ಶಿಕ್ಷಣದ ಹಕ್ಕು ಬಲಪಡಿಸಿ ಆರರಿಂದ 14ನೇ ವಯಸ್ಸಿನ ಮಕ್ಕಳಿಗಾಗಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ) ಜಾರಿಯಾಗಿ ಮಾರ್ಚ್ 31ಕ್ಕೆ ಮೂರು ವರ್ಷಗಳು ತುಂಬಿವೆ. ಹೀಗಿದ್ದೂ ರಾಜ್ಯದಲ್ಲಿ 54,000 ಮಕ್ಕಳು ಶಾಲೆಗಳಿಂದ ಇನ್ನೂ ಹೊರಗೆ ಉಳಿದಿದ್ದಾರೆ. ಇದು ಈ ಕಾಯಿದೆಯ ಅನುಷ್ಠಾನದ ಲೋಪಗಳತ್ತ ಬೆರಳು ಮಾಡುತ್ತದೆ. ಹಾಗೆಯೇ, 2013ರ ಮಾರ್ಚ್ 31ರ ಒಳಗೆ, ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿರಬೇಕೆಂದು ಈ ಕಾಯಿದೆಯಡಿ ಗಡುವು ನೀಡಲಾಗಿತ್ತು. ಈಗ ಈ ಗಡುವು ಮುಗಿದಿದೆ. ಇದಕ್ಕೆ ಸಂಬಂಧಿಸಿದಂತೆ, ನಮ್ಮ ರಾಜ್ಯ ಸರ್ಕಾರ ಕೆಲವೊಂದು ಅಂಕಿಅಂಶಗಳನ್ನು ಮುಂದಿಟ್ಟಿದೆ. ಈ ಪ್ರಕಾರ, ಕುಡಿಯುವ ನೀರನ್ನು ರಾಜ್ಯದ ಎಲ್ಲಾ ಶಾಲೆಗಳಿಗೆ ಒದಗಿಸಲಾಗಿದೆ. ಹಾಗೆಯೇ ಶೇ 98 ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಶೇ 55ರಷ್ಟು ಶಾಲೆಗಳಲ್ಲಿ ಆಟದ ಮೈದಾನಗಳಿವೆ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಈ ಮಾಹಿತಿಗಳು ಪೂರ್ಣ ಸತ್ಯವಲ್ಲ ಎಂದು ಶಿಕ್ಷಣ ತಜ್ಞರು, ಮಕ್ಕಳ ಹಕ್ಕುಗಳ ಕಾರ್ಯಕರ್ತರು ವಾದಿಸಿದ್ದಾರೆ. ಹೀಗಾಗಿ ಈ ಅಂಕಿಅಂಶಗಳ ಸತ್ಯಾಸತ್ಯತೆಗಳನ್ನು ಸಾಮಾಜಿಕ ಕಾರ್ಯಕರ್ತರು ಒರೆಗೆ ಹಚ್ಚಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಧ್ಯೆ ಇರುವ ಮೂಲ ಸೌಕರ್ಯಗಳ ಕೊರತೆಯ ಅಪಾರ ಅಂತರವನ್ನು ಮುಚ್ಚುವ ಸದುದ್ದೇಶ ಈ ಕಾಯಿದೆಯಲ್ಲಿದೆ. ಇದರ ಅನುಷ್ಠಾನವನ್ನು ತ್ವರಿತಗೊಳಿಸಲು ಈ ಗಡುವನ್ನು ನೀಡಲಾಗಿತ್ತು. ಆದರೆ ಈ ನಿಟ್ಟಿನಲ್ಲಿ ಯಶಸ್ಸು ಸಾಧ್ಯವಾಗದಿರುವುದು ಆಡಳಿತದ ವೈಫಲ್ಯ. ಆರ್‌ಟಿಇ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನಕ್ಕೆ ಸೇರಿಕೊಂಡ ಮಹತ್ವದ ಮೂಲಭೂತ ಹಕ್ಕು. ಅಕ್ಷರಕ್ರಾಂತಿಯತ್ತ ಕೇಂದ್ರ ಸರ್ಕಾರ ಇರಿಸಿದಂತಹ ಮಹತ್ವದ ಹೆಜ್ಜೆ ಇದು. ತರಬೇತಿ ಪಡೆದಿರದ ಶಿಕ್ಷಕರಿಗೆ ತರಬೇತಿ ನೀಡಬೇಕಾದುದೂ ಈ ಕಾಯಿದೆಯ ಪ್ರಕಾರ ಕಡ್ಡಾಯ. 2015ರ ಮಾರ್ಚ್ 31ರೊಳಗೆ ಈ ಗುರಿ ಸಾಧನೆಯಾಗಬೇಕಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕ - ವಿದ್ಯಾರ್ಥಿ ಅನುಪಾತವನ್ನು 1:30ಕ್ಕೆ ತರಬೇಕೆಂಬ ಗುರಿಯನ್ನೂ ಈ ಕಾಯಿದೆ ಹೊಂದಿದೆ. ಈ ಗುರಿಯೂ ಇನ್ನೂ ಈಡೇರಿಲ್ಲ. ಹಾಗೆಯೇ, ಒಟ್ಟು ಪ್ರವೇಶಾತಿಯಲ್ಲಿ ಶೇಕಡ 25ರಷ್ಟು ಸೀಟುಗಳನ್ನು, ಶಾಲೆಯ ಸುತ್ತಮುತ್ತಲಿನ ಬಡ ಮಕ್ಕಳಿಗೆ ನೀಡಬೇಕೆಂಬುದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗಿದೆ. ಆದರೆ ಈ ಕ್ರಾಂತಿಕಾರಕ ಕಾರ್ಯಕ್ರಮ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬುದು ವಿಷಾದದ ಸಂಗತಿ. ಈ ಬಗ್ಗೆ ವ್ಯಾಪಕ ದೂರುಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೆ ಶೇಕಡ 25ರಷ್ಟು ಸೀಟುಗಳನ್ನು ಮೀಸಲಿರಿಸಬೇಕೆಂಬ ವಿಚಾರವೇ ವಿವಾದ, ಪ್ರಚಾರಗಳ ಕೇಂದ್ರಬಿಂದುವಾದ್ದ್ದದು ದುರದೃಷ್ಟಕರ. ಈ ವಿವಾದಗಳ ಭರಾಟೆಯಲ್ಲಿ, ಈ ಕಾಯಿದೆಯ ಇತರ ವಿಚಾರಗಳ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಸರ್ಕಾರವೂ ಹೆಚ್ಚಿನ ಕಾಳಜಿ ತೋರಿಲ್ಲ. ಹಾಗೆಯೇ, ಈಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ತಳಸಮುದಾಯಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಸಾಮಾನ್ಯ ವರ್ಗದ ಮಕ್ಕಳು ಈ ಶಾಲೆಗಳಿಂದ ದೂರ ಸರಿಯುತ್ತಿರುವಂತಹ ಪ್ರವೃತ್ತಿ ಆರೋಗ್ಯಕರ ಬೆಳವಣಿಗೆಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.