ಕಳಂಕ ತೊಳೆಯಿರಿ ಮತ್ತೊಂದು ಲಂಚದ ಆರೋಪದ ಹಗರಣದ ಸುಳಿಗೆ ಯುಪಿಎ ಸರ್ಕಾರ ಸಿಲುಕಿಕೊಂಡಿದೆ. ರೈಲ್ವೆ ಮಂಡಳಿಯ ಸದಸ್ಯ(ವಿದ್ಯುತ್) ಹುದ್ದೆ ಕೊಡಿಸುವುದಕ್ಕಾಗಿ ರೈಲ್ವೆ ಅಧಿಕಾರಿಯೊಬ್ಬರಿಂದ ರೂ 90 ಲಕ್ಷ ಲಂಚ ಪಡೆದ ಆರೋಪದ ಮೇಲೆ ಕೇಂದ್ರ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರ ಸೋದರಳಿಯ ವಿಜಯ್ ಸಿಂಗ್ಲ ಸಿಬಿಐನಿಂದ ಬಂಧನಕ್ಕೊಳಗಾಗಿರುವುದು ಸರ್ಕಾರವನ್ನು ಮುಜುಗರಕ್ಕೀಡುಮಾಡಿದೆ. ಕಲ್ಲಿದ್ದಲು ಹಗರಣ ತನಿಖೆಯ ವಸ್ತುಸ್ಥಿತಿ ವರದಿಯನ್ನು ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್‌ಗೆ ತೋರಿಸಲಾಗಿತ್ತು ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರ ಸೃಷ್ಟಿಸಿದ ವಿವಾದದ ಕಾವು ಇನ್ನೂ ಕಡಿಮೆಯಾಗಿಲ್ಲ. ಆಗಲೇ ಬಹಿರಂಗವಾಗಿರುವ ಈ ಲಂಚದ ಹಗರಣ ಯುಪಿಎ ಸರ್ಕಾರದ ವರ್ಚಸ್ಸಿಗೆ ಮತ್ತಷ್ಟು ಹಾನಿಯುಂಟು ಮಾಡಿದೆ. ಆರೋಪಗಳಿಗೆ ಸಿಲುಕಿರುವ ಈ ಇಬ್ಬರು ಸಚಿವರೂ ಪಂಜಾಬ್‌ಗೆ ಸೇರಿದವರು. ಜೊತೆಗೆ ಪ್ರಧಾನಿ ಮನಮೋಹನ್ ಸಿಂಗ್‌ಗೆ ನಿಕಟವಾಗಿರುವವರು ಎಂಬುದು ಕಾಕತಾಳೀಯ. ಈ ಹೊಸ ಪ್ರಕರಣದಲ್ಲಿ ಈವರೆಗೆ ಬನ್ಸಲ್ ಅವರ ಹೆಸರನ್ನು ಸಿಬಿಐ ಪ್ರಸ್ತಾಪಿಸಿಲ್ಲ ನಿಜ. ಆದರೆ ಅವರಿಂದ ಸ್ಪಷ್ಟೀಕರಣ ಪಡೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ರೈಲ್ವೆ ಮಂಡಳಿ ಸದಸ್ಯ ಹುದ್ದೆಯನ್ನು ರೈಲ್ವೆ ಸಚಿವರ ಒಪ್ಪಿಗೆ ಇಲ್ಲದೆ ನೀಡುವುದು ಸಾಧ್ಯವಿಲ್ಲ ಎಂಬಂತಹ ಸೂಕ್ಷ್ಮವನ್ನು ಪರಿಗ್ರಹಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ರೈಲ್ವೆ ಖಾತೆ ಸಿಕ್ಕ್ದ್ದಿದೇ 17 ವರ್ಷಗಳ ನಂತರ. ಈ ಹಿಂದೆ ತೃಣಮೂಲ ಕಾಂಗ್ರೆಸ್ ಈ ಖಾತೆ ಹೊಂದಿತ್ತು. ಈಗ ಕಾಂಗ್ರೆಸ್‌ನ ಸಚಿವರಿಗೆ ಅಂಟಿಕೊಂಡಿರುವ ಈ ಕಳಂಕದ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂಬಂತಹ ಆಗ್ರಹ ಸಹಜವಾದದ್ದು. ಭಾರತದ ರೈಲ್ವೆ ಮಂಡಳಿ ಅತ್ಯಂತ ಉನ್ನತ ನಿರ್ಧಾರಗಳನ್ನು ಕೈಗೊಳ್ಳುವ ಸಂಸ್ಥೆ. ಭಾರತೀಯ ರೈಲ್ವೆಗೆ ಸಂಬಂಧಿಸಿದ ಎಲ್ಲಾ ನೀತಿಗಳು ಹಾಗೂ ಯೋಜನೆಗಳನ್ನು ಅಂಗೀಕರಿಸುವ ಅಪಾರ ಅಧಿಕಾರ, ಅಧ್ಯಕ್ಷ ಸೇರಿದಂತೆ ಏಳು ಸದಸ್ಯರನ್ನು ಹೊಂದಿರುವ ಈ ಮಂಡಳಿಗಿದೆ. ಈ ವರ್ಷ ರೂ 63,363 ಕೋಟಿಯಷ್ಟು ಭಾರಿ ಬಜೆಟ್ ಹೊಂದಿರುವ ರೈಲ್ವೆಯ ಎಲ್ಲಾ ಯೋಜನೆಗಳ ಗುತ್ತಿಗೆ ನೀಡಿಕೆಗೆ ಮಂಡಳಿಯ ಹಸಿರು ನಿಶಾನೆ ಬೇಕು. ಮಂಡಳಿಯ ಹುದ್ದೆಯ ಆಕರ್ಷಣೆಗೆ ಇದೇ ಮೂಲ. ರಾಜಕೀಯ ಹಾಗೂ ಹಣದ ಪ್ರಭಾವ ಮೇಲುಗೈ ಸಾಧಿಸುವ ಈ ಪ್ರಕ್ರಿಯೆಯಲ್ಲಿ ನೇಮಕಾತಿ ನಿಯಮಗಳ ಉಲ್ಲಂಘನೆಗಳಾಗುತ್ತಿವೆ ಎಂಬಂತಹ ಆರೋಪಗಳು ಮೊದಲಿನಿಂದಲೂ ಇವೆ. ಅಂದಾಜು 14 ಲಕ್ಷ ನೌಕರರನ್ನು ಹೊಂದಿರುವ ಬೃಹತ್ ಭಾರತೀಯ ರೈಲ್ವೆಯ ಸೇವಾ ಗುಣಮಟ್ಟ ಹೆಚ್ಚಿನದಾಗಿಲ್ಲ ಎಂಬಂತಹ ದೂರೂ ಇದ್ದೇಇದೆ. ಇದಕ್ಕೆ ರಾಜಕೀಯ ಹಸ್ತಕ್ಷೇಪ, ನಿರ್ವಹಣೆ ಕೊರತೆ ಹಾಗೂ ಭ್ರಷ್ಟಾಚಾರವೇ ಕಾರಣ. ದೊಡ್ಡ ಮಟ್ಟದಲ್ಲೇ ಈಗ ಹೊಸದೊಂದು ಭ್ರಷ್ಟಾಚಾರದ ಆರೋಪ ಬಯಲಾಗಿದೆ. ಈ ಹಗರಣದ ತನಿಖೆ ಮುಕ್ತವಾಗಿ, ನ್ಯಾಯಯುತವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಯುಪಿಎ ಸರ್ಕಾರ ಮುಂದಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.