ಮಾತುಕತೆ ಮುನ್ನಡೆ ಚೀನಾದ ಪ್ರಧಾನಿ ಲೀ ಕೆಕಿಯಾಂಗ್ ಅವರ ಭಾರತದ ಪ್ರಥಮ ಭೇಟಿಯ ಸಂದರ್ಭದಲ್ಲಿ ನಡೆದ ಮಾತುಕತೆಗಳು ಭಾರತಕ್ಕೆ ಸ್ವಲ್ಪಮಟ್ಟಿಗೆ ತೃಪ್ತಿ ತಂದಿವೆ. ಚೀನಾದ ಜತೆ ಕೆಲವೊಂದು ವಿಷಯಗಳನ್ನು ಪ್ರಸ್ತಾಪಿಸಲು ಭಾರತ ಹಿಂದೆ ಹಿಂದೇಟು ಹಾಕುತ್ತಿತ್ತು. ಆದರೆ ಈ ಬಾರಿ ಭಾರತ ತನ್ನ ಕಳವಳಗಳನ್ನು ಮುಚ್ಚುಮರೆಯಿಲ್ಲದೆ ನೇರವಾಗಿಯೇ ಪ್ರಸ್ತಾಪಿಸಿದೆ. ಚೀನಾ - ಭಾರತ ಗಡಿಪ್ರದೇಶದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿರುವ ಉದ್ವಿಗ್ನ ಸ್ಥಿತಿ ಕುರಿತಂತಹ ಆತಂಕವನ್ನು ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ಬ್ರಹ್ಮಪುತ್ರ ನದಿಗೆ ಅಣೆಕಟ್ಟೆ ನಿರ್ಮಾಣದ ಕುರಿತ ಆತಂಕದ ವಿಚಾರವನ್ನೂ ಎತ್ತಲಾಗಿದೆ. ಆದರೆ, ಈ ಮಾತುಕತೆಯ ಎಲ್ಲಾ ವಿವರಗಳು ಲಭ್ಯವಾಗಿಲ್ಲ. ಹೀಗಿದ್ದೂ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾ ಪ್ರಧಾನಿ ಮಧ್ಯೆ ನಡೆದ ಮಾತುಕತೆಯಲ್ಲಿ ಗಡಿ ವಿವಾದದ ವಿಚಾರ ಪ್ರಾಧಾನ್ಯ ಗಳಿಸಿತ್ತು ಎಂಬುದು ಸ್ಪಷ್ಟ. ಭಾರತದ ಲಡಾಖ್ ಪ್ರದೇಶದ ಬಳಿ ಚೀನಾದ ಇತ್ತೀಚಿನ ಅತಿಕ್ರಮಣವನ್ನು ಭಾರತ ಸಮರ್ಥವಾಗಿ ಪ್ರಸ್ತಾಪಿಸಿಲ್ಲ ಎಂಬುದು ಕೆಲವರ ಆರೋಪ. ಇದು ನಿಜ ಇರಬಹುದು. ಆದರೆ ಯಾವುದೇ ಒತ್ತಡ ಹೇರಿಕೆ ಅಥವಾ ದೊಡ್ಡ ಧ್ವನಿಯಲ್ಲಿ ದೂರುವುದರಿಂದ ಈ ಸಮಸ್ಯೆಯ ಪರಿಹಾರ ಆಗದು. ಈಗ ಗಡಿಯಲ್ಲಿ ಶಾಂತಿ ಸ್ಥಾಪನೆಯ ವಿಧಿವಿಧಾನಗಳನ್ನು ರೂಪಿಸುವುದಕ್ಕಾಗಿ ವಿಶೇಷ ಪ್ರತಿನಿಧಿಗಳನ್ನು ನೇಮಕ ಮಾಡಲು ಎರಡೂ ದೇಶಗಳು ಮುಂದಾಗಿರುವುದು ಸಕಾರಾತ್ಮಕ ಹೆಜ್ಜೆ. ಗಡಿಯಲ್ಲಿನ ಶಾಂತಿ, ದ್ವಿಪಕ್ಷೀಯ ಬಾಂಧವ್ಯದ ಅಡಿಗಲ್ಲು ಎಂಬುದನ್ನು ಪ್ರಧಾನಿ ಮನಮೋಹನ್ ಸಿಂಗ್ ಸರಿಯಾಗಿಯೇ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಸ್ಪರ್ಧೆಯ ಮುಂದಾಳತ್ವದ ಹಾದಿಯನ್ನು ತೊರೆದು ಸಹಭಾಗಿತ್ವದಲ್ಲಿ ಮುನ್ನಡೆ ಸಾಧಿಸಲು ಉಭಯ ದೇಶಗಳು ಬದ್ಧವಾಗಬೇಕೆಂಬ ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಅವರ ಆಶಯವೂ ಪ್ರಸ್ತುತವಾದದ್ದು. ನಾಗರಿಕ ಪರಮಾಣು ಸಹಕಾರದಂತಹ ಹೊಸ ವಲಯಗಳಿಗೆ ಭಾರತ - ಚೀನಾ ಮಾತುಕತೆ ವಿಸ್ತಾರಗೊಂಡಿರುವುದು ಮುಖ್ಯ. ಇನ್ನು ಆರ್ಥಿಕ ಸಂಗತಿಗಳೂ ಮಾತುಕತೆಗಳಲ್ಲಿ ಪ್ರಾಮುಖ್ಯ ಗಳಿಸಿಕೊಂಡಿವೆ. ಮಾರುಕಟ್ಟೆ ಸಂಪರ್ಕ, ಹಣಹೂಡಿಕೆ ಯೋಜನೆಗಳಿಂದ ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಹೆಚ್ಚಾಗಬೇಕಿದೆ. ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯನ್ನು ಉಭಯ ದೇಶಗಳು ಆರಂಭಿಸುತ್ತಿದ್ದಂತೆಯೇ ಸ್ವಲ್ಪ ಮಟ್ಟಿನ ರಾಜಿಗಳಿಗೆ ತಮ್ಮ ರಾಷ್ಟ್ರಗಳ ಜನರನ್ನು ಸಿದ್ಧಪಡಿಸುವ ಹೊಣೆಯನ್ನು ಉಭಯ ಸರ್ಕಾರಗಳೂ ಹೊತ್ತುಕೊಳ್ಳಬೇಕಾಗಿದೆ. ಏಕೆಂದರೆ, ಗಡಿಯ ವಿಷಯದಲ್ಲಿ ಕೊಡುಕೊಳ್ಳುವಿಕೆ ಅಗತ್ಯ ಎಂಬುದು ಉಭಯತ್ರರಿಗೂ ಮನವರಿಕೆಯಾಗಬೇಕು. ಈ ವಿಚಾರದಲ್ಲಿ ಯುಪಿಎ ಸರ್ಕಾರ ಪ್ರತಿ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಸಮ್ಮತ ಪರಿಹಾರಕ್ಕೆ ಮುಂದಾಗಬೇಕು. ಗಡಿಯ ವಿಷಯದಲ್ಲಿ ನಾವು ಅವರ ಕೈಕುಲುಕುವ ಮುನ್ನ ದೇಶದ ಒಳಗೆ ಮೊದಲು ನಾವು ಒಮ್ಮತಕ್ಕೆ ಬರಬೇಕು. ಉಭಯ ದೇಶಗಳಲ್ಲೂ ಪರಸ್ಪರರ ವಿರುದ್ಧ ಬಹಳಷ್ಟು ನಕಾರಾತ್ಮಕ ಭಾವನೆಗಳಿವೆ. ಇದು ಬದಲಾಗಬೇಕು. ಈ ವಿಚಾರದಲ್ಲಿ ಮಾಧ್ಯಮಗಳು ವಹಿಸಬೇಕಿರುವ ಪಾತ್ರ ಪ್ರಮುಖವಾದುದು ಹಾಗೂ ಹೆಚ್ಚು ಹೊಣೆಗಾರಿಕೆಯದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.