ಕಳೆದು ಹೋದ ವಿಶ್ವಾಸ ಕ್ರಿಕೆಟ್ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಸ್ಪಾಟ್‌ಫಿಕ್ಸಿಂಗ್ ಹಗರಣ ಪುಡಿ ಮಾಡಿದೆ. ಭಾರತದ ಮಟ್ಟಿಗಂತೂ ಈ ಸಭ್ಯರ ಕ್ರೀಡೆ `ಚುಟುಕು' ಆಟದಲ್ಲಿ ಗಾಂಭೀರ್ಯ ಕಳೆದುಕೊಂಡು ಮನರಂಜನೆಯ ಸ್ವರೂಪದ ಹಾದಿಯಲ್ಲಿರುವುದಕ್ಕೆ ಐಪಿಎಲ್ ಕೂಟವೇ ನಿದರ್ಶನ. ಈ ವಾಣಿಜ್ಯೀಕೃತ ಮೇಳದಲ್ಲಿ ಹಣದ ಹೊಳೆ ಹರಿದಿದೆ. ಬೆಟ್ಟಿಂಗ್ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಸ್ಪಾಟ್‌ಫಿಕ್ಸಿಂಗ್ ವಹಿವಾಟು ತನ್ನ ಕಬಂಧಬಾಹುಗಳನ್ನು ಚಾಚಿದೆ. ಶ್ರಿಶಾಂತ್, ಚಾಂಡಿಲ, ಅಂಕಿತ್ ಅವರ ಬಂಧನದ ನಂತರ ಪೊಲೀಸರು ಬಹಿರಂಗ ಪಡಿಸಿದ ಮಾಹಿತಿಗಳು ಇದರ ಕರಾಳ ಮುಖದ ಕೈಗನ್ನಡಿಯಂತಿದೆ. ತನಿಖೆ ಚುರುಕು ಪಡೆದಂತೆ ಹಗರಣದ ಆಳ ನಿಗೂಢವಾಗುತ್ತಿದೆ. ಇದರ ವ್ಯಾಪ್ತಿ ದೇಶವಿದೇಶಗಳಲ್ಲಿ ವ್ಯಾಪಕಗೊಂಡಿರುವುದೂ ಗೊತ್ತಾಗಿದೆ. ರಾಜಸ್ತಾನ್ ರಾಯಲ್ಸ್‌ನ ಕೆಲವು ಆಟಗಾರರ ಬೆನ್ನು ಬಿದ್ದು ಕಲ್ಪನೆಗೂ ನಿಲುಕದ ಅವ್ಯವಹಾರವನ್ನು ಪತ್ತೆ ಮಾಡಿದ ದೆಹಲಿ ಪೊಲೀಸರ ಜಾಣ್ಮೆ ಪ್ರಶಂಸಾರ್ಹ. ತಕ್ಷಣ ಮೈಕೊಡವಿ ಎದ್ದಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ `ಈ ಕುರಿತು ಪ್ರತ್ಯೇಕವಾದ ಆಂತರಿಕ ತನಿಖೆ ನಡೆಸಲಾಗುವುದು ಮತ್ತು ಅಪರಾಧ ಸಾಬೀತಾದರೆ ಸಂಬಂಧಪಟ್ಟ ಆಟಗಾರರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗುವುದು' ಎಂದು ಘೋಷಿಸಿದೆ. ಐಪಿಎಲ್‌ನ ಪ್ರತಿ ತಂಡವೂ ಭ್ರಷ್ಟಾಚಾರ ತಡೆ ಘಟಕವೊಂದನ್ನು ನೇಮಿಸಿ ಕೊಳ್ಳುವಂತೆ ಆದೇಶ ನೀಡಲಾಗುವುದು ಎಂದಿದೆ. ಆದರೆ ಈ ಕ್ರೀಡೆಗೆ ಸಂಬಂಧಿಸಿದಂತೆ ಹಗರಣಗಳು ಹೊಸತೇನಲ್ಲ. ಹಿಂದೆಲ್ಲಾ ಇಂತಹ ಪ್ರಕರಣಗಳು ಬೆಳಕಿಗೆ ಬಂದರೂ, ಸಂಬಂಧಪಟ್ಟವರಿಗೆ ಶಿಕ್ಷೆಯಾಗಿದ್ದು ಕಡಿಮೆಯೇ. ಐಪಿಎಲ್‌ನ ಆರಂಭದಿಂದಲೂ ವಿವಾದ ಕಾಡುತ್ತಿದ್ದರೂ, ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಂತಿರುವ ಬಿಸಿಸಿಐ ಕಳ್ಳಾಟ ತಡೆಯುವಲ್ಲಿ ವಿಫಲವಾಗಿರುವುದು ನಿಚ್ಚಳ. ಕಳೆದ ವರ್ಷವೂ ಐಪಿಎಲ್‌ನಲ್ಲಿ ಕಳ್ಳಾಟ ನಡೆಸಿ ಐದು ಮಂದಿ ಸಿಕ್ಕಿಬಿದ್ದಾಗ ದೊಡ್ಡ ಸುದ್ದಿಯಾಗಿತ್ತಷ್ಟೇ. ಹೀಗಾಗಿ ಬಿಸಿಸಿಐನ ವೀರಾವೇಶದ ಮಾತುಗಳ ಬಗ್ಗೆ ಜನಕ್ಕೆ ನಂಬಿಕೆ ಬರಬೇಕಾದರೆ, ಮೊದಲಿಗೆ ಅದು ಐಪಿಎಲ್‌ನ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿಡಬೇಕು. ಆಟಗಾರರ ಮೇಲೆ ಹೆಚ್ಚಿನ ಕಣ್ಗಾವಲು ಇರಿಸಬೇಕು. ಶ್ರಿಶಾಂತ್ ಎರಡು ವರ್ಷಗಳ ಹಿಂದೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ವಿಶ್ವಕಪ್‌ನಲ್ಲಿ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರ. ದೇಶದ ಪ್ರಮುಖ ಆಟಗಾರನೇ ಇಂತಹದ್ದೊಂದು ಪ್ರಕರಣದಲ್ಲಿ ಸಿಲುಕಿರುವುದರಿಂದ ಕೋಟ್ಯಂತರ ಕ್ರಿಕೆಟ್‌ಪ್ರಿಯರ ನಂಬಿಕೆಯ ಅಡಿಪಾಯ ಅಲುಗಾಡಿದೆ. ಕಳಂಕಿತ ಆಟಗಾರರು ಜೈಲಿನಲ್ಲಿ ಕೆಲವು ವರ್ಷ ಇರುವಂತಾದರೆ ಮಾತ್ರ ಇಂತಹ ಚಟುವಟಿಕೆಗಳಲ್ಲಿ ತೊಡಗುವವರಿಗೆ ಭಯ ಇರುತ್ತದೆ. ಹಾಗಿದ್ದರೆ ಮಾತ್ರ ಈ ತೆರನಾದ ನಂಬಿಕೆದ್ರೋಹದ ಕೃತ್ಯಗಳಿಂದ ಆಟಗಾರರನ್ನು ದೂರವಿಡಬಹುದು. ಬಿಸಿಸಿಐ ತನ್ನ ಹಣಕಾಸಿನ ವ್ಯವಹಾರವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಬಗ್ಗೆ ಯೋಚಿಸುವುದಕ್ಕಿಂತ ಮುಖ್ಯವಾಗಿ ಜನರ ವಿಶ್ವಾಸವನ್ನು ಮರಳಿ ಗಳಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಇಂತಹ ನಂಬಿಕೆದ್ರೋಹಿ ಆಟಗಾರರಿಗೆ ಕ್ರಿಕೆಟ್‌ನಿಂದ ಆಜೀವ ನಿಷೇಧ ಹೇರಿದರಷ್ಟೇ ಸಾಲದು, ಕಠಿಣ ಶಿಕ್ಷೆಯಾಗಲೇಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.