ಅಸ್ಪಷ್ಟತೆ ನಿವಾರಣೆಯಾಗಲಿ ಹನ್ನೊಂದು ವರ್ಷದ ಬಾಲಕಿಯನ್ನು ಅಪಹರಿಸಿ ನಿರಂತರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿಗೆ ಇಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಅತ್ಯಾಚಾರ ಪ್ರಕರಣ `ಅಪರೂಪದಲ್ಲಿ ಅಪರೂಪದ' ಪ್ರಕರಣ ಎಂದೇ ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆ. ಹೀಗಿದ್ದೂ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡದೆ ಜೀವಾವಧಿ ಶಿಕ್ಷೆ ನೀಡಿರುವುದು ವಿಶೇಷ. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕೆಂಬ ಕೂಗು ದೊಡ್ಡದಾಗಿ ಕೇಳಿಬರುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಮಹತ್ವದ್ದು. ಈ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಮದನ್ ಬಿ. ಲೊಕೂರ್ ಬಹುಮುಖ್ಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು, ಗಲ್ಲುಶಿಕ್ಷೆ ನೀಡುವ ಸಂಬಂಧದಲ್ಲಿರುವ ಅಸ್ಪಷ್ಟತೆಯ ವಿಚಾರ. ಗಲ್ಲು ಶಿಕ್ಷೆ ನೀಡುವಲ್ಲಿನ ಮಾನದಂಡಗಳಲ್ಲಿರುವ `ಅನಿಶ್ಚಯ'ವನ್ನು ಕಾನೂನು ಆಯೋಗ ಮೊದಲು ಪರಿಹರಿಸಬೇಕೆಂದು ಅವರು ಹೇಳಿದ್ದಾರೆ. ಏಕೆಂದರೆ ಗಲ್ಲು ಶಿಕ್ಷೆ ವಿಚಾರದಲ್ಲಿ ನ್ಯಾಯಾಂಗ ಹಾಗೂ ಕಾರ್ಯಾಂಗ ವಿಭಿನ್ನ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ ಎಂಬುದನ್ನು ಅವರು ಎತ್ತಿ ಹೇಳಿದ್ದಾರೆ. ಗಲ್ಲು ಶಿಕ್ಷೆ ಹಾಗೂ ಅದರ ಜಾರಿಯಲ್ಲಿ ಯಾವುದೇ ಅನಿಶ್ಚಯಗಳಿರಬಾರದು. ಹಾಗೆಯೇ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿತವಾಗುವಂತಹದ್ದು ಆಕಸ್ಮಿಕ ಸಂಗತಿಯೂ ಆಗಬಾರದು ಎಂದು ಕೋರ್ಟ್ ಕಾಳಜಿ ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ. `ಅಪರೂಪದಲ್ಲಿ ಅಪರೂಪದ' ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಬಹುದು ಎಂದು ಸುಪ್ರೀಂಕೋರ್ಟ್ 1980ರ ದಶಕದಲ್ಲಿ ಹೇಳಿತ್ತು. ಆದರೆ `ಅಪರೂಪದಲ್ಲಿ ಅಪರೂಪದ್ದು' ಎಂಬುದರ ವ್ಯಾಖ್ಯಾನವೇ ಅಸ್ಪಷ್ಟ. ಹೀಗಾಗಿ ಇದು ಚರ್ಚಾಸ್ಪದ. `ಅಪರೂಪದಲ್ಲಿ ಅಪರೂಪ' ಎಂಬಂಥ ವ್ಯಾಖ್ಯಾನವನ್ನು ನ್ಯಾಯಾಧೀಶಕೇಂದ್ರಿತವಾಗಿ ಮಾಡಲಾಗುವುದಿಲ್ಲ. ನಿರ್ದಿಷ್ಟ ಅಪರಾಧ ಕುರಿತಂತೆ ಸಮಾಜದ ಭಾವನೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಇತ್ತೀಚೆಗೆ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. ಗಲ್ಲುಶಿಕ್ಷೆಗೊಳಗಾದವರ ಕ್ಷಮಾದಾನ ಅರ್ಜಿಗಳು ಇತ್ಯರ್ಥವಾಗಲು ಅನೇಕ ವರ್ಷ ಕಾಯಬೇಕಾಗಿರುವಂತಹ ಪರಿಸ್ಥಿತಿ ನಮ್ಮಲ್ಲಿದೆ. ಈ ತ್ರಿಶಂಕು ಸ್ಥಿತಿಗೆ ರಾಜಕೀಯ ಕಾರಣಗಳೂ ಕೆಲಸ ಮಾಡುತ್ತವೆ. ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಗಲ್ಲು ಶಿಕ್ಷೆ ರದ್ದಾಗಿದೆ ಎಂಬುದನ್ನು ಗಮನಿಸಬೇಕು. ಈ ನಿಟ್ಟಿನಲ್ಲಿ ಭಾರತವೂ ಗಂಭೀರ ಚಿಂತನೆಗಳನ್ನು ನಡೆಸುವುದು ಸೂಕ್ತ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಮನಕ್ಕೆ ಬಂದಲ್ಲಿ ಅದನ್ನು ಪೊಲೀಸರ ಗಮನಕ್ಕೆ ತರುವಂತಹ ಮನೋಭಾವ ಸಮಾಜದಲ್ಲಿ ಬೆಳೆಯಬೇಕು ಎಂದು ಸುಪ್ರೀಂಕೋರ್ಟ್ ಇದೇ ಸಂದರ್ಭದಲ್ಲಿ ನೀಡಿರುವ ಹಿತವಚನವೂ ಪ್ರಸ್ತುತ. ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012ರ ಅನ್ವಯ, ಇಂತಹ ಅಪರಾಧಗಳನ್ನು ಪೊಲೀಸರಿಗೆ ವರದಿ ಮಾಡುವ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿರುವುದು ಸಮಾಜದ ಕರ್ತವ್ಯ. ಹಾಗೆಯೇ ಬಾಲ ನ್ಯಾಯ ಮಂಡಳಿ ಅಥವಾ ಪೊಲೀಸರಿಗೆ ದೂರು ಕೊಡಲು ಬರುವ ವ್ಯಕ್ತಿಗೆ ಸೂಕ್ತ ರಕ್ಷಣೆ ಕೊಡಬೇಕಾದುದೂ ಅಗತ್ಯ ಎಂದುಕೋರ್ಟ್ ನಿರ್ದೇಶಿಸಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಸದ್ಯದ ಸಂದರ್ಭದಲ್ಲಿ ಈ ಮಾತುಗಳು ಸಮಾಜದ ಜವಾಬ್ದಾರಿಯನ್ನು ನೆನಪಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.