`ಹಂಗಾಮಿ' ಶಿಕ್ಷಕರು ಸಾಕು ಮಗುವೊಂದರ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಾಥಮಿಕ ಶಿಕ್ಷಣ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶ ಮತ್ತು ಸಮಾಜದ ಪ್ರಗತಿಯ ಬುನಾದಿ ಅದು. ಈ ಕಾರಣಕ್ಕಾಗಿಯೇ ನಮ್ಮ ದೇಶವೂ ಸೇರಿದಂತೆ ವಿಶ್ವದೆಲ್ಲೆಡೆಯ ಜ್ಞಾನವಂತ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ತುಂಬ ಮಹತ್ವ. ನಮ್ಮಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು `ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ' ಎಂದು ಹೇಳುತ್ತಲೇ ಬಂದಿವೆ. ಸಾರ್ವತ್ರಿಕ ಶಿಕ್ಷಣ, ಶಿಕ್ಷಣ ಹಕ್ಕು ಕಾಯ್ದೆ ಜಾರಿ (ಆರ್‌ಟಿಇ) ಇದರ ಒಂದು ಭಾಗ. ಇಷ್ಟೆಲ್ಲ ಇದ್ದರೂ ಪ್ರಾಥಮಿಕ ಶಿಕ್ಷಣದ ಮೂಲಭೂತ ಅಗತ್ಯ ಎಂದೇ ಪರಿಗಣಿಸಲಾಗುವ `ಶಿಕ್ಷಕರ ನೇಮಕ' ವಿಷಯದಲ್ಲಿ ಮಾತ್ರ ಸರ್ಕಾರಗಳು ಸರಿಯಾದ ಮುತುವರ್ಜಿ ವಹಿಸುತ್ತಿಲ್ಲ. ಕಾಯಂ ಶಿಕ್ಷಕರ ಬದಲಾಗಿ ಹಂಗಾಮಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿವೆ. ಇದು ಈಗ ಸುಪ್ರೀಂ ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿಯೇ ಕೋರ್ಟ್, `ಹಂಗಾಮಿ ಶಿಕ್ಷಕರ ನೇಮಕದಿಂದ ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸುವುದರ ಜತೆಗೆ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. `ಈ ಪದ್ಧತಿ ಆಘಾತಕಾರಿ; ಶಿಕ್ಷಣ ಹಕ್ಕು ಕಾಯ್ದೆಯ ಆಶಯಗಳಿಗೆ ತದ್ವಿರುದ್ಧ' ಎಂದು ಬೇಸರ ವ್ಯಕ್ತಪಡಿಸಿದೆ. ಶಿಕ್ಷಣದ ಮೇಲಿನ ವೆಚ್ಚ ಅನುತ್ಪಾದಕ ಎಂದು ಪರಿಗಣಿಸುವ ಆಡಳಿತಶಾಹಿಯ ಧೋರಣೆಯೇ ಹಂಗಾಮಿ ನೇಮಕಾತಿ ಪ್ರವೃತ್ತಿ ಹೆಚ್ಚಲು ಕಾರಣ ಎಂಬ ಮಾತೂ ಇದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ತುಂಬಲು ನಿಯಮಿತವಾಗಿ ಭರ್ತಿ ಮಾಡುವುದನ್ನು ಬಿಟ್ಟು ಮನಸ್ಸಿಗೆ ಬಂದಂತೆ ಹಂಗಾಮಿಯಾಗಿ ನೇಮಕ ಮಾಡುವ ಸರ್ಕಾರಗಳ ಕ್ರಮ ಮುಂದಾಲೋಚನೆಯಿಂದ ಕೂಡಿದ್ದಂತೂ ಅಲ್ಲ. ಅಲ್ಲದೆ ಈ ಶಿಕ್ಷಕರಿಗೆ ಕೊಡುವ ಪಗಾರ ಪೂರ್ಣಕಾಲಿಕ ಶಿಕ್ಷಕರ ಪಗಾರದ ಕಾಲು ಭಾಗ ಮಾತ್ರ. ಸೇವಾಸ್ಥಿತಿ, ವೇತನದಲ್ಲೂ ಏಕರೂಪತೆ ಇಲ್ಲ. `ಶಿಕ್ಷಕರಾಗಲು ಬಯಸುವವರ ಶೈಕ್ಷಣಿಕ ಅರ್ಹತೆ ತೃಪ್ತಿಕರವಾಗಿಲ್ಲ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಮೂಲ ಧ್ಯೇಯವನ್ನೇ ಮರೆತು ಅಸಮರ್ಥರ ಕೈಯಲ್ಲಿ ಮಕ್ಕಳ ಭವಿಷ್ಯ ಕೊಡಲಾಗುತ್ತಿದೆ' ಎಂಬುದು ಕೋರ್ಟ್‌ನ ಕಳವಳ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರಾಥಮಿಕ ಶಾಲೆಗಳಲ್ಲಿ 11 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ನಮ್ಮಲ್ಲಿ ಪ್ರಾಥಮಿಕದಿಂದ ಹಿಡಿದು ಕಾಲೇಜುಗಳವರೆಗೂ ಅತಿಥಿ ಶಿಕ್ಷಕರ ಹೆಸರಲ್ಲಿ ಹಂಗಾಮಿ ಶಿಕ್ಷಕರ ನೇಮಕಾತಿ ವ್ಯಾಪಕವಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಕಳೆದ ವರ್ಷ 4 ಸಾವಿರ ಹಂಗಾಮಿ ಶಿಕ್ಷಕರಿದ್ದರು. ಇವರಿಗೆ ತಿಂಗಳಿಗೆ ಕೊಡುತ್ತಿದ್ದ ಸಂಭಾವನೆ ಕೇವಲ 5 ಸಾವಿರ ರೂಪಾಯಿ. ಹೀಗಿರುವಾಗ ಸಮರ್ಪಕ ಅರ್ಹತೆ ಇಲ್ಲದ ಇಂಥ ಶಿಕ್ಷಕರಿಂದ ಎಂಥ ಪಾಠ ನಿರೀಕ್ಷಿಸಲು ಸಾಧ್ಯ? ಈ ವಿಷಯದಲ್ಲಿ ಸರ್ಕಾರಗಳ ಕಿವಿ ಹಿಂಡಿದ ಕೋರ್ಟ್‌ನ ಕ್ರಮ ಸರಿಯಾಗಿಯೇ ಇದೆ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಪ್ರಾಥಮಿಕ ಶಿಕ್ಷಣದ ವಿಷಯದಲ್ಲಿ ಚೆಲ್ಲಾಟ ನಿಲ್ಲಿಸಬೇಕು. ಕಾಯಂ ನೇಮಕಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.