ನಗರಗಳ ಬಡವರ ಆರೋಗ್ಯ ನಗರ ಹಾಗೂ ಪಟ್ಟಣ ಪ್ರದೇಶಗಳ ಬಡ ಜನತೆಯ ಆರೋಗ್ಯ ರಕ್ಷಣೆ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಕಡೆಗೂ ಎಚ್ಚೆತ್ತುಕೊಂಡಿದೆ. ನಗರಗಳ ಬಡವರಿಗೆ ಆರೋಗ್ಯ ರಕ್ಷಣೆ ನೀಡುವಂತಹ ರಾಷ್ಟ್ರೀಯ ನಗರ ಆರೋಗ್ಯ ಕಾರ್ಯಕ್ರಮಕ್ಕೆ ಕೇಂದ್ರ ಸಂಪುಟ ಹಸಿರು ನಿಶಾನೆ ತೋರಿದೆ. ಗ್ರಾಮೀಣ ಜನರಿಗೆ ಆರೋಗ್ಯ ರಕ್ಷಣೆ ನೀಡುವಂತಹ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಕಾರ್ಯಕ್ರಮ ಆರಂಭವಾದದ್ದು 2005ರಲ್ಲಿ. ಇದೇ ತರಹದ ಕಾರ್ಯಕ್ರಮವನ್ನು ನಗರಗಳ ಬಡವರಿಗೆ ರೂಪಿಸಲು ಬಹುತೇಕ ಎಂಟು ವರ್ಷಗಳೇ ಹಿಡಿದಿವೆ. ಗ್ರಾಮ ಹಾಗೂ ನಗರಗಳ ಬಡವರನ್ನು ಗುರಿಯಾಗಿಸಿಕೊಂಡ ಈ ಎರಡೂ ಕಾರ್ಯಕ್ರಮಗಳು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಭಾಗವಾಗಿವೆ. ಸಾರ್ವತ್ರಿಕ ಚುನಾವಣೆಗಳು ಸನಿಹದ್ಲ್ಲಲೇ ಇರುವಾಗ ಇಂತಹದೊಂದು ಜನಪ್ರಿಯ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ. ರಾಜಕೀಯ ಲಾಭ ಪಡೆಯುವ ಉದ್ದೇಶದ ಆಯಾಮವನ್ನು ಇಲ್ಲಿ ತಳ್ಳಿಹಾಕಲಾಗದು. ಆದರೆ ಈ ಯೋಜನೆಯಿಂದಾಗಬಹುದಾದ ಅನುಕೂಲಗಳನ್ನೂ ಗಮನಿಸಬೇಕು. ಬಡವರಿಗೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆ ಎಷ್ಟೊಂದು ಸುಧಾರಿಸಬೇಕಿದೆ ಎಂಬುದಕ್ಕೆ ರಾಷ್ಟ್ರದಲ್ಲಿನ ಆರೋಗ್ಯ ಸೂಚ್ಯಂಕಗಳೇ ಸಾಕ್ಷಿ. ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳ ಪೌಷ್ಟಿಕತೆ ಮಟ್ಟ ತೀರಾ ಕೆಳಮಟ್ಟದಲ್ಲಿದೆ. ಕೊಳೆಗೇರಿಗಳಲ್ಲಿ ಹುಟ್ಟುವ 10 ಮಕ್ಕಳಲ್ಲಿ ಒಂದು ಮಗು ಐದು ವರ್ಷದೊಳಗೇ ಸಾಯುತ್ತದೆ ಎಂಬುದು ಒಂದು ಅಂದಾಜು. ಲಭ್ಯವಿರುವ ಆರೋಗ್ಯ ಸೇವೆಯ ಅಲ್ಪವೆಚ್ಚವನ್ನೂ ಭರಿಸಲಾಗದಂತಹ ಸ್ಥಿತಿಯಲ್ಲಿ ಅನೇಕ ಬಡವರಿದ್ದಾರೆ. ಇದರಿಂದಾಗಿಯೇ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯ. ಈಗ ಐವತ್ತು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 779 ಪಟ್ಟಣಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರೂ 22,500 ಕೋಟಿಯ ಈ ಯೋಜನೆ 7.75 ಕೋಟಿ ಜನರ ಆರೋಗ್ಯ ರಕ್ಷಣೆಗೆ ನೆರವಾಗಲಿದೆ. ಶಿಶು ಮರಣ, ಮಾತೃ ಮರಣ ಇಳಿಕೆ ಮತ್ತಿತರ ಎಲ್ಲಾ ಆರೋಗ್ಯ ಸಂಬಂಧಿ ವಿಚಾರಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ. 50,000ದಿಂದ 60,000 ಜನಸಂಖ್ಯೆಗೆ ಒಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಐದರಿಂದ ಆರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ ದೊಡ್ಡ ನಗರಗಳಲ್ಲಿ ಒಂದು ನಗರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಈ ಯೋಜನೆಯಲ್ಲಿದೆ. ಜೊತೆಗೆ 10,000 ಜನಸಂಖ್ಯೆಗೆ ಸಹಾಯಕ ನರ್ಸಿಂಗ್ ಮಿಡ್‌ವೈವ್ಸ್‌ಗಳು ಹಾಗೂ 200ರಿಂದ 500 ಮನೆಗಳಿಗೆ `ಆಶಾ' ಕಾರ್ಯಕರ್ತೆಯರನ್ನು ಒದಗಿಸುವ ಆಲೋಚನೆಯೂ ಇದೆ. ಈ ಹಿಂದೆ, ಹಣ ದುರ್ಬಳಕೆ ಹಾಗೂ ಸೋರಿಕೆಯಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಕಾರ್ಯಕ್ರಮ ಅನೇಕ ಕಡೆ ವಿಫಲವಾಗಿದೆ. ಈ ಪಾಠಗಳು ನಗರ ಆರೋಗ್ಯ ಕಾರ್ಯಕ್ರಮ ಜಾರಿ ಸಂದರ್ಭದಲ್ಲಿ ಮಾರ್ಗದರ್ಶಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.