ಮುನ್ನಡೆಯ ವೆುಟ್ಟಿಲು ನಮ್ಮ ದೇಶದಲ್ಲಿ ಬಹುಪಾಲು ಕುಟುಂಬಗಳನ್ನು ಬಾಧಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಗೆ ಹೆಣ್ಣುಮಕ್ಕಳ ಶಿಕ್ಷಣವೇ ಮೊದಲ ಬಲಿ. ಗಂಡನ ಮನೆಗೆ ಹೋಗುವ ಹುಡುಗಿಗೆ ಹೆಚ್ಚಿನ ಶಿಕ್ಷಣವೇಕೆ, ಅವಳ ಮದುವೆಯ ಖರ್ಚು ಮುಂದಿರುವಾಗ ಶಿಕ್ಷಣಕ್ಕೂ ತೆರುವುದೇಕೆ ಎಂಬ ನೆಲೆಯ ಆಲೋಚನೆಗಳು ಅವರನ್ನು ಶಿಕ್ಷಣವಂಚಿತರನ್ನಾಗಿ ಮಾಡುತ್ತವೆ. ಹಾಗಾಗಿ ಮಹಿಳಾ ಸಾಕ್ಷರತೆಯಿಂದ ಹಿಡಿದು ಶಿಕ್ಷಣದ ಎಲ್ಲ ಹಂತಗಳಲ್ಲಿ ಅವರ ಪ್ರಮಾಣ ಅತೃಪ್ತಿಕರವೇ ಆಗಿದೆ. ಸಂಪೂರ್ಣ ಸಾಕ್ಷರತೆಗೆ ಶ್ರಮಿಸುವುದರ ಜೊತೆಗೆ ಬಾಲೆಯರು ಶಾಲೆ ಬಿಡದ ಹಾಗೆ ಕಾಯುವುದು, ನಿರಾಳವಾಗಿ ಪ್ರೌಢಶಾಲೆ ಮುಗಿಸುವಂತೆ ನೋಡಿಕೊಳ್ಳುವುದು, ಅವರು ಕಾಲೇಜು ಮೆಟ್ಟಿಲು ಹತ್ತಿ ಪದವಿ ಪಡೆಯುವಂತೆ ಅನುಕೂಲ ಕಲ್ಪಿಸುವುದು, ತಾಂತ್ರಿಕ-ವೃತ್ತಿಪರ-ಉನ್ನತ ಶಿಕ್ಷಣಕ್ಕೆ ಅವಕಾಶ ಹೆಚ್ಚಿಸುವುದು ಹೀಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಎಷ್ಟು ಕ್ರಿಯಾಯೋಜನೆಗಳು ಇದ್ದರೂ ಸಾಲದು. ಈ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧಿಸೂಚನೆಯ ಮೇರೆಗೆ, ಗುಲ್ಬರ್ಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು 6 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯವಿರುವ ಎಲ್ಲ ವರ್ಗಗಳ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿನಿಯರಿಗೆ ಎಂಜಿನಿಯರಿಂಗ್ ಸೇರಿದಂತೆ 35 ಕೋರ್ಸ್‌ಗಳಿಗೆ ಉಚಿತ ಶಿಕ್ಷಣ ನೀಡುವ ಕ್ರಮ ಪ್ರಕಟಿಸಿರುವುದು ಅತ್ಯಂತ ಸ್ವಾಗತಾರ್ಹ.ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಸೌಲಭ್ಯ ಕೂಡ ಒದಗಲಿರುವುದು ಇನ್ನೂ ಸಮಾಧಾನದ ಸಂಗತಿ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತಗಳಲ್ಲಿ ಹೆಣ್ಣುಮಕ್ಕಳ ಓದು ನಿರಾತಂಕವಾಗಿ ಸಾಗುವುದು ದೇಶದ ಅಭಿವೃದ್ಧಿಗೆ ಅವಶ್ಯಕ ಎನ್ನುವುದನ್ನು ಮರೆಯುವಂತಿಲ್ಲ. ಶಿಕ್ಷಣ ಎಂಬ ಮೂಲಭೂತ ಹಕ್ಕು ದೇಶದಲ್ಲಿ ಹುಟ್ಟುವ ಪ್ರತಿಯೊಂದು ಹೆಣ್ಣುಮಗುವಿಗೂ ಲಭ್ಯವಾಗಬೇಕು ಎನ್ನುವ ಸೂಕ್ಷ್ಮತೆ ಮತ್ತು ಸಂವೇದನೆ ಇರದಿದ್ದರೆ ಅಭಿವೃದ್ಧಿ ಅಸಾಧ್ಯ. ಸರ್ಕಾರ ಕಲ್ಪಿಸಿರುವ ಶೈಕ್ಷಣಿಕ ವ್ಯವಸ್ಥೆಯ ಶುಲ್ಕವೂ ಪೋಷಕರಿಗೆ ಹೊರೆ ಆಗುವುದರಿಂದ ಬಹುಪಾಲು ಹೆಣ್ಣುಮಕ್ಕಳ ಪಾಲಿಗೆ ಇಂದಿಗೂ ಉನ್ನತ ಶಿಕ್ಷಣ ಅದೃಷ್ಟದ ಮಾತು. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಶುಲ್ಕವನ್ನು ತೆತ್ತು ಅವರನ್ನು ಉನ್ನತ ಮಟ್ಟದ ಕೋರ್ಸ್‌ಗಳಿಗೆ ಸೇರಿಸುವುದು ಸಾಮಾನ್ಯ ಜನರಿಗೆ ಅಸಾಧ್ಯವೇ ಸರಿ. ಹೀಗಾಗಿ ಪ್ರತಿಭೆ ಹೊಂದಿದ್ದರೂ ಅದಕ್ಕೆ ಹೊಳಪು ಪಡೆಯುವ ಅವಕಾಶದಿಂದ ವಂಚಿತರಾಗುವ ಹೆಣ್ಣುಮಕ್ಕಳು ಇಂಥ ಕ್ರಮಗಳಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಸೌಲಭ್ಯ ಅರ್ಹರಿಗೆ ತಲುಪಬೇಕಾದರೆ, ಅರ್ಜಿ ಸಲ್ಲಿಕೆ, ಪ್ರವೇಶ ಪರೀಕ್ಷೆಗೆ ಸಿದ್ಧತೆ ಸೇರಿ ಈ ಪ್ರಕ್ರಿಯೆಯ ಎಲ್ಲ ಅಂಶಗಳ ಬಗ್ಗೆ ಗ್ರಾಮೀಣ ಪ್ರದೇಶವೂ ಸೇರಿ ರಾಜ್ಯದ ಎಲ್ಲ ಬಡಕುಟುಂಬಗಳ ಹೆಣ್ಣುಮಕ್ಕಳಿಗೆ ಅವರ ಶಾಲೆಗಳಲ್ಲೇ ಸೂಕ್ತ ತಿಳಿವಳಿಕೆ ನೀಡುವ ಬಗ್ಗೆಯೂ ಗಮನ ಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.