ನಿರ್ಲಕ್ಷ್ಯ ಸಲ್ಲದು ಲಡಾಖ್‌ನ ದೌಲತ್ ಬೇಗ್ ಓಲ್ಡಿ (ಡಿಬಿಓ) ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ 19 ಕಿಮೀ ವ್ಯಾಪ್ತಿಯಲ್ಲಿ ಏಪ್ರಿಲ್ 15ರಿಂದ ಬೀಡು ಬಿಟ್ಟಿದ್ದ ಚೀನೀ ಸೇನೆ ವಾಪಸಾಗಿದೆ. ಇದರಿಂದ ಉಭಯ ದೇಶಗಳ ಮಧ್ಯೆ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ತಾತ್ಕಾಲಿಕವಾಗಿ ಶಮನವಾಗಿರುವುದು ಮಹತ್ವದ ಬೆಳವಣಿಗೆ. ಮೂರು ವಾರಗಳ ಕಾಲ ಉಭಯ ದೇಶಗಳ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿತ್ತು. ಈ ಮಾಸಾಂತ್ಯಕ್ಕೆ ಚೀನಾದ ಹೊಸ ಪ್ರಧಾನಿ ಲಿ ಕೆಕಿಯಾಂಗ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಚೀನಾ ಪ್ರಧಾನಿಯಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ವಿದೇಶ ಭೇಟಿಗೆ ಲಿ ಕೆಕಿಯಾಂಗ್ ಅವರು ಆಯ್ದುಕೊಂಡಿರುವ ರಾಷ್ಟ್ರ ಭಾರತ. ಇದಕ್ಕಾಗಿ ನವದೆಹಲಿ ಹಾಗೂ ಬೀಜಿಂಗ್ ಸಜ್ಜಾಗುತ್ತಿರುವಾಗಲೇ ಈ ಬಿಕ್ಕಟ್ಟು ತಲೆದೋರಿದ್ದು ದೊಡ್ಡ ಅಡೆತಡೆಯಾಗಿತ್ತು. ಈಗ ಈ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಯಥಾಸ್ಥಿತಿ ಕಾಯ್ದುಕೊಳ್ಳಲು ಉಭಯ ಸರ್ಕಾರಗಳೂ ಒಪ್ಪಿಕೊಂಡಿರುವುದರಿಂದ ಈ ಭೇಟಿಯ ಸುತ್ತ ಆವರಿಸಿದ್ದ ಕರಿ ನೆರಳು ಮರೆಯಾದಂತಾಗಿದೆ. ಈ ಭೇಟಿಯ ಪೂರ್ವಭಾವಿ ಮಾತುಕತೆಗಳು ಹಾಗೂ ದ್ವಿಪಕ್ಷೀಯ ವಿಚಾರಗಳ ಚರ್ಚೆಗಾಗಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರು ಮೇ 9-10ರಂದು ಚೀನಾಗೆ ಭೇಟಿ ನೀಡುವುದೂ ಈಗ ಖಚಿತವಾಗಿದೆ. ಉನ್ನತ ಮಟ್ಟದ ಕಠಿಣ ಸಂಧಾನಗಳು ಹಾಗೂ ತೀವ್ರ ರಾಜತಾಂತ್ರಿಕ ಸಮಾಲೋಚನೆಗಳ ನಂತರ ಈ ಬಿಕ್ಕಟ್ಟು ಸದ್ಯಕ್ಕಂತೂ ಶಮನಗೊಂಡಿದೆ. ದ್ವಿಪಕ್ಷೀಯ ಬಾಂಧವ್ಯಗಳ ವಿಸ್ತೃತ ಹಿತಾಸಕ್ತಿಗಳಿಗೆ ಆದ್ಯತೆಯನ್ನು ನೀಡಿ ಪರಸ್ಪರ ಸಹಕಾರ ಹಾಗೂ ರಚನಾತ್ಮಕ ಧೋರಣೆಗಳನ್ನು ತಾಳುವ ಮೂಲಕ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಾಗಿದೆ ಎಂದು ಚೀನಾ ಹೇಳಿಕೊಂಡಿದೆ. ಆದರೆ ಈ ಸಂಬಂಧದಲ್ಲಿ ಎರಡೂ ದೇಶಗಳ ಮಧ್ಯೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ ಎಂಬುದು ಪರಿಶೀಲನಾರ್ಹ. ಉಭಯ ದೇಶಗಳ ಗಡಿಗಳನ್ನು ನಿಖರವಾಗಿ ಗುರುತಿಸದಿರುವುದು ಸಮಸ್ಯೆಯ ಮೂಲ. ಗಡಿ ರೇಖೆಗಳಲ್ಲಿನ ಅಮೂರ್ತತೆಯನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳೂ ಗಂಭೀರವಾಗಿ ಪ್ರಯತ್ನಿಸಬೇಕಿವೆ. ಆರ್ಥಿಕ ವಿಚಾರಗಳಿಗೆ ಭಾರತ ಹಾಗೂ ಚೀನಾ ತೀವ್ರ ಗಮನವನ್ನು ನೀಡುತ್ತಿವೆ. ಹೀಗಾಗಿಯೇ ಗಡಿ ವಿವಾದವಿದ್ದರೂ ಭಾರತ - ಚೀನಾ ನಡುವಿನ ವ್ಯಾಪಾರ ಬಾಂಧವ್ಯ ಉನ್ನತ ಮಟ್ಟದಲ್ಲೇ ಇದೆ. ಆದರೆ ಪರಸ್ಪರ ಅರಿವಿನ ಆಧಾರದ ಮೇಲೆ ಬಾಂಧವ್ಯ ಬಲವರ್ಧನೆಯತ್ತ ಹೆಚ್ಚಿನ ಪ್ರಯತ್ನಗಳಾಗಿಲ್ಲ. ಚೀನಾ ಜೊತೆ ಗಡಿ ತಂಟೆ ಪ್ರಕರಣಗಳು ಆಗಾಗ್ಗೆ ಮರುಕಳಿಸುತ್ತಲೇ ಇರುತ್ತವೆ. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಜೊತೆಗೆ ಈ ಕಿರಿಕಿರಿಗಳ ನಿವಾರಣೆಗೆ, ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಉಭಯ ದೇಶಗಳೂ ಪ್ರಯತ್ನ ಮುಂದುವರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.