ಮರುಕಳಿಸಿದ ಅಟ್ಟಹಾಸ ಭಾರತಕ್ಕೆ ಅತಿದೊಡ್ಡ ಆಂತರಿಕ ಭದ್ರತಾ ಬೆದರಿಕೆ ಒಡ್ಡುವಂತಹವರು ನಕ್ಸಲರೇ ಆಗಿದ್ದಾರೆ ಎಂದು ಪ್ರಧಾನಿಯವರೇ ಒಮ್ಮೆ ಎಚ್ಚರಿಸಿದ್ದರು. ಅಂತಹ ಬೆದರಿಕೆ ಮತ್ತೆಮತ್ತೆ ಮರುಕಳಿಸುತ್ತಿರುವುದು ಆಡಳಿತದ ವೈಫಲ್ಯಕ್ಕೆ ಸಾಕ್ಷಿ. ಛತ್ತೀಸಗಡ ಮತ್ತು ಒಡಿಶಾದಲ್ಲಿ ನಕ್ಸಲೀಯರ ಹಾವಳಿ ಕಡಿಮೆಯಾಯಿತು ಎಂದು ನಿಟ್ಟುಸಿರುಬಿಡುವಾಗಲೇ ಛತ್ತೀಸಗಡದ ದಟ್ಟಾರಣ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಯೋಜಿತ ಹಠಾತ್ ದಾಳಿ ನಡೆಸಿ 27 ಮಂದಿಯನ್ನು ಬರ್ಬರವಾಗಿ ಕೊಂದಿರುವ ನಕ್ಸಲೀಯರ ಅಟ್ಟಹಾಸ ಆಘಾತಕಾರಿ. ಪರಿವರ್ತನಾ ರ‌್ಯಾಲಿ ಮುಗಿಸಿ ಮರಳುತ್ತಿದ್ದ ಕಾಂಗ್ರೆಸ್ ನಾಯಕರ ಮೇಲೆ ಬಸ್ತರ್ ಜಿಲ್ಲೆಯ ಮುಖ್ಯ ಕೇಂದ್ರವಾದ ಜಗದಾಲ್ಪುರ ಸಮೀಪದ ದಟ್ಟಕಾಡಿನಲ್ಲಿ ದಾಳಿ ನಡೆದಿದೆ. ನಕ್ಸಲರನ್ನು ನಿಗ್ರಹಿಸಲು `ಸಲ್ವಾ ಜುಡುಂ' ಸಂಘಟನೆ ಹುಟ್ಟುಹಾಕಿದ್ದ ರಾಜ್ಯದ ಮಾಜಿ ಗೃಹ ಸಚಿವ ಮಹೇಂದ್ರ ಕರ್ಮ ಅವರನ್ನು ಕೊಂದಿರುವ ಘೋರ ರೀತಿಯನ್ನು ಗಮನಿಸಿದರೆ ನಕ್ಸಲರ ಗುರಿ ಕರ್ಮ ಅವರೇ ಆಗಿದ್ದಂತೆ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ರ‌್ಯಾಲಿಗೆ ಮಾವೋವಾದಿಗಳಿಂದ ವಿರೋಧ ವ್ಯಕ್ತವಾಗಿದ್ದುದು ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೂ ಸ್ವಲ್ಪ ಎಚ್ಚರ ತಪ್ಪಿದ್ದು ದುಬಾರಿ ದಂಡಕ್ಕೆ ಕಾರಣವಾಗಿದೆ. ನಕ್ಸಲೀಯರ ಸಮಸ್ಯೆಗೆ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳೂ ಇದೆ. ನೆಲದ ಕಾನೂನನ್ನು ಉಲ್ಲಂಘಿಸಿದವರ ವಿರುದ್ಧ ನಿರ್ಭೀತಿಯ ಕ್ರಮ ಕೈಗೊಳ್ಳುವುದರ ಜೊತೆಗೆ ನಕ್ಸಲೀಯ ಪೀಡಿತ ಪ್ರದೇಶದ ಅಭಿವೃದ್ಧಿಗೆ ಶಾಶ್ವತ ಸ್ವರೂಪದ ಯೋಜನೆಗಳ ಅನುಷ್ಠಾನಕ್ಕೆ ಯತ್ನಿಸಬೇಕು. ಈ ಹಿಂದೆ ಛತ್ತೀಸಗಡದ ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ಅಪಹರಿಸಲಾಗಿತ್ತು. ಒಡಿಶಾದಲ್ಲಿ ಮಲ್ಕಾನ್ ಗಿರಿಯ ಜಿಲ್ಲಾಧಿಕಾರಿ ವಿನೀಲ್ ಕೃಷ್ಣ ಹಾಗೂ ಕಿರಿಯ ಎಂಜಿನಿಯರ್ ಒಬ್ಬರನ್ನು ಅಪಹರಿಸಲಾಗಿತ್ತು. ಕೇಂದ್ರದ ಆಹಾರ ಭದ್ರತಾ ಕಾಯ್ದೆ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳು ಸಾಕಷ್ಟು ಪರಿಣಾಮಕಾರಿಯಾಗಿದ್ದು ಮಾವೊವಾದಿಗಳಿಗೆ ಬೆಂಬಲ ಕಡಿಮೆಯಾಗಿದೆ ಎಂಬಂತಹ ಭಾವನೆ ಹುಸಿ ಎನ್ನುವಂತೆ ನಕ್ಸಲ್ ದಾಳಿ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಮೂಲಸೌಕರ್ಯಗಳ ಕೊರತೆ, ಶಿಕ್ಷಣ ಸೌಲಭ್ಯದ ಅಲಭ್ಯತೆ, ಬುಡಕಟ್ಟು ಜನಾಂಗದ ಬೇಡಿಕೆಗಳನ್ನು ಪರಿಗಣಿಸಲು ಇದು ಸೂಕ್ತ ಸಮಯ. ಈ ವಿಷಯದಲ್ಲಿ ರಾಜಕೀಯ ಸಲ್ಲ. ದೇಶದ ಆಡಳಿತ, ರಾಜಕೀಯ ವ್ಯವಸ್ಥೆ, ಸಾಮಾಜಿಕ ರಾಜಕೀಯ ರಚನೆಗಳಲ್ಲಿರುವ ದೌರ್ಬಲ್ಯಗಳನ್ನು ನಕ್ಸಲ್ ಸಮಸ್ಯೆ ಅನಾವರಣಗೊಳಿಸುತ್ತಿದೆ ಎನ್ನುವುದನ್ನು ಮರೆಯಬಾರದು. ನಕ್ಸಲ್ ಸಮಸ್ಯೆಯ ಪರಿಹಾರ ವಿಧಾನಗಳನ್ನು ಬಹುಮುಖಿಯಾಗಿಸಬೇಕಾದದ್ದು ಅವಶ್ಯ.ಭದ್ರತಾ ಕಾರ್ಯಾಚರಣೆಗಳ ಜೊತೆಜೊತೆಗೇ ಅಭಿವೃದ್ಧಿ ಕಾರ್ಯಾಚರಣೆಗಳ ಸಮತೋಲನದ ಮೂಲಕ ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.