ಹುಲಿ ವಂಶವಾಹಿ ಕೊರತೆ ಆತಂಕ ಸಂಗಾತಿ ಆಯ್ಕೆಯಲ್ಲಿ ಅವಕಾಶಗಳು ಕಡಿಮೆಯಾಗಿ ಹುಲಿಗಳ ವೈವಿಧ್ಯಮಯ ವಂಶವಾಹಿ ತೀರಾ ಕಡಿಮೆಯಾಗುತ್ತಿರುವ ಅಂಶ ಸಂಶೋಧನೆಯಿಂದ ಬಹಿರಂಗವಾಗಿದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹುಲಿಗಳ ಸಂತತಿ ಅಪಾಯಕಾರಿ ಮಟ್ಟದಲ್ಲಿ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಬಗೆಬಗೆಯ ವಂಶವಾಹಿಗಳು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಿದಾಡುತ್ತಿಲ್ಲ ಎನ್ನುವ ಸಂಗತಿಯೇ ಆತಂಕಕಾರಿ. ಬ್ರಿಟಿಷ್ ಭಾರತದಲ್ಲಿ 40 ಸಾವಿರ ಸಂಖ್ಯೆಯಲ್ಲಿದ್ದ ಹುಲಿಗಳು ಇದೀಗ 1,800ಕ್ಕೆ ಇಳಿದಿವೆ. ವಿಶ್ವದ ಶೇ 60ರಷ್ಟು ಹುಲಿಗಳು ಇಲ್ಲೇ ಇವೆಯಾದರೂ, ಹುಲಿಗಳ ಆವಾಸಸ್ಥಾನದ ಪ್ರಮಾಣ ಕಳೆದ ಮೂರು ಪೀಳಿಗೆಯಲ್ಲಿ ಶೇ 50ಕ್ಕೆ ಕುಸಿದಿದೆ. ಕಾರ್ಡಿಫ್ ಜೀವವಿಜ್ಞಾನ ವಿದ್ಯಾಲಯದ ಸಂಶೋಧಕ ಮೈಕ್ ಬ್ರೋಫೋರ್ಡ್ ಅವರ ಪ್ರಕಾರ ಬ್ರಿಟಿಷ್ ಭಾರತದ ಸಂದರ್ಭದಲ್ಲಿ ಇದ್ದ ಶೇ 92ರಷ್ಟು ವಂಶವಾಹಿಗಳು ಇಂದಿನ ಹುಲಿಗಳಲ್ಲಿ ನಾಪತ್ತೆಯಾಗಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಹುಲಿಗಳ ವಂಶವಾಹಿ ಬೆರೆಯುತ್ತಿಲ್ಲ. ಕಾಡುಗಳು ಕಿರಿದಾಗುತ್ತಿದ್ದಂತೆ ಒಂದು ಕಾಡಿಗೂ ಮತ್ತೊಂದು ಕಾಡಿಗೂ ಸಂಪರ್ಕವೇ ಇಲ್ಲದಂತಾಗಿದೆ. ಹೀಗಾಗಿ ಹುಲಿಗಳ ಸಣ್ಣ ಗುಂಪಿನಲ್ಲೇ ಸಂಗಾತಿಯ ಆಯ್ಕೆ ಮತ್ತು ಸಂತಾನಕ್ರಿಯೆ ನಡೆದು, ಹೊಸ ವಂಶವಾಹಿ ಪ್ರವೇಶಕ್ಕೆ ಅವಕಾಶವೇ ಇಲ್ಲದಂತಾಗಿದೆ. ಸೋದರ ಸಂಬಂಧಿಗಳಲ್ಲೇ ಮದುವೆ ನಡೆದರೆ ಹುಟ್ಟುವ ಮಗುವಿಗೆ ಆರೋಗ್ಯ ಕ್ಷೀಣವಾಗುವುದು ಸಾಮಾನ್ಯ. ಇದೇ ಕಾರಣಕ್ಕೆ ಮೃಗಾಲಯಗಳಲ್ಲೂ ಸೋದರ ಸಂಬಂಧಿ ಹುಲಿಗಳ ನಡುವೆ ಸಂತಾನಕ್ರಿಯೆ ನಡೆಯುವುದನ್ನು