ಅಸಮಾನತೆಯ ಅಭಿವೃದ್ಧಿ ರಾಜ್ಯದಲ್ಲಿನ ಅಸಮಾನ ಅಭಿವೃದ್ಧಿಗೆ ಕನ್ನಡಿ ಹಿಡಿಯುತ್ತದೆ 2011ರ ಜನಗಣತಿಯ ಅಂತಿಮ ಅಂಕಿಅಂಶಗಳು. ಲಿಂಗಾನುಪಾತ, ಸಾಕ್ಷರತೆ ಪ್ರಮಾಣ ಹಾಗೂ ಮಕ್ಕಳ ಲಿಂಗಾನುಪಾತಗಳಿಗೆ ಸಂಬಂಧಿಸಿದಂತೆ ಅಪಾರ ಅಂತರಗಳಿರುವುದು ಈ ಅಂಕಿಅಂಶಗಳಿಂದ ವ್ಯಕ್ತವಾಗುತ್ತದೆ. ಅಭಿವೃದ್ಧಿ ಪಥದಲ್ಲಿ ಹಿಂದುಳಿದ ಉತ್ತರ ಕರ್ನಾಟಕದ ಜಿಲ್ಲೆಗಳು ಈಗಲೂ ಹಿಂದುಳಿದಿರುವುದು ನಮ್ಮ ಅಭಿವೃದ್ಧಿ ನೀತಿಗಳ ಲೋಪಗಳಿಗೆ ಸಾಕ್ಷಿ. ರಾಜ್ಯದ ಒಟ್ಟು ಜನಸಂಖ್ಯೆ 6.10ಕೋಟಿಯಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು 96.21ಲಕ್ಷ ಜನರಿದ್ದಾರೆ. ಎರಡನೆಯ ಸ್ಥಾನ 47.79ಲಕ್ಷ ಜನರಿರುವ ಬೆಳಗಾವಿ ಜಿಲ್ಲೆಗೆ ಸಂದಿದೆ. ಪ್ರತಿ ಚದರ ಕಿಮೀ ವಿಸ್ತೀರ್ಣದಲ್ಲಿ 4381ರಷ್ಟು ಜನಸಾಂದ್ರತೆ ಹೊಂದಿದೆ ಬೆಂಗಳೂರು ನಗರ. ರಾಜ್ಯದ ಸರಾಸರಿ ಜನಸಾಂದ್ರತೆ 319 ಎಂಬುದನ್ನು ಗಮನಿಸಿದಲ್ಲಿ ಬೆಂಗಳೂರಿನ ಜನದಟ್ಟಣೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಊಹಿಸಬಹುದು. ರಾಜ್ಯದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡವರು ಹಾಗೂ ಕೃಷಿ ಕಾರ್ಮಿಕರ ಸಂಖ್ಯೆಯಲ್ಲಿ ಶೇ6.4ರಷ್ಟು ಇಳಿಕೆ ಕಂಡು ಬಂದಿದೆ. ಆದರೆ ಪರ್ಯಾಯ ಉದ್ಯೋಗ ಅರಸಿ ಬೆಂಗಳೂರು ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ದಶಕದಲ್ಲಿ ಬೆಂಗಳೂರಿನ ಜನಸಂಖ್ಯೆ ಸುಮಾರು 30ಲಕ್ಷದಷ್ಟು ಹೆಚ್ಚಾಗಲು ಇದೂ ಕೂಡ ಹಲವು ಕಾರಣಗಳಲ್ಲಿ ಒಂದು. ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು, ರಾಜ್ಯದ ಇತರೆಡೆಗಳಿಗಿಂತ ಅತಿ ವೇಗವಾಗಿ ಬೆಳೆಯುತ್ತಿದೆ. ಆದರೆ ಬೆಳೆಯುತ್ತಿರುವ ಈ ನಗರ ಲಿಂಗಾನುಪಾತ ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನ ಪಡೆದಿರುವುದು ಆತಂಕಕಾರಿ. ಬೆಂಗಳೂರು ನಗರದಲ್ಲಿ ಪ್ರತಿ ಸಾವಿರ ಪುರುಷರಿಗೆ ಕೇವಲ 916 ಮಹಿಳೆಯರಿದ್ದಾರೆ. ಒಟ್ಟು ರಾಜ್ಯದಲ್ಲಿ 1000 ಪುರುಷರಿಗೆ ಮಹಿಳೆಯರ ಸಂಖ್ಯೆ 973. 