ಮುಂಗಾರು ಕಣ್ಣಾಮುಚ್ಚಾಲೆ ಈ ಬಾರಿ ರಾಷ್ಟ್ರದಲ್ಲಿ ಮುಂಗಾರು ತೃಪ್ತಿಕರವಾಗಿರುತ್ತದೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರದ ಆರ್ಥಿಕತೆಗೆ ಇದರಿಂದ ನವಚೇತನ ಸಿಗುವುದೆ ಎಂಬಂತಹ ಆಶಾಭಾವನೆ ಇದರಿಂದ ಮೂಡಿದೆ. ಭಾರತೀಯ ಕೃಷಿಯಂತೂ ನೈರುತ್ಯ ಮುಂಗಾರಿನ ಮೇಲೇ ಅವಲಂಬಿತ. ಹೀಗಾಗಿ ಆಹಾರ ಇಳುವರಿಗೂ ಮುಂಗಾರು ಮಳೆಗೂ ಅವಿನಾಭಾವ ಸಂಬಂಧ. ಇದು ಆರ್ಥಿಕತೆ ಮೇಲೆ ಬೀರುವ ಪರಿಣಾಮ ಅತ್ಯಂತ ಮಹತ್ವದ್ದು. ಈ ಹಿನ್ನೆಲೆಯಲ್ಲಿ, ಈ ವರ್ಷ ರಾಷ್ಟ್ರದಲ್ಲಿ ವಾಡಿಕೆಯ ತೃಪ್ತಿಕರ ಮುಂಗಾರು ಮಳೆಯಾಗುತ್ತದೆ ಎಂಬ ಬಗ್ಗೆ ಹೊರಬಿದ್ದಿರುವ ಮುನ್ಸೂಚನೆ ಭರವಸೆದಾಯಕ. ರೈತ ಸಮುದಾಯಕ್ಕೆ ಸಂತಸ, ನೆಮ್ಮದಿ ತರುವಂತಹದ್ದು. ಈ ದಶಕದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿರುವ ಶೇ 5ರ ವೃದ್ಧಿದರ ಹೆಚ್ಚಳಕ್ಕೆ ಯುಪಿಎ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ, ಮುಂಗಾರು ಕೊರತೆಯಾಗುವುದಿಲ್ಲ. ವಾಡಿಕೆಯಂತಿರುತ್ತದೆ ಎಂಬಂಥ ಮುನ್ಸೂಚನೆ ಮುಖ್ಯವಾದುದು. ಏಕೆಂದರೆ ಮುಂಗಾರು ಕೈಕೊಟ್ಟಲ್ಲಿ ಆಹಾರ ಧಾನ್ಯಗಳ ಬೆಲೆ ಸಹಜವಾಗಿ ಹೆಚ್ಚಾಗುತ್ತದೆ. ಬಡ್ಡಿದರಗಳಲ್ಲಿ ಹೆಚ್ಚಳವಾಗುತ್ತದೆ. ಇದರ ಫಲಶ್ರುತಿ ಎಂದರೆ ಮನೆ, ವಾಹನ, ಗ್ರಾಹಕವಸ್ತುಗಳ ಬೇಡಿಕೆ ತಗ್ಗುತ್ತದೆ. ಆದರೆ ಮುಂಗಾರು ಮಳೆ ಚೆನ್ನಾಗಿ ಬಿದ್ದಲ್ಲಿ ಗ್ರಾಮೀಣ ಭಾರತದ ಆದಾಯ ಹೆಚ್ಚಾಗುತ್ತದೆ. ರಾಷ್ಟ್ರದಲ್ಲಿ ಖರೀದಿ ಶಕ್ತಿ ಹೆಚ್ಚುತ್ತದೆ. ಆರ್ಥಿಕತೆಗೆ ಚೇತರಿಕೆ ಒದಗುತ್ತದೆ. ರಾಷ್ಟ್ರದ ಮಟ್ಟಿಗೆ ಮಳೆ,ಬೆಳೆಯ ಮುನ್ಸೂಚನೆ ಆಶಾದಾಯಕವಾಗಿರುವುದೇನೋ ಸಂತಸದಾಯಕ, ಸರಿ. ಆದರೆ ಕರ್ನಾಟಕ ಸೇರಿದಂತೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಮುಂಗಾರು ಮಳೆ ಕೊರತೆ ಆಗಬಹುದು ಎಂಬಂಥ ಎಚ್ಚರಿಕೆಯನ್ನು ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ನೀಡಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದಂತೆ ಇದು ಆತಂಕಕಾರಿಯೇ. ಕಳೆದ ವರ್ಷವೂ ಕೆಲವು ರಾಜ್ಯಗಳಲ್ಲಿ ಮುಂಗಾರು ಕೈಕೊಟ್ಟಿತ್ತು. ಇದರಿಂದ ಜಲಾಶಯಗಳು ಭರ್ತಿಯಾಗಿರಲಿಲ್ಲ. ಜೊತೆಗೆ, ನೆರೆಯ ತಮಿಳುನಾಡಿನ ಜೊತೆ ಕಾವೇರಿ ನೀರು ಹಂಚಿಕೆಯ ವಿವಾದ ಉಲ್ಬಣಿಸಿದ್ದುದನ್ನು ನೆನಪಿಸಿಕೊಳ್ಳಬಹುದು. ಹೀಗಾಗಿ, ಅನಿಶ್ಚಯದ ಮುಂಗಾರಿನ ಸವಾಲುಗಳನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕೆಂಬ ಪಾಠವನ್ನು ನಾವು ಕಲಿಯಬೇಕಾಗಿದೆ. ಮಳೆ ಕೊರತೆಗೆ ಸಂಬಂಧಿಸಿದ ವಿಚಾರಗಳ ನಿರ್ವಹಣೆಗೆ ಸಮಗ್ರ ನೀತಿ ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಳೆ ನೀರು ಸಂಗ್ರಹ ಸೇರಿದಂತೆ ನೀರಿನ ಪುನರ್‌ಬಳಕೆಯಂತಹ ದಕ್ಷ ಜಲ ನಿರ್ವಹಣೆಯ ನೀತಿಗಳನ್ನು ನಾವು ಅಳವಡಿಸಿಕೊಳ್ಳಬೇಕು. ಮಳೆ ಕೊರತೆ ಎದುರಾದಲ್ಲಿ ಎದುರಿಸಬೇಕಾದ ಸವಾಲುಗಳ ನಿರ್ವಹಣೆಗೆ ಮುನ್ನೋಟವಿರುವ ಕಾರ್ಯತಂತ್ರಗಳನ್ನು ರೂಪಿಸುವುದು ಅಗತ್ಯವಾಗುತ್ತದೆ. ನೀರಿನ ಕೊರತೆ, ಮೇವಿನ ಕೊರತೆಯಾಗದಂತೆ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.