ್ರ ಇನ್ನಷ್ಟು ವೇಗವಾಗಿ ತಿರುಗಲಿದೆ. ಬಡತನ ನಿವಾರಣೆ ಮತ್ತು ಎಲ್ಲ ದೇಶಗಳೂ ಸಮಾನವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ತನ್ನ ಆಶಯಗಳ ಸಾಕಾರಕ್ಕೆ ಹೊಸ ಬ್ಯಾಂಕ್ ಜತೆ ಸಹಕರಿಸುವುದಾಗಿ 60 ವರ್ಷಗಳಷ್ಟು ಹಳೆಯ `ವಿಶ್ವಬ್ಯಾಂಕ್' ಹೇಳಿರುವುದು ಕೂಡ ಧನಾತ್ಮಕ ಧೋರಣೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.