ಹಗರಣಗಳ ಕರಿನೆರಳು ಯುಪಿಎ ಸರ್ಕಾರ ತನ್ನ ಎರಡನೆ ಅವಧಿಯ ನಾಲ್ಕನೆಯ ವರ್ಷಾಚರಣೆಯಲ್ಲಿ ಸಂಭ್ರಮಪಡುವಂತಹದ್ದು ಏನೂ ಇಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾರಥ್ಯವೇ ತೀವ್ರ ಟೀಕೆಗೆ ಗುರಿಯಾಗುತ್ತಿರುವ ದಿನಗಳು ಇವು. ವಾಸ್ತವವಾಗಿ ಜನರನ್ನು ನೇರವಾಗಿ ತಟ್ಟುವ ಹಣದುಬ್ಬರ, ಅತಿಯಾದ ಭ್ರಷ್ಟಾಚಾರ, ರೈತರ ಸಮಸ್ಯೆ, ಜನರಿಗೆ ಸ್ವಂತ ನೆಲೆ ಇನ್ನೂ ಅಸಾಧ್ಯವಾಗಿರುವುದು, ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ - ಕೇಂದ್ರ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳಲು ಪ್ರಮುಖ ಕಾರಣಗಳು. ಪ್ರಧಾನಿ ಸಿಂಗ್ ಆರ್ಥಿಕ ತಜ್ಞರು. ಆದರೆ ಅವರ ಬುದ್ಧಿಮತ್ತೆಯ ಲಾಭ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕಾಣುತ್ತಿಲ್ಲ. `ಡಮ್ಮಿ ಪ್ರಧಾನಿ', `ನಿಷ್ಕ್ರಿಯ ಪ್ರಧಾನಿ', `ಸೋನಿಯಾ ಕೈಗೊಂಬೆ' - ಈ ಮುಂತಾದ ಅಪಹಾಸ್ಯದ, ವ್ಯಂಗ್ಯದ ಬಾಣಗಳಿಗೆ ವಿರೋಧಿಗಳಿಂದ ತುತ್ತಾಗುವುದು ಪ್ರಧಾನಿ ಸ್ಥಾನದ ವರ್ಚಸ್ಸಿಗೆ ಧಕ್ಕೆ. ಇದು ದೇಶದ ಒಳಗೆ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸರ್ಕಾರದ ವರ್ಚಸ್ಸಿಗೆ ತೀವ್ರ ಹೊಡೆತ ನೀಡುವುದನ್ನು ನಿರಾಕರಿಸುವಂತಿಲ್ಲ. ಕಾಮನ್‌ವೆಲ್ತ್ ಕ್ರೀಡೆ, 2ಜಿ ತರಂಗಾಂತರ ಹಾಗೂ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಗಳಲ್ಲಿ ಹಲವು ಲಕ್ಷ ಕೋಟಿ ರೂಪಾಯಿಗಳು ಬೊಕ್ಕಸಕ್ಕೆ ನಷ್ಟವಾಗಿರುವುದನ್ನು ಮಹಾಲೇಖಪಾಲರ ವರದಿಗಳು ಬಹಿರಂಗಪಡಿಸಿವೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಧಾನಿ ಕಚೇರಿಯ ಪಾತ್ರವೂ ಪ್ರಸ್ತಾಪವಾಗಿದೆ. ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪ್ರಧಾನಿಯವರ ವೈಫಲ್ಯ ದುರ್ಬಲ ಆಡಳಿತದ ದ್ಯೋತಕವಾಗಿದೆ. ಯುಪಿಎ ಸರ್ಕಾರ ಮೊದಲ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಂತಹ ಪ್ರಗತಿಪರ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಎಲ್ಲರನ್ನೂ ಒಳಗೊಳ್ಳುವಂತಹ ಅಭಿವೃದ್ಧಿಗೆ ಇದು ಪೂರಕವಾಗಿತ್ತು. ಎರಡನೇ ಅವಧಿಗೆ ಯುಪಿಎ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಇದು ಸಹಕಾರಿಯಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಯುಪಿಎ ಸರ್ಕಾರದ ಸಾಧನೆ ಮಂಕಾಗಿದೆ. ಆರ್ಥಿಕ ವೃದ್ಧಿ ದರ ಕುಸಿತ ಕಂಡಿದೆ. ಸಾಲು ಸಾಲು ಹಗರಣಗಳು ಸರ್ಕಾರದ ಮೇಲೆ ಕರಿ ನೆರಳು ಚಾಚಿವೆ. ನಿರಂತರವಾಗಿ ಭ್ರಷ್ಟಾಚಾರದ ಹಗರಣಗಳು ವರದಿಯಾಗುತ್ತಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದಿರುವ ಪ್ರವೃತ್ತಿಯಂತೂ ಅಕ್ಷಮ್ಯ. ಯುಪಿಎ ಸರ್ಕಾರ ತನ್ನ ಎರಡು ಅವಧಿಗಳಲ್ಲಿ ಒಂಬತ್ತು ವರ್ಷ ಪೂರೈಸಿ ಹತ್ತನೇ ವರ್ಷಕ್ಕೆ ಈಗ ಕಾಲಿರಿಸಿದೆ. ಮುಂದಿನ ಸಾರ್ವತ್ರಿಕ ಚುನಾವಣೆ ಸನಿಹದ್ಲ್ಲಲೇ ಇದೆ. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಹಗರಣಗಳ ಕುರಿತಂತೆ ಕೇಂದ್ರದ ಸಂವೇದನಾರಹಿತ ನಡವಳಿಕೆಗಳು ಜನಮಾನಸದಲ್ಲಿ ಅಚ್ಚೊತ್ತಿವೆ. ನಾಲ್ಕನೆಯ ವರ್ಷದ ಸಂಭ್ರಮಾಚರಣೆಯಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಯಾದವ್ ದೆಹಲಿಯಲ್ಲಿದ್ದರೂ ಸಮಾರಂಭದಲ್ಲಿ ಭಾಗಿಯಾಗಲಿಲ್ಲ. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಭಾಗಿಯಾಗದೆ ತಮ್ಮ ಆಪ್ತ ಸತೀಶ್ ಮಿಶ್ರಾ ಅವರನ್ನು ಭೋಜನ ಕೂಟಕ್ಕೆ ಕಳುಹಿಸಿದ್ದು ಅಸಮಾಧಾನದ ಸಂಕೇತವನ್ನು ರವಾನಿಸಿದಂತೆ ಆಗಿದೆ. ಜೊತೆಗೆ ಸಾಧನೆ ವರದಿಯಲ್ಲಿ ಕೃಷಿ ಕ್ಷೇತ್ರವನ್ನು ಪ್ರಮುಖವಾಗಿ ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಯುಪಿಎ ಪ್ರಮುಖ ಅಂಗಪಕ್ಷ ಎನ್‌ಸಿಪಿ ಸಹ ಅಸಮಾಧಾನಗೊಂಡಿದೆ. ಈ ಬೆಳವಣಿಗೆಗಳು ಹಾಗೂ ಹೇಳಿಕೊಳ್ಳುವ ಸಾಧನೆಯೂ ಬೆನ್ನಿಗಿಲ್ಲದೆ ಮುಂಬರುವ ಚುನಾವಣೆಯಲ್ಲಿ ಮತದಾರರನ್ನು ಎದುರುಗೊಳ್ಳುವುದು ಯುಪಿಎಗೆ ಕ್ಲಿಷ್ಟಕರವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.