ಶುಲ್ಕ ನಿಗದಿ ಗೊಂದಲ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಮತ್ತು ಶುಲ್ಕ ವಿಷಯದಲ್ಲಿ ಪ್ರತಿವರ್ಷ ಒಂದಲ್ಲ ಒಂದು ಬಗೆಯ ಗೊಂದಲ ಇದ್ದೇ ಇರುತ್ತದೆ. ಪ್ರವೇಶ ಶುಲ್ಕ ನಿಗದಿ ವಿಷಯದಲ್ಲಿ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ಒಮ್ಮತ ಮೂಡದ ಕಾರಣ ಗೊಂದಲ ಈ ಬಾರಿಯೂ ಮುಂದುವರಿದಿದೆ. ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಪಟ್ಟು ಹಿಡಿದಿರುವ ಕಾರಣ ಅನಿಶ್ಚಿತ ಸ್ಥಿತಿ ತಲೆದೋರಿದೆ. ಹತ್ತೊಂಬತ್ತು ವರ್ಷಗಳ ಹಿಂದೆ ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಪದ್ಧತಿ ಜಾರಿಗೆ ಬಂದಿತು. ಅನುದಾನರಹಿತ ಖಾಸಗಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳಲ್ಲಿ ಪಾಲು ಪಡೆಯುವ ಮತ್ತು ಶುಲ್ಕ ನೀತಿಯನ್ನು ಜಾರಿಗೆ ತರುವ ಸಂಬಂಧ ಕರ್ನಾಟಕ ಸರ್ಕಾರ ದೇಶದಲ್ಲೇ ಮಾದರಿ ಎನ್ನುವಂತಹ ವೃತ್ತಿ ಶಿಕ್ಷಣ ನೀತಿಯನ್ನು ರೂಪಿಸಿತು. ಇದರ ಪರಿಣಾಮವಾಗಿ ಪ್ರತಿಭಾವಂತ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಪ್ರವೇಶ ಮತ್ತು ವ್ಯಾಸಂಗ ಕೈಗೆಟುಕುವಂತಾಯಿತು. ಆದರೆ, ಶುಲ್ಕ ನಿಗದಿ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಕಾಲೇಜುಗಳ ಆಡಳಿತ ಮಂಡಳಿಗಳ ಬಳಿ ಸರ್ಕಾರಕ್ಕೆ ಅಂಗಲಾಚುವ ಸ್ಥಿತಿ ಬಂದಿರುವುದು ವಿಷಾದನೀಯ. ಶುಲ್ಕ ನಿಗದಿ ವಿಷಯ ಕೊನೆ ಗಳಿಗೆಯವರೆಗೂ ಕಗ್ಗಂಟಾಗಿ ಪರಿಣಮಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ಹೆಚ್ಚಿಸುತ್ತಿದೆ. ಈ ಕುರಿತ ಗೊಂದಲ ಪ್ರತಿವರ್ಷ ಮರುಕಳಿಸುವುದನ್ನು ತಪ್ಪಿಸಲು ಸರ್ಕಾರ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ವೃತ್ತಿಪರ ಕೋರ್ಸ್‌ಗಳ ಪ್ರವೇಶ ಮತ್ತು ಶುಲ್ಕ ನಿಗದಿಯನ್ನು ನಿಯಂತ್ರಿಸುವ ಕಾಯ್ದೆಯನ್ನು ಸರ್ಕಾರ 2006ರಲ್ಲೇ ರೂಪಿಸಿದೆಯಾದರೂ ಅದನ್ನು ಇಲ್ಲಿಯವರೆಗೂ ಜಾರಿಗೊಳಿಸಿಲ್ಲ. ಮಾತುಕತೆ ಮೂಲಕ ಮೂಡುವ ಒಪ್ಪಂದದ ಅನುಸಾರ ಶುಲ್ಕ ನಿಗದಿಯಾಗುತ್ತಿದೆ. ಕಾಯ್ದೆ ಒಮ್ಮೆ ಅನುಷ್ಠಾನಗೊಂಡರೆ ಶುಲ್ಕ ನಿಗದಿ ಹೊಣೆ ತಜ್ಞರ ಸಮಿತಿಯ ಹೆಗಲೇರುತ್ತದೆ. ಕಾಲೇಜುಗಳು ಹೊಂದಿರುವ ಸೌಕರ್ಯ, ಸವಲತ್ತುಗಳನ್ನು ಆಧರಿಸಿ ಒಂದೊಂದು ಕಾಲೇಜಿಗೂ ಒಂದೊಂದು ಬಗೆಯ ಶುಲ್ಕ ನಿಗದಿ ಆಗಲಿದೆ. ಕಾಯ್ದೆ ಜಾರಿಗೊಳಿಸುವ ಇಂಗಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ಸಲುವಾಗಿ ಸದ್ಯದಲ್ಲೇ ಇಲಾಖೆ ಮಟ್ಟದಲ್ಲಿ ಸಭೆ ನಡೆಸುವುದಾಗಿ ಹೇಳಿದ್ದಾರೆ. ಬಳಿಕ ಆಡಳಿತ ಮಂಡಳಿಗಳೊಂದಿಗೂ ಚರ್ಚಿಸುವುದಾಗಿ ತಿಳಿಸಿದ್ದಾರೆ. ಆದರೆ, ಕಾಯ್ದೆ ಜಾರಿ ವಿಷಯದಲ್ಲಿ ಆಡಳಿತ ಮಂಡಳಿಗಳಲ್ಲಿ ಸಹಮತ ಇದ್ದಂತೆ ಇಲ್ಲ. ಅವರಲ್ಲಿ ಸಹಮತ ಮೂಡಿಸುವುದೂ ಸೇರಿದಂತೆ ಅನುಷ್ಠಾನ ಹಾದಿಯಲ್ಲಿ ಎದುರಾಗಬಹುದಾದ ಅಡೆತಡೆ ನಿವಾರಣೆಗೆ ಆದ್ಯತೆ ನೀಡಿ, ವೃತ್ತಿ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳ ಆತಂಕ ನಿವಾರಿಸಬೇಕು. ವೃತ್ತಿ ಶಿಕ್ಷಣದ ಬಹುಪಾಲು ಕಾಲೇಜುಗಳು ಆಡಳಿತ ಪಕ್ಷದ ರಾಜಕಾರಣಿಗಳ ಹಿಡಿತದಲ್ಲಿವೆ. ಈ ಮುಖಂಡರೊಡನೆ ಮಾತನಾಡಿ ಗ್ರಾಮೀಣ ಮತ್ತು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಹೊರೆ ಆಗದಂತೆ ಶುಲ್ಕ ನಿಗದಿ ಮಾಡಲು ಅವರ ಮನವೊಲಿಸಬೇಕು. ಖಾಸಗಿ ಕಾಲೇಜುಗಳ ಒಕ್ಕೂಟದ ಒತ್ತಡಕ್ಕೆ ಸರ್ಕಾರ ಮಣಿಯದೆ ವಿದ್ಯಾರ್ಥಿಗಳ ಹಿತರಕ್ಷಣೆಗೆ ನಿಲ್ಲಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.