ಸಕಾರಾತ್ಮಕ ಹಾದಿಯಲ್ಲಿ ಐಒಎ ಭಾರತೀಯ ಒಲಿಂಪಿಕ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಡುವಣ ವಿವಾದ ಬಹುತೇಕ ಬಗೆಹರಿದಂತಾಗಿದೆ. ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ನೇತೃತ್ವದ ನಿಯೋಗ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಕೇಂದ್ರ ಕಚೇರಿಗೆ ತೆರಳಿ ನಡೆಸಿದ್ದ ಮಾತುಕತೆ ಯಶ ಕಂಡಿದೆ. ಐಒಸಿಯವರು ಕಳೆದ ಡಿಸೆಂಬರ್‌ನಲ್ಲಿ ಐಒಎ ಮೇಲೆ ಹೇರಿದ್ದ ಅಮಾನತು ನಿರ್ಧಾರವನ್ನು ಇನ್ನು ಎರಡು ತಿಂಗಳಲ್ಲಿ ವಾಪಸು ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಐಒಸಿ ಅಂತಹದ್ದೊಂದು ನಿರ್ಧಾರ ತೆಗೆದುಕೊಂಡಾಗ ಭಾರತದ ಒಲಿಂಪಿಕ್ ಸಂಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರಾಗಿತ್ತು. ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ನಡೆಸಿದೆ ಎನ್ನಲಾದ ಅವ್ಯವಹಾರಗಳ ತನಿಖೆ ಪ್ರಕ್ರಿಯೆ ಆರಂಭವಾದಾಗಲೇ ನಮ್ಮ ಒಲಿಂಪಿಕ್ ಸಂಸ್ಥೆಯ ಹುಳುಕುಗಳು ಒಂದೊಂದಾಗಿ ಹೊರಬೀಳತೊಡಗಿತ್ತು. ಸಂಸ್ಥೆಯ ಮುಂಚೂಣಿಯಲ್ಲಿದ್ದ ಅಧಿಕಾರಸ್ಥರ ಮೇಲೆ ಎಲ್ಲರೂ ಸಂಶಯದಿಂದ ನೋಡುವಂತಾಗಿತ್ತು. ಹದಿನಾರು ವರ್ಷ ಐಒಎ ಚುಕ್ಕಾಣಿ ಹಿಡಿದಿದ್ದ ಸುರೇಶ್ ಕಲ್ಮಾಡಿ ಮತ್ತು ಅಥ್ಲೆಟಿಕ್ ಫೆಡರೇಷನ್‌ನ ಮುಖ್ಯಸ್ಥ ಲಲಿತ್ ಭಾನೋಟ್ ಭ್ರಷ್ಟಾಚಾರದ ಆರೋಪ ಹೊತ್ತು ಸೆರೆಮನೆಗೆ ಹೋಗಬೇಕಾಯಿತು. ಆದರೆ ಹೋದ ವರ್ಷ ಐಒಎಗೆ ನಡೆದ ಚುನಾವಣೆಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವವರ ಕೈ ಮೇಲಾಗಿತ್ತು. ಇಂತಹ ಹಗರಣಗಳಿಂದ ರೋಸಿದ್ದ ಕೇಂದ್ರ ಸರ್ಕಾರ `ಕ್ರೀಡಾ ಮಾರ್ಗದರ್ಶಿ ಸೂತ್ರ'ವೊಂದನ್ನು ರೂಪಿಸಿ, ಅದನ್ನು ಅನುಸರಿಸಬೇಕೆಂದು ಆಗ್ರಹಿಸಿತು. ಒಲಿಂಪಿಕ್ ಸಂಸ್ಥೆಯ ವ್ಯವಹಾರದಲ್ಲಿ ಈ ರೀತಿ ಯಾವುದೇ ಸರ್ಕಾರದ ಹಸ್ತಕ್ಷೇಪ ಒಲಿಂಪಿಕ್ ನೀತಿಗೆ ವಿರುದ್ಧ ಎಂದು ಐಒಸಿ ಎಚ್ಚರಿಕೆ ನೀಡಿತಲ್ಲದೆ, ಕಳಂಕಿತ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದಿತ್ತು. ಐಒಸಿ ಹೇಳಿದ್ದರಲ್ಲಿ ಸದುದ್ದೇಶವಿದ್ದರೂ, ಈ ತಿಕ್ಕಾಟ ತಾರಕಕ್ಕೇರಿ ಕೊನೆಗೆ ಐಒಎಯನ್ನು ಐಒಸಿ ಅಮಾನತುಗೊಳಿಸಿತು. ಈ ದೇಶದ ಒಲಿಂಪಿಕ್ ಆಂದೋಲನಕ್ಕೆ ಇದೊಂದು ಆಘಾತ. ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ತ್ರಿವರ್ಣ ಧ್ವಜದಡಿಯಲ್ಲಿ ಸ್ಪರ್ಧಿಸಲಾಗದಂತಹ ಅವಮಾನ. ಐಒಸಿಯಿಂದ ಬರುತ್ತಿದ್ದ ಧನಸಹಾಯವೂ ನಿಂತಿತು. ಕ್ರೀಡಾಡಳಿತಗಾರರ ಅದಕ್ಷತೆ ಮತ್ತು ಅವರು ನಡೆಸಿದರೆನ್ನಲಾದ ಅವ್ಯವಹಾರಗಳಿಂದಾಗಿ ಈ ನಾಡಿನ ಕ್ರೀಡಾ ಕ್ಷೇತ್ರ ನಲುಗಿತು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿತು. ಭಾರತಕ್ಕೆ ಇದೊಂದು ಪಾಠ. ಮುಂದಿನ ದಿನಗಳಲ್ಲಿ ಕ್ರೀಡಾ ಸಂಸ್ಥೆಗಳು ಆಡಳಿತ ಮತ್ತು ಹಣಕಾಸಿನ ವ್ಯವಹಾರಗಳಿಗೆ ಸಂಬಂದಿಸಿದಂತೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕಿದೆ. ಇದಕ್ಕೆ ಪೂರಕವಾಗುವಂತೆ ಮಾರ್ಗದರ್ಶಿ ಸೂತ್ರವನ್ನು ರೂಪಿಸಲಾಗುತ್ತಿದೆ ಎಂದೂ ತಿಳಿಸಿರುವ ಕ್ರೀಡಾ ಸಚಿವರು, ಈ ದಿಸೆಯಲ್ಲಿ ಐಒಸಿ ಅಧಿಕಾರಿಗಳಿಗೂ ಮನವರಿಕೆ ಮಾಡಲಾಗಿದೆ ಎಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡಾ ಫೆಡರೇಷನ್‌ಗಳಿಗೆ ಸರ್ಕಾರ ಹಣ ನೀಡುತ್ತಿರುವುದರಿಂದ ಅಂತಹ ಸಂಸ್ಥೆಗಳು ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕೆಂದು ನಿರೀಕ್ಷಿಸುವುದು ತಪ್ಪೇನಲ್ಲ. ಒಲಿಂಪಿಕ್ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಸರ್ಕಾರ ಮೂಗುದಾರ ಹಾಕಬಾರದೆಂದು ಐಒಸಿ ಹೇಳಿರುವುದೂ ಸರಿ ಇದೆ. ಇಂತಹ ಅಭಿಪ್ರಾಯಗಳ ನಡುವೆ ಇದೀಗ ಸಮತೋಲನ ಸಾಧಿಸುವಂತಹ ಪ್ರಕ್ರಿಯೆ ಸಕಾರಾತ್ಮಕ ಹಾದಿಯಲ್ಲಿದೆ. ಇದರಿಂದ ಈ ದೇಶದಲ್ಲಿ ಕ್ರೀಡಾಕ್ಷೇತ್ರದ ಭವ್ಯ ಭವಿಷ್ಯಕ್ಕೆ ಹೊಸ ಆಯಾಮ ಸಿಕ್ಕಂತಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.