ಎಚ್ಚರ ತಪ್ಪಿದರೆ ಆಪತ್ತು ರಾಜ್ಯದಲ್ಲಿ ಮತ್ತೆ ಡೆಂಗೆ ಮರುಕಳಿಸಿದೆ. ನೈರ್ಮಲ್ಯ ಕಾಪಾಡುವಲ್ಲಿ, ಜನಜಾಗೃತಿ ಮೂಡಿಸುವಲ್ಲಿ ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಲೆಂದೇ ವರ್ಷದಿಂದ ವರ್ಷಕ್ಕೆ ಮರುಕಳಿಸುತ್ತಿರುವ ಸಾಂಕ್ರಾಮಿಕ ಡೆಂಗೆಗೆ ಈಗಾಗಲೇ ನಾಲ್ಕು ಮಕ್ಕಳು ಬಲಿಯಾಗಿರುವುದು ವಿಷಾದದ ಸಂಗತಿ. ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರೂ, ಹಳ್ಳಿ ಹಾಗೂ ನಗರಗಳೆನ್ನದೆ ಎಲ್ಲ ಕಡೆಯೂ ವ್ಯಾಪಿಸುತ್ತಾ ಜನ ನಿಗೂಢ ಜ್ವರದಿಂದ ತತ್ತರಿಸುವಂತೆ ಮಾಡುತ್ತಿರುವ ಈ ರೋಗವನ್ನು ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಸಾಧ್ಯವಾಗಿಲ್ಲ. ಕಳೆದವರ್ಷ ಕೂಡ ದೇಶದಾದ್ಯಂತ ಡೆಂಗೆ ಕಂಡುಬಂದಿತ್ತು. ಮಳೆಗಾಲ ಕಾಲಿರಿಸುತ್ತಿದ್ದಂತೆಯೇ ಸೊಳ್ಳೆಗಳ ಉಪದ್ರವಗಳ ಜೊತೆಗೇ ಕಾಯಿಲೆಗಳು ಮಾಮೂಲು. ಸೊಳ್ಳೆಗಳಿಂದ ಹರಡುವ ಡೆಂಗೆ, ಚಿಕುನ್‌ಗುನ್ಯ ಹಾಗೂ ಮಲೇರಿಯಾ ಜ್ವರ ಇತ್ತೀಚಿನ ವರ್ಷಗಳಲ್ಲಿ ಬೃಹತ್ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದಲ್ಲಿ ಡೆಂಗೆ ವ್ಯಾಪಿಸಿರುವುದರಿಂದ ಅಲ್ಲಿ ನಾಲ್ಕು ಮಕ್ಕಳು ಸತ್ತಿದ್ದಾರೆ. ಮೈಸೂರು ನಗರ, ತಿ.ನರಸೀಪುರ, ಮಂಡ್ಯ ಹೀಗೆ ಸರಹದ್ದುಗಳ ಹಳ್ಳಿಗಳಲ್ಲಿ ನಿಗೂಢ ಜ್ವರ ಕಂಡುಬಂದಿದೆ. ಆರುನೂರಕ್ಕೂ ಹೆಚ್ಚು ಜನ ಇದರಿಂದ ನರಳುತ್ತಿದ್ದಾರೆ. ಮುಖ್ಯಮಂತ್ರಿಗಳೂ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳಲ್ಲಿ ಡೆಂಗೆ ಪೀಡಿತರಿಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದ್ದು, ಅಲ್ಲಿ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಪರಿಹಾರ ಕೊಟ್ಟು ಕೈತೊಳೆದುಕೊಂಡರಷ್ಟೇ ಸಾಲದು. ಡಿ.ಸಾಲುಂಡಿ ಗ್ರಾಮ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಜನ ಬಹಳದಿನಗಳ ಕಾಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದೂ ಸೊಳ್ಳೆಗಳು ತಳ ಊರಲು ಕಾರಣ. ಮೂಲಭೂತ ಸಮಸ್ಯೆಗಳನ್ನೂ ನಿವಾರಿಸುವತ್ತ ಸರ್ಕಾರ ಲಕ್ಷ್ಯ ಹರಿಸುವುದು ತುರ್ತಾಗಿ ಆಗಬೇಕು. ಮಳೆಗಾಲ ಆರಂಭಕ್ಕೆ ಮುನ್ನವೇ ಕರಾಳ ಖಾತೆಯನ್ನು ಆರಂಭಿಸಿರುವ ಡೆಂಗೆ, ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲೂ ಕಾಣಿಸಿಕೊಂಡ ವರದಿಯಾಗಿದೆ. ಅಧಿಕೃತ ವರದಿಯ ಪ್ರಕಾರ ಈ ಸಾಲಿನಲ್ಲಿ 66 ಪ್ರಕರಣಗಳು ವರದಿಯಾಗಿವೆ. ಈಡಿಸ್ ಈಜಿಫ್ಲೈ ಸೊಳ್ಳೆಗಳಿಂದ ಮನುಷ್ಯರಿಗೆ ಬರುವ ಈ ಮಾರಕ ರೋಗ ನಿವಾರಣೆಗೆ ನಿರ್ದಿಷ್ಟ ಔಷಧಿ ಇದೆಯೇ? ಸಾಂದರ್ಭಿಕ ಚಿಕಿತ್ಸೆಯಿಂದ ನಿಯಂತ್ರಣ ಸಾಧ್ಯ. ಸ್ಥಳೀಯ ಸಂಸ್ಥೆಗಳ ಜೊತೆಗೆ ಆರೋಗ್ಯ ಇಲಾಖೆ ಕೂಡ ಕೈಜೋಡಿಸಿ ಡೆಂಗೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸೊಳ್ಳೆ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣ ನಿರ್ಮೂಲನೆ, ಲಾರ್ವ ನಾಶಕ ಸಿಂಪಡಣೆ, ಫಾಗಿಂಗ್ ಮತ್ತಿತರ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಡೆಂಗೆ ನಿಯಂತ್ರಣ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸ್ವಚ್ಛತಾ ಕಾರ್ಯಕ್ರಮ, ಚರಂಡಿಗಳಲ್ಲಿ ಹೂಳೆತ್ತುವ ಕೆಲಸಗಳು ನಿರಂತರವಾಗಿ ನಡೆಯಬೇಕು. ಜೀವನಷ್ಟವಾದರೆ ಅದು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವೈಫಲ್ಯವೆನಿಸುತ್ತದೆ. ಡೆಂಗೆ ಜ್ವರಪತ್ತೆ ಹಾಗೂ ಚಿಕಿತ್ಸೆಗಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಕೇಂದ್ರಗಳಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.