ಅರ್ಥಹೀನ ಕಾಯ್ದೆ: ಅಸ್ಪಷ್ಟ ನಿಯಮ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ `66ಎ' ಪದೇ ಪದೇ ಸುದ್ದಿ ಮಾಡುತ್ತಿದೆ. ಅದರ ಇತ್ತೀಚಿನ ಉದಾಹರಣೆ ಕರ್ನಾಟಕದ್ದು. ಫೇಸ್‌ಬುಕ್‌ನಲ್ಲಿ ಅಂಬೇಡ್ಕರ್ ಕುರಿತಂತೆ `ಅವಹೇಳನಕಾರಿ' ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಬಾಗಲಕೋಟೆ ಮೂಲದ ಯುವಕನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಒಂದೆರಡು ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ಪಿಯುಸಿಎಲ್ ಪದಾಧಿಕಾರಿಯೊಬ್ಬರನ್ನು ಫೇಸ್‌ಬುಕ್‌ನಲ್ಲಿ ತಮಿಳುನಾಡಿನ ರಾಜ್ಯಪಾಲರು ಹಾಗೂ ಚಿರಾಲ ಶಾಸಕರ ವಿರುದ್ಧ `ಅವಹೇಳನಕಾರಿ'ಯಾಗಿ ಬರೆದಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ಇದಕ್ಕೂ ಮೊದಲು ಪಶ್ಚಿಮ ಬಂಗಾಳ ಮತ್ತು ಮುಂಬೈಯಿಂದಲೂ ಇಂಥ ಅನಗತ್ಯ ಬಂಧನ ಪ್ರಕರಣಗಳು ಸುದ್ದಿ ಮಾಡಿದ್ದವು. ಈ ಎಲ್ಲಾ ಪ್ರಕರಣಗಳಲ್ಲಿ ಪ್ರಮುಖ ಆರೋಪವಾಗಿರುವ `ಅವಹೇಳನಕಾರಿ ಅಭಿಪ್ರಾಯ'ಗಳನ್ನು ಒಂದು ವೇಳೆ ಪತ್ರಿಕೆಯೊಂದು ಪ್ರಕಟಿಸಿದ್ದರೆ ಅಥವಾ ಲಕ್ಷಾಂತರ ಸಂಖ್ಯೆಯ ಕರಪತ್ರಗಳನ್ನಾಗಿ ಹಂಚಿದ್ದರೆ ಏನಾಗಬಹುದಿತ್ತು? ಪ್ರಕಟಿಸಿದವರು ಒಂದು ಮಾನನಷ್ಟ ಮೊಕದ್ದಮೆಯನ್ನು ಎದುರಿಸಬೇಕಾಗುತ್ತಿತ್ತೇ ಹೊರತು ಬಂಧನವನ್ನಲ್ಲ. ಹಾಗಿದ್ದರೆ ಅದನ್ನೇ ಅಂತರ್ಜಾಲದಲ್ಲಿ ಪ್ರಕಟಿಸಿದಾಕ್ಷಣ ಬಂಧನಕ್ಕೆ ಅರ್ಹವಾದ ಅಪರಾಧವಾಗಿಬಿಡುತ್ತದೆ ಏಕೆ? 2008ರ ಡಿಸೆಂಬರ್ 22ರಂದು ಹದಿನೈದು ನಿಮಿಷಗಳ ಅವಧಿಯಲ್ಲಿ ಈ ಕಾಯ್ದೆಯನ್ನು ಒಪ್ಪಿಕೊಂಡ ಲೋಕಸಭೆಯ ಸದಸ್ಯರಿಗೆ ಈ ಪ್ರಶ್ನೆಯನ್ನು ಕೇಳಬೇಕಾಗಿದೆ. ಒಂದು ದಿನದ ನಂತರ ಹೆಚ್ಚು ಕಡಿಮೆ ರಾಜ್ಯಸಭೆಯೂ ಚರ್ಚೆಯಿಲ್ಲದೆಯೇ ಈ ಮಸೂದೆಗೆ ಒಪ್ಪಿಗೆ ನೀಡಿತ್ತು ಎಂಬುದು ಕೂಡಾ ಇಲ್ಲಿ ಉಲ್ಲೇಖಾರ್ಹ. ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಂದ ತಿದ್ದುಪಡಿಗಳು ಸಂವಿಧಾನ ವಿರೋಧಿಯಾಗಿರುವುದರ ಕುರಿತಂತೆ ಎಲ್ಲಾ ಪ್ರಮುಖ ಮಾಧ್ಯಮಗಳೂ 2009ರಲ್ಲಿಯೇ ಗಮನ ಸೆಳೆದಿದ್ದವು. ಸೆಕ್ಷನ್ `66ಎ'ಯಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳನ್ನು ಬ್ರಿಟನ್‌ನ 1935ರ ಅಂಚೆ ಕಾಯ್ದೆಯಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ. ಆ ಕಾಲಕ್ಕೆ ಅಂಚೆ ಸೇವೆಯನ್ನಷ್ಟೇ ಗಮನದಲ್ಲಿಟ್ಟುಕೊಂಡಿದ್ದ ಅದೇ ಪದಗಳನ್ನು ಅಷ್ಟೇ ಅಸ್ಪಷ್ಟವಾಗಿ ಇಲ್ಲಿಯೂ ಬಳಸಲಾಗಿದೆ. 1935ರಲ್ಲಿ ಶಿಕ್ಷೆ ಒಂದು ತಿಂಗಳಿಗೆ ಸೀಮಿತವಾಗಿತ್ತು. ಶಿಕ್ಷೆಯ ಅವಧಿಯನ್ನು ಮೂರು ವರ್ಷಕ್ಕೆ ಏರಿಸಿದರೆ 73 ವರ್ಷಗಳ ಹಿಂದಿನ ಕಾನೂನು ಈ ಕಾಲಕ್ಕೆ ಪ್ರಸ್ತುತವಾಗುತ್ತದೆ ಎಂದು ಭಾರತದ ಶಾಸನ ನಿರ್ಮಾತೃಗಳು ಭಾವಿಸಿದಂತೆ ಕಾಣಿಸುತ್ತದೆ. ಸೆಕ್ಷನ್ `66ಎ' ಸಾಂವಿಧಾನಿಕ ಪ್ರಸ್ತುತತೆಯನ್ನು ಪ್ರಶ್ನಿಸುವ ಮೊಕದ್ದಮೆಯೊಂದು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈಗ ನೀಡಿರುವ ನಿರ್ದೇಶನದಂತೆ ಈ ಕಾಯ್ದೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಬಳಸಬೇಕು. ಹಿರಿಯ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಲಾರರು ಎಂಬುದಕ್ಕೆ ಖಾತರಿಯೇನು ಎಂಬ ಪ್ರಶ್ನೆ ಇಲ್ಲಿದೆ. ಸಾಲದ್ದಕ್ಕೆ ಇಡೀ ಮಾಹಿತಿ ತಂತ್ರಜ್ಞಾನ ಕಾಯ್ದೆಯೇ ಅನೇಕ ಅರ್ಥಹೀನ ಮತ್ತು ಅಸ್ಪಷ್ಟ ನಿಯಮಗಳನ್ನು ಹೊಂದಿದೆ ಎಂಬ ದೂರೂ ಇದೆ.ಕಾಯ್ದೆಯಲ್ಲಿರುವ ಸೆಕ್ಷನ್ `66ಎ'ಯಂಥ ಅಂಶಗಳನ್ನು ಅಮಾನತಿನಲ್ಲಿಡುವ ಕೆಲಸ ತಕ್ಷಣ ಆಗಬೇಕಾಗಿದೆ. ಜೊತೆಗೆ ಈ ಕಾಯ್ದೆಯ ಸಮಗ್ರ ಪುನರ್ ಪರಿಶೀಲನೆಗಾಗಿ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಜ್ಞರು, ಉದ್ಯಮ, ಸರ್ಕಾರ ಮತ್ತು ಬಳಕೆದಾರರಿಗೆ ಸರಿಯಾದ ಪ್ರಾತಿನಿಧ್ಯವಿರುವ ಸಮಿತಿಯೊಂದನ್ನು ರಚಿಸಬೇಕು. ಕಾಲಮಿತಿ ಯಲ್ಲಿ ಕಾರ್ಯನಿರ್ವಹಿಸಬೇಕಾದ ಈ ಸಮಿತಿ ನೀಡುವ ಸಲಹೆಗಳಿಗೆ ಅನುಗುಣವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.