ಕೆಆರ್‌ಎಸ್ ತಂದ ಕಳವಳ ಬೇಸಿಗೆ ತೀವ್ರವಾಗುತ್ತಿದ್ದಂತೆ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬೆನ್ನಟ್ಟಿ ಬರುತ್ತಿವೆ. ಇನ್ನು ನಲವತ್ತು ದಿನಗಳಲ್ಲಿ ಕೃಷ್ಣರಾಜಸಾಗರದಲ್ಲಿ ಸಂಗ್ರಹವಾಗಿರುವ ನೀರು ಸಂಪೂರ್ಣ ಖಾಲಿಯಾಗುತ್ತದೆ ಎಂಬ ವರದಿಯನ್ನು ಜಲ ಮಂಡಳಿ ಅಧಿಕಾರಿಗಳೇ ನೀಡಿದ್ದಾರೆ. ರಾಜಧಾನಿಗೆ ಇದು ಕೆಟ್ಟ ಸುದ್ದಿ. ಬೆಂಗಳೂರು ಈ ಹಿಂದೆಂದೂ ಇಷ್ಟೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ನಿಸ್ಸಂದೇಹವಾಗಿ ನೀರಿನ ಸಮಸ್ಯೆ ದೊಡ್ಡದಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಲ ಶೇ.47 ಪ್ರಮಾಣದಷ್ಟು ಕಡಿಮೆ ನೀರಿನ ಸಂಗ್ರಹವಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ಹೇಳಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಕೃಷ್ಣರಾಜ ಸಾಗರ ಜಲಾಶಯದಿಂದ ಬೆಂಗಳೂರಿಗೆ ಮಾತ್ರವ್ಲ್ಲಲ ಮೈಸೂರು,ಮಂಡ್ಯ, ಮತ್ತು ರಾಮನಗರಗಳಿಗೂ ನೀರು ಸರಬರಾಜು ಮಾಡಲಾಗುತ್ತಿದೆ. ಹಾರಂಗಿ, ಕಬಿನಿ ಕೂಡ ಬರಿದಾಗಿರುವುದರಿಂದ ಪರ್ಯಾಯ ಆಲೋಚನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಕಾವೇರಿ ನೀರಾವರಿ ನಿಗಮ, ಜಲ ಸಂಪನ್ಮೂಲ ಇಲಾಖೆ ಮತ್ತು ಜಲಮಂಡಳಿ ಅಧಿಕಾರಿಗಳು ಸಭೆ ಸೇರಿ ಕೆಆರ್‌ಎಸ್‌ಗೆ ಹೇಮಾವತಿಯಿಂದ ನೀರು ತರುವ ಬಗ್ಗೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಆದರೆ ಇದು ಕಾರ್ಯಸಾಧುವೇ ಎನ್ನುವುದೇ ಪ್ರಶ್ನೆ. ಸಮಸ್ಯೆ ಬಿಗಡಾಯಿಸುವವರೆಗೆ ಈ ಬಗ್ಗೆ ಕಾರ್ಯತತ್ಪರವಾಗದೆ ಇದ್ದದ್ದು ಲೋಪ. ಮೇ ಕೊನೆಯವಾರದವರೆಗೆ ಪರಿಸ್ಥಿತಿಯನ್ನು ಕಾದು ನೋಡಿ ಆನಂತರ ಹೇಮಾವತಿ ನೀರನ್ನು ಬೆಂಗಳೂರಿಗೆ ತರುವ ಪ್ರಸ್ತಾಪ ಮಾಡಲಾಗಿದೆ. ಅತಿ ಹೆಚ್ಚಿನ ಜನಸಂಖ್ಯೆಯಿರುವ ಪ್ರದೇಶದಲ್ಲಿ ನೀರು ಅತ್ಯವಶ್ಯ. ತಡಮಾಡದೆ ಪರ್ಯಾಯ ವ್ಯವಸ್ಥೆ ಮಾಡುವುದು ಅನಾಹುತವನ್ನು ತಡೆಯಬಲ್ಲದು. ಬೆಂಗಳೂರು ನಗರದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನೀರಿನ ಸಮಸ್ಯೆ ತಲೆದೋರುತ್ತದೆ.ಈ ಬಾರಿ ಬೇಸಿಗೆಯ ತೀವ್ರತೆಯೂ ಹೆಚ್ಚಾಗಿರುವುದರಿಂದ ಕೊಳವೆಬಾವಿಗಳು ಬತ್ತಿಹೋಗಿವೆ. ಅದನ್ನೇ ಅವಲಂಬಿಸಿರುವ ಜನರ ಬವಣೆ ಹೇಳತೀರದಾಗಿದೆ. ಜನ ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆಹೋಗಬೇಕಾದ ಪರಿಸ್ಥಿತಿ ತಲೆದೋರಿದೆ.ಇದರಿಂದ ಬೇರೆ ರೀತಿಯ ಸಮಸ್ಯೆಗಳೂ ತಲೆದೋರಬಹುದಾದ ಸಂಭವವೂ ಇಲ್ಲದಿಲ್ಲ. ನಲವತ್ತು ದಿನಗಳ ನಂತರ ಕೃಷ್ಣರಾಜ ಸಾಗರ ಬರಿದಾದರೆ ಬೆಂಗಳೂರಿನ ನಾಗರಿಕರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ. ನಗರ ಬೆಳೆಯುತ್ತಲೇ ಇದೆ. ಬೆಳೆದ ನಗರಕ್ಕೆ ತಕ್ಕಂತೆ ನೀರು ಹಾಗೂ ಇತರ ಮೂಲಭೂತ ಸೌಕರ್ಯ ಕೊಡುವಲ್ಲಿ ಆಡಳಿತ ಹಿಂದೆ ಬಿದ್ದಿದೆ. ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗದಿರುವುದರಿಂದ ಬೇರೆ ಬೇರೆ ಜಲಮೂಲಗಳನ್ನು ಹುಡುಕಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗೆಗೆ ಸರ್ಕಾರ ಮತ್ತು ಜಲಮಂಡಳಿ ಗಂಭೀರವಾಗಿ ಚಿಂತಿಸಲು ಇದು ಸಕಾಲ. ಅಲ್ಲದೆ ಮಳೆಗಾಗಿ ಕಾಯುವುದರ ಜೊತೆಗೆ ನೀರಿನ ಮಿತಬಳಕೆಯ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.