2001ರಲ್ಲಿ ರಾಜ್ಯದಲ್ಲಿದ್ದ ಮಹಿಳೆಯರ ಸಂಖ್ಯೆ 965ಕ್ಕೆ ಹೋಲಿಸಿದರೆ ಇದು ಅಲ್ಪಮಟ್ಟದ ಪ್ರಗತಿಗೆ ಸೂಚಕ. ಏಕೆಂದರೆ, ಕಳೆದ ಶತಮಾನ ಆರಂಭವಾದಾಗ 1901ರಲ್ಲಿ 1000 ಪುರುಷರಿಗೆ 983 ಮಹಿಳೆಯರಿದ್ದರು ಎಂಬುದನ್ನು ನೆನಪಿಡಬೇಕು. 0-6 ವಯೋಮಾನದ ಮಕ್ಕಳ ಲಿಂಗಾನುಪಾತದಲ್ಲಿ ಕೇವಲ ಎರಡು ಅಂಕಗಳಷ್ಟೇ ಏರಿಕೆಯಾಗಿದೆ. 2001ರಲ್ಲಿ 1000 ಗಂಡುಮಕ್ಕಳಿಗೆ 946 ಹೆಣ್ಣುಮಕ್ಕಳಿದ್ದರು. ಈ ಬಾರಿ ಅದು 948ಕ್ಕೆ ಏರಿಕೆಯಾಗಿದೆ ಅಷ್ಟೆ. ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನಮಾನ ಸುಧಾರಣೆಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ಹೆಣ್ಣುಮಕ್ಕಳು `ಕಾಣೆಯಾಗುವುದು' ಮುಂದುವರಿದೇ ಇದೆ ಎಂಬುದು ಗಂಭೀರ ಪರಿಶೀಲನೆಗೆ ಯೋಗ್ಯವಾದುದು. ರಾಜ್ಯದ ಸುಮಾರು ಅರ್ಧದಷ್ಟು ಜನಸಂಖ್ಯೆ ಎಂದರೆ 3.32 ಕೋಟಿ ಜನರು ಯಾವುದೇ ಕೆಲಸ ಮಾಡದವರು ಎಂಬುದನ್ನೂ ಈ ಜನಗಣತಿ ಬಹಿರಂಗಪಡಿಸಿದೆ. ಇದಕ್ಕೆ ಮುಖ್ಯ ಕಾರಣ ಬಹಳಷ್ಟು ಚಟುವಟಿಕೆಗಳನ್ನು ಅನುತ್ಪಾದಕ ವಲಯಕ್ಕೆ ಸೇರಿಸಿರುವುದು. ವಿದ್ಯಾರ್ಥಿ, ಗೃಹಿಣಿ, ಪಿಂಚಣಿದಾರರು, ಭಿಕ್ಷುಕರು, ವೇಶ್ಯೆಯರು ಮುಂತಾದವರನ್ನು ಆರ್ಥಿಕೇತರ ಚಟುವಟಿಕೆ ವರ್ಗದಡಿ ಪಟ್ಟಿ ಮಾಡಲಾಗಿದೆ.ಗೃಹಕೃತ್ಯವನ್ನು ಈ ವರ್ಗಕ್ಕೆ ಸೇರಿಸಿರುವುದರ ವಿರುದ್ಧ 2010ರಲ್ಲಿ ಪ್ರಕರಣವೊಂದಕ್ಕೆ ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ಹರಿಹಾಯ್ದಿದ್ದನ್ನು ಸ್ಮರಿಸಬಹುದು. ರಾಜ್ಯದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ56.87ರಿಂದ ಶೇ68.08ಕ್ಕೆ ಏರಿರುವುದು ಗಮನಾರ್ಹ ಬೆಳವಣಿಗೆ. ಆದರೆ ರಾಜ್ಯದಲ್ಲಿ ಒಟ್ಟು ಸಾಕ್ಷರತೆ ಪ್ರಮಾಣ ಇನ್ನೂ ಶೇ 75.4ರಲ್ಲೇ ಇದೆ. ಹೀಗಾಗಿ ಸಂಪೂರ್ಣ ಸಾಕ್ಷರತೆಯತ್ತ ಸಾಗುವ ಹಾದಿ ಇನ್ನೂ ದೂರ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.