ತಪ್ಪಿಸುತ್ತಾರೆ. ಹೊಸ ವಂಶವಾಹಿಯುಳ್ಳ ಹುಲಿಗಳ ಆಯ್ಕೆಯ ಅವಕಾಶವೇ ಇಲ್ಲದ ಕಾರಣದಿಂದ ಹುಲಿಗಳು ಪದೇ ಪದೇ ತಮ್ಮ ಗುಂಪಿನಲ್ಲಿರುವ ಹುಲಿಗಳನ್ನೇ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿವೆ. ಇದರಿಂದ ಯಾವುದೇ ಪರಿಸ್ಥಿತಿಯಲ್ಲೂ ಬದುಕಬಲ್ಲ ಹಾಗೂ ರೋಗ ನಿರೋಧಕ ಶಕ್ತಿ ಭಾರತೀಯ ಹುಲಿಗಳಲ್ಲಿ ಕಡಿಮೆಯಾಗುತ್ತಿದೆ ಎನ್ನುವ ಅಂಶ ಪತ್ತೆಯಾಗಿದೆ. ಈ ಎಲ್ಲಾ ಸಮಸ್ಯೆಗೂ ಮುಖ್ಯ ಕಾರಣವೆಂದರೆ ಕಾಡಿನ ನಾಶ. ಇದರಿಂದ ಹುಲಿಗಳು ಮಾತ್ರವಲ್ಲದೇ ಎಲ್ಲಾ ರೀತಿಯ ಪ್ರಾಣಿಗಳು ಸಮಸ್ಯೆ ಎದುರಿಸುತ್ತಿವೆ. ಹೊಸ ಹುಲಿಗಳು ಮತ್ತೊಂದು ಕಾಡಿನತ್ತ ಬರಬೇಕಾದರೆ ಕಾಡುಗಳ ನಡುವೆ ಸಂಪರ್ಕ ಇರಬೇಕು. ನಡುವೆ ಹೊಸದಾಗಿ ಜನವಸತಿ ಪ್ರದೇಶಗಳು ತಲೆಯೆತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇತ್ತೀಚೆಗೆ ತನ್ನ ಹಿಡಿತದ ಪ್ರದೇಶಕ್ಕಾಗಿ ಹೊಡೆದಾಡಿದ ನಾಗರಹೊಳೆಯ ಎರಡು ಹುಲಿಗಳು ಕಾಡಿನ ಅಂಚಿಗೆ ಹೋಗಿದ್ದಾಗ ವಿಷಪ್ರಾಷನಕ್ಕೆ ಬಲಿಯಾಗಿವೆ. ಬಂಡೀಪುರದ ಗುಂಡ್ರೆ ವಲಯಯಲ್ಲಿ ಸತ್ತಿದ್ದ ಹುಲಿಯ ಚರ್ಮವನ್ನು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರ ಹಿಂದೆಯೂ ವಿಷ ಹಾಕಿರುವ ಸಂಶಯ ವ್ಯಕ್ತವಾಗಿದ್ದು, ಎಲ್ಲಾ ಪ್ರಕರಣಗಳ ತನಿಖೆಯನ್ನು ಅರಣ್ಯ ಇಲಾಖೆ ಸಿಐಡಿಗೆ ಒಪ್ಪಿಸಿದೆ. ಹುಲಿಗಳಲ್ಲಿ ಹೊಸ ವಂಶವಾಹಿಗಳು ಪ್ರವೇಶಿಸಬೇಕಾದರೆ ಭಾರತದ ಎಲ್ಲಾ ಕಾಡುಗಳ ನಡುವೆ ಪರಸ್ಪರ ಆನೆ ಕಾರಿಡಾರ್ ಮಾದರಿಯ ಸಂಪರ್ಕ ಇರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ವಲಸೆ ಪ್ರಾಣಿಗಳು ಸೇರಿದಂತೆ ಹುಲಿಗಳಲ್ಲೂ ಹೊಸ ವಂಶವಾಹಿ ಪ್ರವೇಶಕ್ಕೆ ಆಸ್ಪದವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.