ಬದುಕು ಅರಳಿಸುವ ಫಲಿತಾಂಶ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ತಿರುವು ತೆಗೆದುಕೊಳ್ಳುವ ಕಾಲಘಟ್ಟಗಳಾದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ಏಕಕಾಲಕ್ಕೆ ಪ್ರಕಟವಾಗುವ ಮೂಲಕ ವಿದ್ಯಾರ್ಥಿಲೋಕದಲ್ಲಿ ಕನಸುಗಳು ಅರಳಿಕೊಂಡಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 77.47 ವಿದ್ಯಾರ್ಥಿಗಳು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.59.36 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎರಡೂ ಕಡೆಯೂ ಬಾಲಕಿಯರೇ ಮೇಲುಗೈ ಸಾಧಿಸಿರುವುದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉತ್ತೀರ್ಣ ಸಂಖ್ಯೆ ಹೆಚ್ಚಾಗಿರುವುದು ಒಂದು ಸಾಧನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ 1.34 ರಷ್ಟು ಏರಿಕೆಯಾಗಿದೆ. ಪಿಯುಸಿಯಲ್ಲೂ ಶೇ 2.33 ರಷ್ಟು ಏರಿಕೆಯಾಗಿದೆ. ಭವಿಷ್ಯದ ಪೀಳಿಗೆಗಳ ಸರ್ವಾಂಗೀಣ ಸಾಮರ್ಥ್ಯವನ್ನು ರೂಪಿಸಲು ಒಳ್ಳೆಯ ಶಿಕ್ಷಣದ ಅಡಿಪಾಯ ಅತ್ಯವಶ್ಯ.ಶಿಕ್ಷಣ ಕ್ಷೇತ್ರದಲ್ಲಿ ಆ ದಿಸೆಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನಗಳು ಆಶಾದಾಯಕ ಫಲಿತಾಂಶವನ್ನು ಕೊಡುವುದು ಸಹಜ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಏರಿಕೆಯ ಸಾಧನೆ ಅಂಥ ಪ್ರಯತ್ನಗಳಿಗೆ ಸಿಕ್ಕ ಫಲ. ಇದು ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ದಾಖಲೆ. ಆದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಫಲಿತಾಂಶದಲ್ಲಿ ಹಿಂದುಳಿದಿವೆ.ಬೀದರ್ ಜಿಲ್ಲೆ ಹಲವು ವರ್ಷಗಳಿಂದ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿರುವ ಬಗ್ಗೆ ಸಾಮಾಜಿಕ ಅಧ್ಯಯನ ಅಗತ್ಯವೆನಿಸುತ್ತದೆ. ಹಿಂದುಳಿದ ಜಿಲ್ಲೆಗಳನ್ನು ಸಮಾನ ನೆಲೆಗೆ ತರುವ ಪ್ರಯತ್ನ ನಡೆಯಬೇಕಿದೆ. ಉತ್ತೀರ್ಣರಾಗುವುದು, ನಪಾಸಾಗುವುದು ವಿದ್ಯಾರ್ಥಿ ಜೀವನದಲ್ಲಿ ಸಹಜ. ಅದನ್ನು ಮಕ್ಕಳು ಸವಾಲು ಎಂದು ಪರಿಗಣಿಸಿ ಮುನ್ನಡೆಯಲು ಯತ್ನಿಸಬೇಕು, ಆತುರದಲ್ಲಿ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮೂರ್ಖತನ ಎನ್ನುವುದು ನೆನಪಿನಲ್ಲಿದ್ದರೆ ಸಾರ್ಥಕ. ಉನ್ನತ ಶಿಕ್ಷಣ ಪಡೆಯಲು ಪಿಯುಸಿ ಹೆಬ್ಬಾಗಿಲು. ಉತ್ತಮ ಅಂಕ ಪಡೆಯುವ ತವಕ ಎಲ್ಲ ಅಭ್ಯರ್ಥಿಗಳಲ್ಲಿರುತ್ತದೆ. ವೃತ್ತಿ ಬದುಕನ್ನು ರೂಪಿಸಿಕೊಳ್ಳುವುದರಲ್ಲಿ ಮಹತ್ವದ ಹಂತ ದ್ವಿತೀಯ ಪಿಯು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಫಲಿತಾಂಶ ಮಹತ್ವದ್ದು. ವಿಜ್ಞಾನ, ಕಲೆ ಇಲ್ಲವೇ ವಾಣಿಜ್ಯ ವಿಷಯದ ಯಾವುದೇ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರೂ ಈ ಅವಧಿಯ ಎರಡು ವರ್ಷಗಳು ವಿದ್ಯಾರ್ಥಿಗಳ ಪಾಲಿಗೆ ಅಧ್ಯಯನಕ್ಕೆ ಮೀಸಲಾದ ಕಟ್ಟುನಿಟ್ಟಿನ ಕಾಲ. ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ವೈದ್ಯಕೀಯ ಇಲ್ಲವೇ ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶ ಪಡೆಯಲು ವಿವಿಧ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಒತ್ತಡವೂ ಈ ವಿದ್ಯಾರ್ಥಿಗಳಿಗೆ ಇರುತ್ತದೆ. ಆದ್ದರಿಂದ ವೃತ್ತಿ ಶಿಕ್ಷಣ ವ್ಯಾಸಂಗಕ್ಕೆ ಮಕ್ಕಳನ್ನು ಕಳುಹಿಸಲು ಧಾವಂತ ಪಡುವ ಹೆತ್ತವರಿಗೂ ಇದು ಪರೀಕ್ಷೆಯ ಕಾಲ. ಮಕ್ಕಳೂ, ಪಾಲಕರೂ ಒತ್ತಡಕ್ಕೆ ಒಳಗಾಗುತ್ತಾರೆ.ಈ ಬಾರಿ ಪಿಯುಸಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಯ ಗೊಂದಲವೂ ಇತ್ತು. ಆದರೂ ಕಳೆದ ಹತ್ತುವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತೀರ್ಣರಾದವರ ಸಂಖ್ಯೆ ಏರಿಕೆಯಾಗಿದೆ. ಹೀಗಿದ್ದೂ, ಶೇ 59 ಫಲಿತಾಂಶ ದಾಟಿ ಮುನ್ನೇರಲು ಏಕೆ ಸಾಧ್ಯವಿಲ್ಲ ಎನ್ನುವುದನ್ನೂ ಯೋಚಿಸಬೇಕಾಗುತ್ತದೆ. ಪರಿಸ್ಥಿತಿಯ ಸುಧಾರಣೆಗೆ ಶಿಕ್ಷಣ ಇಲಾಖೆಮಟ್ಟದಲ್ಲಿ ತೀವ್ರವಾದ ಆತ್ಮಾವಲೋಕನ ನಡೆಯುವುದು ಅವಶ್ಯಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.