ಕಲಾಪ ಪಾವಿತ್ರ್ಯ ಕಾಪಾಡಿ ಲಡಾಖ್ ವಲಯದಲ್ಲಿ ಚೀನಾ ಪಡೆಗಳು ನಮ್ಮ ದೇಶದ ಗಡಿಯೊಳಗೆ ನುಸುಳಿವೆ. ಪಾಕಿಸ್ತಾನದ ಗಡಿಯಲ್ಲಿ ಆಗಾಗ ಗುಂಡಿನ ಚಕಮಕಿ ನಡೆಯುತ್ತಿದೆ. ಮುಂಬೈ ಸೇರಿದಂತೆ ರಾಜ್ಯದ ವಿವಿಧ ರಾಜಧಾನಿಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು ಹೊಂಚುಹಾಕಿ ಕುಳಿತಿದ್ದಾರೆ. ಜನಸಾಮಾನ್ಯರ ಹಲವಾರು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಂಬಂಧ ರೂಪಿಸಿದ ಮಸೂದೆಗಳು ಅಂಗೀಕಾರಕ್ಕಾಗಿ ಕಾದು ಕುಳಿತಿವೆ. ಇಂತಹ ಗಂಭೀರ ಸಮಸ್ಯೆಗಳು ಕಣ್ಣೆದುರು ಇರುವಾಗ ರಾಷ್ಟ್ರವನ್ನು ಕಾಡುವ ಯಾವುದೇ ವಿದ್ಯಮಾನಗಳನ್ನು ಚರ್ಚಿಸಲು ಸೂಕ್ತವೇದಿಕೆಯಾದ ಸಂಸತ್‌ಕಲಾಪ ಸತತವಾಗಿ ಏಳುದಿನಗಳಿಂದ ನಡೆಯಲೇ ಇಲ್ಲ. ಕಲ್ಲಿದ್ದಲು ಗಣಿ ಹಂಚಿಕೆ ಅಕ್ರಮ ಮತ್ತು ಈ ಪ್ರಕರಣದ ತನಿಖೆ ಸಂಬಂಧ ಸಿಬಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ಪ್ರಧಾನಿ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದರಿಂದ ಸತತವಾಗಿ ಸಂಸತ್ ಕಲಾಪಕ್ಕೆ ಅಡ್ಡಿಯಾಗಿದೆ. 15ನೇ ಲೋಕಸಭೆಗೆ ಕಲಾಪ ಸ್ಥಗಿತ ಎನ್ನುವುದು ಶಾಪವಾಗಿ ಪರಿಣಮಿಸಿದಂತೆ ಕಾಣುತ್ತಿದೆ. ಇದುವರೆಗೆ ಯಾವೊಂದು ಕಲಾಪವೂ ಸುಗುಮವಾಗಿ ನಡೆದಿಲ್ಲ. ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಸಂಕಟ ಎಲ್ಲರ ವರ್ತನೆಯಲ್ಲಿ ಪ್ರತಿಫಲನಗೊಳ್ಳುತ್ತಿದೆ. 390 ಮಸೂದೆಗಳಿಗೆ ಅಂಗೀಕಾರ ಪಡೆಯುವ ಕಾರ್ಯ ಯೋಜನೆಯಲ್ಲಿ ಯಪಿಎ ಸರ್ಕಾರಕ್ಕೆ 187 ಮಸೂದೆಗಳಿಗೆ ಮಾತ್ರ ಅಂಗೀಕಾರ ಪಡೆಯಲು ಸಾಧ್ಯವಾಗಿದೆ. ಎಷ್ಟೋ ಮಹತ್ವದ ಮಸೂದೆಗಳು ಚರ್ಚೆಯೇ ಇಲ್ಲದೆ ಅಂಗೀಕಾರವಾಗುತ್ತವೆ ಎನ್ನುವುದೇ ಸರ್ಕಾರದ ಶೋಚನೀಯ ಪರಿಸ್ಥಿತಿಯನ್ನು ಹೇಳುತ್ತದೆ. ನಮ್ಮ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂಸದೀಯ ಕಲಾಪಗಳಿಗೆ ಅಡ್ಡಿ ಪಡಿಸುವ ಕ್ರಿಯೆ ಹೊಸದೇನಲ್ಲ. ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳಿಗೆ ಪ್ರತಿಭಟನೆ ಸೂಚಿಸುವ ರೀತಿಗಳಲ್ಲಿ ಇದೂ ಒಂದು. ಆದರೆ, ಕಲಾಪಕ್ಕೆ ತಡೆ ಒಡ್ಡುವುದನ್ನೇ ಒಂದು ಸಿದ್ಧಾಂತವಾಗಿ ಪ್ರತಿಪಕ್ಷಗಳು ಪ್ರತಿಪಾದಿ ಸುತ್ತಿರುವುದು ಸರಿಯಾದ ನಡೆಯಲ್ಲ. ಮೌಲಿಕವಾದ ಚರ್ಚೆ, ರಾಜಕೀಯ ಪ್ರಬುದ್ಧತೆಯನ್ನು ಪ್ರತಿಪಕ್ಷಗಳಿಂದ ಜನ ನಿರೀಕ್ಷಿಸುತ್ತಾರೆ. ಸಂಸತ್ತನ್ನೇ ಅಪ್ರಸ್ತುತಗೊಳಿಸುವ ಈ ಪ್ರವೃತ್ತಿ ಖಂಡನೀಯ. ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್ ಹಲವು ರಹಸ್ಯ ಸಂಗತಿಗಳನ್ನು ಬಹಿರಂಗ ಪಡಿಸಿದ ಸಂದರ್ಭದಲ್ಲೂ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿ, ಸಂಸತ್‌ಕಲಾಪವನ್ನು ಭಂಗಗೊಳಿಸಿದ್ದವು. ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಒಂದೂ ಬೈಠಕ್ ನಡೆಯಲಿಲ್ಲ. ಸಂಸತ್ ಕಲಾಪಕ್ಕೆ ಸರಾಸರಿ ಒಂದುಗಂಟೆಗೆ ರೂ 25 ಲಕ್ಷ ವ್ಯಯಿಸಲಾಗುತ್ತಿದೆ. ಆದರೆ, ಇವೆಲ್ಲವನ್ನು ಲೆಕ್ಕಿಸದೆ ನಮ್ಮ ಸಂಸದರು ಉಭಯಸದನಗಳನ್ನು ರಾಜಕೀಯ ಸಂಘರ್ಷದ ಅಖಾಡವನ್ನಾಗಿ ಪರಿವರ್ತಿಸಿಕೊಂಡು, ಗದ್ದಲ ನಡೆಸಿ, ಸಂಸತ್ತಿನ ಅಮೂಲ್ಯ ಸಮಯ ಮತ್ತು ತೆರಿಗೆದಾರರ ಹಣ ಎರಡನ್ನೂ ಏಕೆ ಪೋಲು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುವುದಿಲ್ಲ. ತೆರಿಗೆದಾರರ ಹಣ ಪೋಲಾಗದಂತೆ ತಡೆಯಬೇಕಾದರೆ ಕಲಾಪ ನಡೆಯದ ದಿನಗಳಲ್ಲಿ ಸಂಸದರ ಸಂಬಳ ಮತ್ತು ಭತ್ಯೆಯನ್ನಾದರೂ ಕಡಿತಗೊಳಿಸುವ ಕ್ರಮ ತೆಗೆದುಕೊಳ್ಳಬೇಕು. ದಪ್ಪ ಚರ್ಮದ ಪ್ರತಿಪಕ್ಷಗಳು ಇದಕ್ಕೆ ಜಗ್ಗುವ ಜಾಯಮಾನದವಲ್ಲ. ಸಂಸತ್ತಿನ ಘನತೆ, ಗೌರವ ರಕ್ಷಿಸುವ ರೀತಿಯಲ್ಲಿ ಅವರು ವರ್ತಿಸುವುದು ಜನಸಾಮಾನ್ಯರ ನಿರೀಕ್ಷೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.