ಬರಲಿದೆ ಶುದ್ಧ ನೀರಿನ ಕಾಲ ಕುಡಿಯಲು ಶುದ್ಧ ನೀರು, ಇರಲು ಒಂದು ಸೂರು. ಶ್ರೀಸಾಮಾನ್ಯನಿಗೆ ಇಷ್ಟೂ ಸೌಲಭ್ಯವನ್ನು ನೀಡದ ಸರ್ಕಾರ ಅದೆಂಥಾ ಸರ್ಕಾರ? ರಾಜ್ಯದ ಬಹುತೇಕ ಎಲ್ಲ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಕೊರತೆ ಇದೆ ಎಂದು ಸರ್ಕಾರವೇ ಪ್ರಕಟಿಸುವ ಮೂಲಕ ಹಿಂದಿನ ಸರ್ಕಾರಗಳ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ರಾಜ್ಯದ 30 ಸಾವಿರ ಅಂಗನವಾಡಿಗಳಿಗೆ ಕುಡಿಯುವ ನೀರಿನ ಸಂಪರ್ಕವೇ ಇಲ್ಲ. ಮೂರು ವರ್ಷಗಳಲ್ಲಿ ಅಂಗನವಾಡಿಗಳಿಗೆ ನೀರಿನ ಸಂಪರ್ಕ ಒದಗಿಸುವ ತೀರ್ಮಾನ ತೆಗೆದುಕೊಂಡಿದ್ದ ಹಿಂದಿನ ಸರ್ಕಾರಕ್ಕೆ ಕಾಲಕ್ರಮೇಣ ಅದು ಮರೆತೇಹೋಯಿತು. ಆದ್ದರಿಂದ ಹೊಸ ಸರ್ಕಾರ ಐದು ಸಾವಿರ ಗ್ರಾಮಗಳಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ತೀರ್ಮಾನ ತೆಗೆದುಕೊಂಡಿರುವುದು ಸಕಾಲಿಕ ತೀರ್ಮಾನ. ಆರಂಭದಲ್ಲೇ ಗ್ರಾಮೀಣಾಭಿವೃದ್ಧಿ ಸಚಿವರು ಕುಡಿಯುವ ನೀರಿಗೆ ಆದ್ಯತೆ ನೀಡಿರುವುದು ಮೆಚ್ಚುವಂತಹ ಕೆಲಸ. ರಾಜ್ಯದಲ್ಲಿ ಈಗಾಗಲೇ 687 ಕಡೆ ಈ ರೀತಿಯ ಘಟಕಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಐದು ಸಾವಿರ ಗ್ರಾಮಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ನಿರ್ಧಾರ. ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆ. ಶುದ್ಧ ಕುಡಿಯುವ ನೀರನ್ನು ಒದಗಿಸುವುದಕ್ಕೆ ಸಂಪನ್ಮೂಲದ ಕೊರತೆ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಕುಡಿಯವ ನೀರಿನ ಸಮರ್ಪಕ ಪೂರೈಕೆಗಾಗಿಯೇ ಜಿಲ್ಲಾ ಪಂಚಾಯಿತಿಗಳಿಗೆ ಹಣದ ಹರಿವು ಇದೆ. ಬೇಸಿಗೆಯಲ್ಲಂತೂ ಕಲುಷಿತ ನೀರಿನಿಂದ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಶಾಶ್ವತ ನೀರು ಸರಬರಾಜು ಯೋಜನೆಗಳನ್ನು ಕಾರ್ಯಗತಗೊಳಿಸಲು ಹಲವು ಬಗೆಯ ಕಾರ್ಯಕ್ರಮಗಳು ಅನುಷ್ಠಾನದಲ್ಲಿವೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರವೂ ಕೈಜೋಡಿಸಿ ಸ್ಥಳೀಯರ ಪಾಲುದಾರಿಕೆಯೊಂದಿಗೆ ಜಾರಿಗೊಳ್ಳಬೇಕಾದ ಯೋಜನೆಗಳೂ ಇವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ರೂ.1.400 ಕೋಟಿ ಮೀಸಲಿಟ್ಟಿದೆ. ಆದರೂ ಜನರಿಗೆ ಸುರಕ್ಷಿತ ಎನ್ನುವಂತಹ ಶುದ್ಧ ನೀರಿನ ಪೂರೈಕೆ ಆಗುತ್ತಿಲ್ಲ. ಇದು ಇಡೀ ವ್ಯವಸ್ಥೆಯ ಲೋಪ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ರೋಗರುಜಿನಗಳಿಗೆ ಕಲುಷಿತ ನೀರಿನ ಬಳಕೆಯೇ ಮುಖ್ಯ ಕಾರಣ. ಕಲುಷಿತ ನೀರಿನಿಂದಾಗಿ ಜನ ಅಸ್ವಸ್ಥಗೊಂಡ, ನಾನಾ ಕಾಯಿಲೆಗಳಿಗೆ ತುತ್ತಾದ ವರದಿಗಳೂ ಈ ಹಿಂದೆ ವರದಿಯಾಗಿವೆ. ಇದು ಸರ್ಕಾರಕ್ಕೆ ಗೊತ್ತಿರದ ಸಂಗತಿಯೇನಲ್ಲ. ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲೆ ಕುಡಿಯುವ ನೀರಿನ ಪ್ರಾಯೋಗಿಕ ಶುದ್ಧೀಕರಣ ಘಟಕ ಖಾಸಗಿ ಉಪಕ್ರಮದಲ್ಲಿ ಸಾಧ್ಯವಾಗಿರುವಾಗ ಇಡೀ ರಾಜ್ಯದಲ್ಲಿ ಅಂತಹ ಯೋಜನೆಗಳು ಏಕೆ ಸಾಧ್ಯವಿಲ್ಲ? ಈ ಯೋಜನೆಗೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು. ಅದನ್ನು ತರುವುದು ಈ ಸರ್ಕಾರಕ್ಕೆ ಸಾಧ್ಯವಿದೆ. ಇದು ಜನೋಪಯೋಗಿ ಕಾರ್ಯಕ್ರಮವಾದ್ದರಿಂದ ಜನರೂ ಇದರಲ್ಲಿ ಕೈಗೂಡಿಸುವುದು ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ನೆರವನ್ನೂ ಪಡೆಯಲಾಗುವುದು ಎಂದು ಸಚಿವರು ಹೇಳಿರುವುದು ಸಕಾಲಿಕ ಚಿಂತನೆ. ಮೂಲ ಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎನ್ನುವುದನ್ನು ಮರೆಯದಿರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.