ಮತದಾರರ ಮಂತ್ರಶಕ್ತಿ ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದರೆ, ಅತ್ಯಧಿಕ ಸಂಖ್ಯೆಯಲ್ಲಿ ಮತದಾನ ನಡೆದಿದ್ದರೆ ಅದರ ಎಲ್ಲ ಯಶಸ್ಸು ಚುನಾವಣಾ ಆಯೋಗಕ್ಕೆ ಸಲ್ಲುತ್ತದೆ. ಹಿಂದಿನ ವರ್ಷಗಳ ಚುನಾವಣಾ ಚಿತ್ರಗಳು ಮಸುಕಾಗಿ, ಬಣ್ಣಕಳೆದುಕೊಂಡಿವೆ. ಚುನಾವಣೆ ಎಂದರೆ ಅದು ಅಕ್ರಮಗಳ ಸಂತೆ, ಮತದಾನ ಎಂದರೆ ಆಮಿಷಗಳ ಗಂಟು ಎಂದು ಹೇಳುವ ನಾಣ್ಣುಡಿಗಳಿಗೆ ಚುನಾವಣಾ ಆಯೋಗದ ಬಿಗಿಕ್ರಮಗಳು ವಿದಾಯ ಹೇಳುವಂತೆ ಮಾಡಿದೆ.ರಾಜ್ಯದಲ್ಲಿ ಭಾನುವಾರ ನಡೆದ ಮತದಾನದಲ್ಲಿ ಸುಮಾರು ಶೇ 70 ರಷ್ಟು ಮತಚಲಾವಣೆ ಆಗಿರುವುದು ಒಂದು ದಾಖಲೆ. ಇಂತಹ ದಿನಗಳು ಮರುಕಳಿಸಿರುವುದೂ ಸ್ವಾಗತಾರ್ಹ ಬೆಳವಣಿಗೆ. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮೂರುತಿಂಗಳ ಹಿಂದೆಯೇ ಕ್ರಮ ತೆಗೆದುಕೊಂಡಿರುವುದರಿಂದ ಬಹಳಷ್ಟು ಜನ ಅವಕಾಶ ಪಡೆದರು. ಇದರ ಜೊತೆಗೆ ಮತದಾರರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಚುನಾವಣಾ ಆಯೋಗ ಮಾಡಿತು. ಅದು ಫಲಕೊಟ್ಟಿದೆ. ಚುನಾವಣೆ ಎನ್ನುವುದೇ ಭ್ರಷ್ಟರ ಮೆರವಣಿಗೆ ಎನ್ನುವ ಭಾವನೆ ಜನರಲ್ಲಿ ಬಲವಾಗಿ ಬೇರೂರಿತ್ತು. ಅಭ್ಯರ್ಥಿಗಳು ಭ್ರಷ್ಟರಾಗುವುದರ ಜೊತೆಗೆ ಮತದಾರರನ್ನೂ ಭ್ರಷ್ಟರಾಗಲು ಪ್ರೇರೇಪಿಸುತ್ತಾ ಮತಖರೀದಿ ಮಾಡುವುದು ಪ್ರತೀತಿಯೇ ಆಗಿಬಿಟ್ಟಿತ್ತು. ಅಂತಹ ಕೋಟೆಗಳನ್ನೆಲ್ಲಾ ಚುನಾವಣಾ ಆಯೋಗ ಬಿಗಿಕ್ರಮಗಳ ಮೂಲಕ ಛಿದ್ರ ಮಾಡಿದೆ. ಪ್ರಚಾರ ವೆಚ್ಚಕ್ಕೆ ಮಿತಿ ವಿಧಿಸಿದ್ದು,ಗೋಡೆಗಳ ಮೇಲೆ ಗೀಚುವ ಪದ್ಧತಿಗೆ ವಿದಾಯ ಹೇಳ್ದ್ದಿದು, ಕಾಸಿಗಾಗಿ ಸುದ್ದಿಯ ಮೇಲೆ ನಿಗಾ ಇಟ್ಟಿದ್ದು, ಅಕ್ರಮ ಹಣ ಜಪ್ತಿ ಮಾಡಿದ್ದು ಇವೆಲ್ಲಾ ಪಕ್ಷಾತೀತವಾಗಿ ನಡೆಯಿತು. ದೊಡ್ಡ ನಾಯಕರೆನ್ನಿಸಿಕೊಂಡವರ ಮೇಲೂ ದಾಳಿ ನಡೆಯಿತು. ಹೀಗಾಗಿ ಎಲ್ಲ ಅಭ್ಯರ್ಥಿಗಳೂ ಶಕ್ತಿಹೀನರಾದರು. ಹೀಗಾಗಿ ಈ ಬಾರಿ ಕರ್ನಾಟಕದ ಜನ ನೋಡಿದ್ದು ಹೊಸ ರೀತಿಯ ಚುನಾವಣೆ. ಆದುದರಿಂದಲೇ ಈ ಬಾರಿ ಚುನಾವಣಾ ಘರ್ಷಣೆಗಳು ಬೆರಳೆಣಿಕೆಯಷ್ಟು ಮಾತ್ರ ನಡೆದಿವೆ. ಮತದಾನ ಪ್ರಜಾಪ್ರಭುತ್ವದ ಶಕ್ತಿ. ಜನಶಕ್ತಿ ಒಂದಾದರೆ ಎಂತಹ ಪ್ರಭುತ್ವವೂ ತಲೆಕೆಳಗಾಗುತ್ತದೆ. ಕರ್ನಾಟಕವಷ್ಟೇ ಅಲ್ಲದೆ ದೇಶದಲ್ಲೇ ಭ್ರಷ್ಟಾಚಾರ ಹಿಮಾಲಯದೆತ್ತರಕ್ಕೆ ಏರಿದೆ. ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾ ಸಾಗಿದ್ದಾರೆ. ಬಡವರ ಅಭಿವೃದ್ಧಿಗಾಗಿ ಮೀಸಲಾದ ದುಡ್ಡು ವಾಮಮಾರ್ಗಗಳಲ್ಲಿ ಕಬಳಿಕೆಗೆ ತುತ್ತಾಗಿದೆ. ಇದಕ್ಕೆಲ್ಲಾ ಮತದಾರನಲ್ಲಿಲ್ಲದ ಒಗ್ಗಟ್ಟೇ ಕಾರಣ. ಈ ದೇಶದ ಭವಿಷ್ಯ ದೇಶಭಕ್ತರೆಂಬ ದರೋಡೆಕೋರರಿಗೇ ಮೀಸಲಾದದ್ದು, ಇವರಲ್ಲಿ ಯಾವ ತೆರನ ದರೋಡೆಕೋರರ ಗುಂಪು ಮುಂದೆ ಬರುತ್ತದೆಯೆಂದು ಹೇಳುವುದು ಕಷ್ಟ... ಎಂದು ಶಿವರಾಮಕಾರಂತರು ಒಂದೆಡೆ ಹೇಳಿರುವುದು ಅರ್ಥಪೂರ್ಣವಾಗಿದೆ. ಈ ಬಾರಿ ಕರ್ನಾಟಕದ ಜನರ ಮುಂದೆ ಐದು ಪ್ರಮುಖ ಪಕ್ಷಗಳು ಪ್ರಬಲ ಸ್ಪರ್ಧೆ ಒಡ್ಡಿದ್ದವು. ಮತದಾರರಿಗೆ ಆಶ್ವಾಸನೆಗಳನ್ನು ಕೊಡುವುದರಲ್ಲಿ ಎಲ್ಲ ಪಕ್ಷಗಳೂ ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗೆ ಬಿದ್ದಿದ್ದವು. ಆಶ್ವಾಸನೆಗಳು ಅದ್ಭುತವಾಗಿದ್ದರೂ ಈಡೇರಿಕೆ ಆಗುತ್ತದೆಯೇ? ಜಾತಿ, ಧರ್ಮ, ವೈಯಕ್ತಿಕ ವರ್ಚಸ್ಸು,ಅನುಕಂಪ ಹೀಗೆ ವಿವಿಧ ರೀತಿಯ ಪ್ರಭಾವಗಳು ಮತದಾರನ ಮನಸ್ಸಿನಲ್ಲಿ ಕವಲುದಾರಿಗಳನ್ನೇ ಸೃಷ್ಟಿಸಿತ್ತು. ಯಾವುದೇ ಪಕ್ಷಗಳಿಗೆ ಬಹುಮತವಿಲ್ಲದೆ ಹೋದರೆ ಮತ್ತೆ ಅತಂತ್ರ ಸ್ಥಿತಿ ತಲೆದೋರುತ್ತದೆ. ಈ ಹಿಂದಿನ ಚುನಾವಣೆಗಳಲ್ಲಿ ಪಕ್ಷಗಳು ಅಡ್ಡದಾರಿ ಹಿಡಿದದ್ದೂ ಈ ಬಹುಮತ ಗಳಿಕೆಗಾಗಿ ಎನ್ನುವುದನ್ನು ಮರೆಯಬಾರದು. ಯಾವುದೇ ಒಂದು ಪಕ್ಷಕ್ಕೆ ಜನಾದೇಶ ಕೊಟ್ಟಿರುವ ಮತದಾರನ ಪ್ರಬುದ್ಧ ನಿಲುವು ಮತಯಂತ್ರ ತೆರೆದಾಗ ವ್ಯಕ್ತವಾದರೆ ಅದು ಕರ್ನಾಟಕದಲ್ಲಿ ಹೊಸ ಶಕೆಗೆ ಕಾರಣವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.