ಅಪರಾಧ ರಾಜಕಾರಣದ ಅಪಾಯ ರಾಜಕೀಯ ಎಂದರೆ ಅಪರಾಧದ ಮತ್ತೊಂದು ಮುಖ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ರಾಜಕಾರಣ ರಾಕ್ಷಸ ಸ್ವರೂಪ ಪಡೆದಿದೆ. ರಾಜಕಾರಣಿಗಳೆಂದರೆ ಭ್ರಷ್ಟರು, ಲಂಚ ತೆಗೆದುಕೊಂಡು ಕೆಲಸ ಮಾಡುವ ಪುಢಾರಿಗಳು ಎಂದು ಹೇಳುತ್ತಿದ್ದ ದಿನಗಳಿದ್ದವು. ಈಗ ದರೋಡೆಕೋರರು, ಕೊಲೆಗಡುಕರು,ಅತ್ಯಾಚಾರಿಗಳು ಎಂದೂ ವ್ಯಾಖ್ಯಾನಿಸಲಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕ. ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ 220 ಮಂದಿ ಅಪರಾಧ ಹಿನ್ನೆಲೆಯಿರುವವರು ಎನ್ನುವ ಸಂಗತಿಯನ್ನು `ಕರ್ನಾಟಕ ಚುನಾವಣಾ ಕಾವಲು ಸಮಿತಿ' ಬಹಿರಂಗಪಡಿಸಿದೆ. ದಿಗಿಲುಗೊಳ್ಳುವ ಸಂಗತಿಯೆಂದರೆ ಎಲ್ಲ ರಾಷ್ಟ್ರೀಯ ಪಕ್ಷಗಳೂ ಅಪರಾಧ ಹಿನ್ನೆಲೆಯಿರುವ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಕಾಂಗ್ರೆಸ್‌ನಿಂದ 55, ಜೆಡಿಎಸ್ 48, ಕೆಜೆಪಿ 44, ಬಿಜೆಪಿ 45, ಬಿಎಸ್‌ಆರ್ 21, ಲೋಕಸತ್ತಾ ಪಕ್ಷದಿಂದ ಇಬ್ಬರು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ.ಕಳಂಕಿತರಿಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಣೆ ಮಾಡುವ ಪಕ್ಷಗಳೇ ತೋಳ್ಬಲ, ಧನಬಲ ಪ್ರದರ್ಶಿಸುವ ವ್ಯಕ್ತಿಗಳ ಮುಂದೆ ದುರ್ಬಲವಾಗಿ ಅವರನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ಪಕ್ಷದಲ್ಲಿ ದೃಢಮನಸ್ಥಿತಿ ಇಲ್ಲದನ್ನು ಹೇಳುತ್ತದೆ. ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರ ಪೈಕಿ 110ಅಭ್ಯರ್ಥಿಗಳ ವಿರುದ್ಧ ಗುರುತರ ಆಪಾದನೆ ಇದೆ. 13 ಅಭ್ಯರ್ಥಿಗಳು ಕೊಲೆ ಪ್ರಕರಣದಲ್ಲಿ ಭಾಗಿಗಳಾಗಿದ್ದಾರೆ. ಇಬ್ಬರು ಅತ್ಯಾಚಾರ ಆರೋಪಿಗಳಿದ್ದಾರೆ. ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷರೊಬ್ಬರ ವಿರುದ್ಧ `ದೇಶದ ವಿರುದ್ಧ ಯುದ್ಧ ಸಾರುವುದು, ಕೇಂದ್ರಾಡಳಿತ ಪ್ರದೇಶಗಳ ಮೇಲೆ ದಾಳಿ ನಡೆಸಿದ' ಪ್ರಕರಣ ದಾಖಲಾಗಿದೆ.ಸುಳ್ಳು ಲೆಕ್ಕ ನೀಡುವುದು ಮಾಮಾಲು ಕೃತ್ಯವೆನಿಸಿದೆ. ಮಹಿಳೆಯನ್ನು ಅಪಹರಿಸುವುದು, ಬಲವಂತ ವಿವಾಹ ಮಾಡಿಕೊಂಡಿರುವುದು, ಎರಡನೇ ವಿವಾಹವಾಗಿರುವುದು, ಹೆದರಿಸಿ ಆಸ್ತಿ ಕಸಿದುಕೊಳ್ಳುವುದು, ಪ್ರಾಣಬೆದರಿಕೆ, ದರೋಡೆ, ಡಕಾಯಿತಿ ಹೀಗೆ ಎಲ್ಲ ರೀತಿಯ ಅಪರಾಧಗಳನ್ನು `ಜನ ಪ್ರತಿನಿಧಿ' ಗಳಾಗಲು ಹಾತೊರೆಯುತ್ತಿರುವ ಅಭ್ಯರ್ಥಿಗಳು ಬಿರುದುಗಳಂತೆ ಘೋಷಿಸಿಕೊಂಡಿರುವುದು ನಾಚಿಕೆಗೇಡು. ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಅತಿ ಹೆಚ್ಚಿನ ರಾಕ್ಷಸೀರೂಪದ ರಾಜಕಾರಣಿಗಳಿರುವುದು ದಾಖಲೆಯಲ್ಲಿ ಉಳಿದುಕೊಂಡಿತ್ತು. ಸೌಮ್ಯ ರಾಜಕಾರಣಕ್ಕೆ ಹೆಸರಾದ ಕರ್ನಾಟಕಕ್ಕೂ ಈ ತೋಳ್ಬಲ ಸಂಸ್ಕೃತಿ ಪ್ರವೇಶವಾಗಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಮತ್ತೊಂದು ವರದಿಯ ಪ್ರಕಾರ ರಾಷ್ಟ್ರದಲ್ಲಿ 1448 ಸಂಸದರು, ಶಾಸಕರು ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ. ಇವರಲ್ಲಿ 641 ಮಂದಿ ಕೊಲೆ, ಅತ್ಯಾಚಾರ, ಅಪಹರಣದಂತಹ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ 206 ಸಂಸದರ ಪೈಕಿ 44 ಮಂದಿ ಅಪರಾಧ ಹಿನ್ನೆಲೆ ಉಳ್ಳವರು. ದೌರ್ಜನ್ಯ ನಡೆಸಿ ಅಧಿಕಾರ ಹಿಡಿಯುವ ಅಭ್ಯರ್ಥಿಗಳು ತಮ್ಮ ಸ್ಥಾನಮಾನವನ್ನು ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳುತ್ತಾರೆ. ಅವರಿಗೆ ರಾಜಕೀಯ ಕ್ಷೇತ್ರವೆನ್ನುವುದು ಅಪರಾಧಗಳನ್ನು ಮುಚ್ಚಿಕೊಳ್ಳಲು ಇರುವ ಸುರಕ್ಷಿತ ತಾಣ.ತಮ್ಮ ಮೇಲಿನ ರಾಜಕೀಯದಿಂದ ಅಪರಾಧಿಗಳನ್ನು ದೂರವಿರಿಸುವ ವಿಷಯವನ್ನು ಚುನಾವಣಾ ಆಯೋಗ ಮತ್ತೆಮತ್ತೆ ಪ್ರಸ್ತಾಪಿಸುತ್ತಲೇ ಇದೆ. ಆದರೆ ಇದಕ್ಕೆ ಫಲ ದೊರೆತಿಲ್ಲ. ಅಭ್ಯರ್ಥಿಗಳಿಗೆ ಮಾನದಂಡವನ್ನು ವಿಧಿಸಬೇಕು ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ಆದರೆ ಇವೆಲ್ಲಾ ಕುರಿ ಕಾಯಲು ತೋಳ ನೇಮಿಸಿದ ಕತೆಯಂತಾಗಿದೆ. ಸುಪ್ರೀಂಕೋರ್ಟ್‌ನ ಆಶಯವನ್ನು ವಿಫಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಆರ್ಹತೆಯ ನಿರ್ಬಂಧಗಳನ್ನು ಸಡಿಲಗೊಳಿಸಿದ ತಿದ್ದುಪಡಿಯನ್ನು ಜನಪ್ರಾತಿನಿಧ್ಯ ಕಾಯಿದೆಗೆ ತಿದ್ದುಪಡಿ ತಂದವು. ಕೊನೆಗೂ ಸುಪ್ರಿಂಕೋರ್ಟ್ ಈ ತಿದ್ದುಪಡಿಯನ್ನು ಅನೂರ್ಜಿತಗೊಳಿಸಿತು. ಅಪರಾಧ ಹಿನ್ನೆಲೆಯಿರುವ ರಾಜಕಾರಣಿಗಳನ್ನು ನ್ಯಾಯಾಂಗವೇ ವಿಚಾರಿಸಿಕೊಳ್ಳಬೇಕು.ಇಲ್ಲದಿದ್ದರೆ ಈ ವಿಷ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವರಾಷ್ಟ್ರಕ್ಕೇ ನಂಜೇರಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.