ಅತಿಸಾರಕ್ಕೆ ಲಸಿಕೆ ಎಳೆಯ ಮಕ್ಕಳನ್ನು ಕಾಡುವ ಅತಿಸಾರಗಳಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ ಅತಿ ಸಾಮಾನ್ಯವಾದುದು ರೋಟಾವೈರಸ್ ಅತಿಸಾರ. ರೋಟಾವೈರಸ್ ಅತಿಸಾರ ತಡೆಗಟ್ಟಲು ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದು ಮಹತ್ವದ ಸಂಗತಿ. ಸಾರ್ವಜನಿಕ ಆರೋಗ್ಯ ಸುಧಾರಣೆಯ ಪ್ರಯತ್ನಗಳಲ್ಲಿ ಇದು ಮುಖ್ಯವಾದದ್ದು. ರೋಟಾವೈರಸ್ ಅತಿಸಾರ ವಿಶ್ವದಾದ್ಯಂತ ಪ್ರತಿ ವರ್ಷ 4.5 ಲಕ್ಷ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಲ್ಲಿ ಶೇ 22ರಷ್ಟು ಮಕ್ಕಳು ಭಾರತದವರಾಗಿರುತ್ತಾರೆ ಎಂಬುದು ಆತಂಕಕಾರಿ. ಹುಟ್ಟಿದ ಮೊದಲ ವರ್ಷವೇ ಅತಿಸಾರದಿಂದ ಹೆಚ್ಚಿನ ಮಕ್ಕಳು ಸಾವಿಗೀಡಾಗುತ್ತವೆ. ಈಗ ಈ ಲಸಿಕೆ ಶೇ 75ರಷ್ಟು ಸಾವುಗಳನ್ನು ಕಡಿಮೆ ಮಾಡುತ್ತದೆ ಎಂಬುದು ಪ್ರಯೋಗಗಳಲ್ಲಿ ಸಾಬೀತಾಗಿದೆ. ಹೊಸದಾಗಿ ಅಭಿವೃದ್ಧಿ ಪಡಿಸಲಾಗಿರುವ ಈ ಲಸಿಕೆಯ ಮತ್ತೊಂದು ಆಕರ್ಷಣೀಯ ಅಂಶ ಎಂದರೆ, ಇದರ ಬೆಲೆ ಅತ್ಯಂತ ಕಡಿಮೆ ಇರುವುದು. ಈವರೆಗೆ ಲಭ್ಯವಿದ್ದ ಲಸಿಕೆಗಳ ಬೆಲೆ ಪ್ರತಿ ಬಾರಿಗೆ ರೂ 1000ಕ್ಕೂ ಹೆಚ್ಚು. ಈ ಲಸಿಕೆಯನ್ನು ಮಗುವಿಗೆ ಮೂರು ಬಾರಿ ಕೊಡಿಸುವುದು ಕಡ್ಡಾಯ. ಈಗ ಈ ಹೊಸ ಲಸಿಕೆ ರೂ 54 ಅಥವಾ ರೂ 51ಕ್ಕೆ ಲಭ್ಯವಾಗಲಿದೆ ಎಂಬುದು ಸಂತಸದ ಸಂಗತಿ. ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳ ಸಾವಿಗೆ ಅತಿಸಾರವೇ ಮುಖ್ಯ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ಅಗತ್ಯ ಇರುವೆಡೆ ಈ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳಬೆಕಾದುದು ಸರ್ಕಾರದ ಕರ್ತವ್ಯ. ನಗರಗಳ ಕೊಳೆಗೇರಿಗಳು, ಗ್ರಾಮಗಳು ಹಾಗೂ ಆದಿವಾಸಿ ಪ್ರದೇಶಗಳಲ್ಲಿನ ಬಡಜನರಿಗೆ ಈ ಲಸಿಕೆ ಲಭ್ಯವಾಗಬೇಕು. ಜೊತೆಗೆ, ಅತಿಸಾರ ಬರದಂತೆ ತಡೆಯುವುದೂ ಸರ್ಕಾರದ ಆದ್ಯತೆಯ ಕ್ರಮಗಳಲ್ಲಿ ಒಂದಾಗಬೇಕು. ಸ್ವಚ್ಛತೆಯ ಕೊರತೆ, ಅಶುದ್ಧ ಕುಡಿಯುವ ನೀರು, ಕೊಳಕಿನ ಪರಿಸರಗಳು ಅತಿಸಾರಕ್ಕೆ ಮುಖ್ಯ ಕಾರಣ. ಈ ಸಮಸ್ಯೆಗಳ ಪರಿಹಾರಕ್ಕೂ ಆದ್ಯತೆ ಸಿಗಬೇಕು. ಮತ್ತೊಂದು ವಿಶೇಷ ಎಂದರೆ ಈ ಲಸಿಕೆಯನ್ನು ಭಾರತದಲ್ಲೇ ಅಭಿವೃದ್ಧಿ ಪಡಿಸಿ ಪ್ರಯೋಗಗಳಿಗೆ ಒಳಪಡಿಸಲಾಗಿದೆ. ವೈದ್ಯಕೀಯ ಸಂಶೋಧನೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಫಲ ಈ ಲಸಿಕೆ. ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಈ ಸಂಶೋಧನೆಗೆ ಹಣಕಾಸು ನೆರವು ನೀಡಿತ್ತು. ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು 18 ವರ್ಷಗಳಷ್ಟು ಕಾಲ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆ ಅಗತ್ಯವಾಯಿತು. ವಾಸ್ತವವಾಗಿ ಸಾರ್ವಜನಿಕ ಆರೋಗ್ಯ ವಿಸ್ತರಣೆ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಆ ಮೂಲಕ, ಅತಿಸಾರದಂತಹ ಆರೋಗ್ಯ ಸಮಸ್ಯೆಗಳಿಂದ ಸಾವುಗಳು ಸಂಭವಿಸುವುದನ್ನು ತಪ್ಪಿಸುವುದು ಸಾಧ್ಯ. ರಾಷ್ಟ್ರದಲ್ಲಿ ಪೋಲಿಯೊ ನಿರ್ಮೂಲನವಾಗಿರುವಂತೆ ಅತಿಸಾರ ಕೂಡ ಭಾರತದಿಂದ ತೊಲಗಬೇಕು ಎಂಬುದು ನಮ್ಮ ಗುರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.