ವರ್ಗಾವಣೆ `ದಂಧೆ' ಬೇಡ ಹೊಸ ಸರ್ಕಾರ, ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೊಟ್ಟಮೊದಲು ಶುರುವಾಗುವುದೇ ವರ್ಗಾವಣೆ `ದಂಧೆ'. ಬಹುಪಾಲು ಜನಪ್ರತಿನಿಧಿಗಳ ಪಾಲಿಗಂತೂ ಇದು ಕಷ್ಟಪಡದೇ ದುಡ್ಡು ಬಂದು ಜೇಬು ತುಂಬಿಸುವ ಫಲವತ್ತಾದ ಕ್ಷೇತ್ರ. ಅಷ್ಟಕ್ಕೂ ಈ ವರ್ಗಾವಣೆಗಳ ಹಿಂದೆ `ಸಾರ್ವಜನಿಕ ಹಿತ'ದ ಘನಂದಾರಿ ಉದ್ದೇಶವೇನೂ ಇರುವುದಿಲ್ಲ. `ಜಾತಿ, ಹಣ, ಸಂಬಂಧ, ಸ್ವಾಮಿನಿಷ್ಠೆ'ಯೇ ಇಲ್ಲಿ ಮುಖ್ಯ ಮಾನದಂಡ ಎನ್ನುವುದಂತೂ ಜಗಜ್ಜಾಹೀರು. ತಮ್ಮ ಕ್ಷೇತ್ರದಲ್ಲಿ `ನಾನಾ ಕಾರಣಗಳಿಗಾಗಿ' ತಮಗೆ ಬೇಕಾದ ಅಧಿಕಾರಿಗಳು ಮತ್ತು ನೌಕರರನ್ನು ಹಾಕಿಸಿಕೊಳ್ಳಲು ಶಾಸಕರುಗಳಿಗಿರುವ ಅತಿ ವ್ಯಾಮೋಹ, ಆಯಕಟ್ಟಿನ ಸ್ಥಳ ಮತ್ತು ಮೇಲು ಸಂಪಾದನೆ ಹುಲುಸಾಗಿರುವ ಕಡೆ ಸೇರಿಕೊಳ್ಳಬೇಕು ಎಂಬ ಅಧಿಕಾರಿಗಳ ಹಪಾಹಪಿಯಿಂದಾಗಿಯೇ ಸರ್ಕಾರಿ ನೌಕರರ ವರ್ಗಾವಣೆಗೆ `ಹಣ ಬಾಚುವ ದಂಧೆ' ಎಂಬ ಕಳಂಕ ಅಂಟಿಕೊಂಡಿದೆ. ಹೀಗಾಗಿಯೇ ಪ್ರತಿಯೊಂದು ವರ್ಗಾವಣೆಯನ್ನು ಜನ ಸಂಶಯದಿಂದಲೇ ನೋಡುವ ಸ್ಥಿತಿ ಇದೆ. ಹೊಸ ಸರ್ಕಾರ ಬಂದಾಗ ನೀತಿ ನಿರೂಪಣೆ ಮೇಲೆ ಪ್ರಭಾವ ಬೀರುವ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡಿದರೆ ಅದರಲ್ಲೇನೂ ವಿಶೇಷ ಎನಿಸುವುದಿಲ್ಲ. ಆದರೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನೂ ಸಾರಾಸಗಟಾಗಿ ವರ್ಗಾಯಿಸುವುದರ ಅಗತ್ಯ ಕಾಣುವುದಿಲ್ಲ. ಸರ್ಕಾರಿ ಸಿಬ್ಬಂದಿ ವರ್ಗಾವಣೆಗೆ ನಿರ್ದಿಷ್ಟ ಮಾನದಂಡಗಳಿವೆ. ವಿವಿಧ ಶ್ರೇಣಿಯ ನೌಕರರನ್ನು ಒಂದು ಸ್ಥಳದಲ್ಲಿ ಕನಿಷ್ಠ ಎಷ್ಟು ವರ್ಷ ಇಡಬೇಕು ಎಂಬ ನಿಯಮ ಇದೆ. ಅದರ ಪಾಲನೆ ಮಾತ್ರ ಆಗುತ್ತಿಲ್ಲ. ಜನಪ್ರತಿನಿಧಿಗಳ ಮರ್ಜಿಯೇ ಮುಖ್ಯವಾಗುತ್ತದೆ. ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ವರ್ಗಾವಣೆ ಹೇಗೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಬಹಳ ಹಿಂದೆಯೇ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಆದರೆ ಅದನ್ನು ಪಾಲಿಸದ ಕರ್ನಾಟಕ ಸರ್ಕಾರವನ್ನು ಕೋರ್ಟ್‌ಗಳು ಅನೇಕ ಸಲ ತರಾಟೆಗೆ ತೆಗೆದುಕೊಂಡ ನಿದರ್ಶನಗಳು ಇವೆ. ಶೀಘ್ರ ಮಾರ್ಗಸೂಚಿ ರೂಪಿಸಿ ವರ್ಗಾವಣೆಯನ್ನು ಬೇಗ ಪೂರ್ಣಗೊಳಿಸುವಂತೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಈ ಬಾರಿ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಆದರೆ ಈಗಾಗಲೆ ಮೇ ಮೂರನೇ ವಾರಕ್ಕೆ ಕಾಲಿಟ್ಟಾಗಿದೆ. ಬಹುತೇಕ ಕಡೆ ಶಾಲೆಗಳು ಪ್ರಾರಂಭವಾಗುವ ಹೊತ್ತು ಇದು. ಅಲ್ಲದೆ ಮಳೆಗಾಲವೂ ಸನಿಹದಲ್ಲಿದೆ. ಇನ್ನೊಂದು ಕಡೆ ನೀರು ಮತ್ತು ಮೇವಿನ ತೀವ್ರ ಅಭಾವ ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಸಾಮೂಹಿಕ ವರ್ಗಾವಣೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಉನ್ನತ ಮಟ್ಟದ ಅಧಿಕಾರಿಗಳಿಗೆ ಯಾವುದೇ ಸಮಯದಲ್ಲಿ ವರ್ಗಾವಣೆಯಾದರೂ ಹೆಚ್ಚಿನ ತೊಂದರೆ ಆಗಲಿಕ್ಕಲಿಲ್ಲ. ಆದರೆ ಕೆಳ ಹಂತದ ನೌಕರರು ಹೆಚ್ಚು ಕಷ್ಟಕ್ಕೆ ಗುರಿಯಾಗುತ್ತಾರೆ. ಅಷ್ಟಕ್ಕೂ ಎಳ್ಳಷ್ಟೂ ಭ್ರಷ್ಟಾಚಾರಕ್ಕೆ ಎಡೆ ಇಲ್ಲದ, ಶಿಕ್ಷಕರಿಗೂ ತೊಂದರೆ ಆಗದ ವರ್ಗಾವಣೆ ಪದ್ಧತಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಎಷ್ಟೋ ವರ್ಷಗಳಿಂದ ಜಾರಿಯಲ್ಲಿದೆ. ಯಶಸ್ವಿಯೂ ಆಗಿದೆ. ಸರ್ಕಾರದ ಉಳಿದ ಇಲಾಖೆಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಇಂಥ ವಿಧಾನ ಅಳವಡಿಸಿಕೊಳ್ಳಲು ಏನಡ್ಡಿ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.