ಸಂಪ್ರದಾಯದ ಜಾಡು ಬಿಡಲಿ ರಾಜ್ಯದಲ್ಲಿ ಬದಲಾವಣೆಯ ಗಾಳಿ ಚೆನ್ನಾಗಿಯೇ ಬೀಸಿದೆ. ರಾಜ್ಯದ ಮತದಾರರು ಬದಲಾವಣೆಯ ಹರಿಕಾರರಾಗಿ, ಬದಲಾವಣೆ ಬಯಸಿ ಏಕಪಕ್ಷಕ್ಕೆ ಬಹುಮತ ನೀಡಿದ್ದಾರೆ. ಜನರ ಮನದಿಂಗಿತವನ್ನು ಚುರುಕಾಗಿಯೇ ಗ್ರಹಿಸಿದ ಕಾಂಗ್ರೆಸ್ ಹೈಕಮಾಂಡ್, ತನ್ನ ಪರಂಪರಾಗತ ಕ್ರಮವನ್ನು ಬದಲಿಸಿಕೊಂಡು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಕ್ಷಿಪ್ರಗತಿಯಲ್ಲಿ ಘೋಷಿಸಿದೆ. ನಿಷ್ಠುರವಾದಿ ಎಂದೇ ಹೆಸರಾದ ಸಿದ್ದರಾಮಯ್ಯ ಅವರೂ ಸೇಡಿನ ರಾಜಕಾರಣ ಮಾಡುವುದಿಲ್ಲ. ಪ್ರಾಮಾಣಿಕತೆ ಮೆರೆಯುತ್ತೇನೆ ಎಂದು ಹೇಳುವ ಮೂಲಕ ತಮ್ಮ ವ್ಯಕ್ತಿತ್ವದ ಒಂದು ಭಾಗವೇ ಆದ ಮುಂಗೋಪವನ್ನು ಕಡಿಮೆ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಸಮಾಜವಾದಿ ಸಿದ್ಧಾಂತದಲ್ಲಿ ರೂಪುಗೊಂಡ ಸಿದ್ದರಾಮಯ್ಯ ಅವರಿಗೆ ದೊರಕಿರುವ ಮುಖ್ಯಮಂತ್ರಿ ಗದ್ದುಗೆ ಅವರ ರಾಜಕೀಯ ಸಾಹಸ ಯಾತ್ರೆಗೆ ಪ್ರತಿಫಲವಾಗಿಯೇ ದೊರಕಿದೆ. ಹಣಕಾಸು ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ಏಳು ಬಾರಿ ಬಜೆಟ್ ಮಂಡಿಸಿದ ಅನುಭವಪಕ್ವತೆಯಲ್ಲಿ ಅವರು ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಏರಲಿರುವ ಮುಖ್ಯಮಂತ್ರಿ ಗದ್ದುಗೆ ಹೂವಿನ ಹಾಸಿಗೆ ಆಗಿರುತ್ತದೆ ಎಂದು ಹೇಳುವುದು ಕಷ್ಟ. ಅವರ ಮುಂದೆ ಸವಾಲುಗಳ ಬೆಟ್ಟವೇ ಇದೆ. ಐದುವರ್ಷಗಳ ಕಾಲ ಹಳಿತಪ್ಪಿದ್ದ ಆಡಳಿತವನ್ನು ಸರಿದಾರಿಗೆ ತರಬೇಕಾದರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಚಾಟಿ ಬೀಸಲೇ ಬೇಕಾಗುತ್ತದೆ. ಭ್ರಷ್ಟ ರಾಜಕಾರಣಿಗಳ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ನಿಷ್ಠುರಿಯಾಗಬೇಕಾಗುತ್ತದೆ. ಪಕ್ಷದೊಳಗೇ ಇರುವ ಅಪರಾಧ ಹಿನ್ನೆಲೆಯ ಶಾಸಕರನ್ನೂ ಹದ್ದುಬಸ್ತಿನಲ್ಲಿಡಬೇಕಾಗುತ್ತದೆ. ಇದೆಲ್ಲವೂ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಿದ್ದರಾಮಯ್ಯ ಅವರ ಎಚ್ಚರದಲ್ಲಿದೆ. ಅದಕ್ಕೆ ಅವರು `ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಿಭಿನ್ನ ಆಡಳಿತ ಆರಂಭವಾಗುತ್ತದೆ' ಎಂದು ಹೇಳಿರುವುದು. ಯಾವುದೇ ಮುಖ್ಯಮಂತ್ರಿ, ಶಾಸಕರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡರೆ ಅರ್ಧ ಯಶಸ್ಸಾದಂತೆ. ಕ್ಷೇತ್ರದ ಪಾಳೆಯಗಾರರಂತೆ ವರ್ತಿಸುವ ಶಾಸಕರ ಒತ್ತಡಕ್ಕೆ ಮಣಿಯದಿರುವುದೇ ಸಿದ್ದರಾಮಯ್ಯನವರ ಮುಂದೆ ಇರುವ ಮೊದಲ ಸವಾಲು.ಆಯಾ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರಕ್ಕೆ ಇಂತಹವರೇ ಆದ ಅಧಿಕಾರಿಗಳು ಬೇಕು ಎಂದು ದುಂಬಾಲು ಬಿದ್ದು, ತಮಗೆ ಅನುಕೂಲಕರವಾದವರನ್ನು ಆಯಕಟ್ಟಿನ ಜಾಗಕ್ಕೆ ತರಲು ಯತ್ನಿಸುತ್ತಾರೆ. ಇಂತಹ ಪ್ರವೃತ್ತಿಯೇ ಭ್ರಷ್ಟಾಚಾರದ ಮೂಲ.ಇದು ಸರ್ಕಾರವನ್ನು ದುರ್ಬಲಗೊಳಿಸುವ ಕ್ರಿಯೆಯಾಗಿಯೇ ಕಾಣುತ್ತದೆ. ಜಿಲ್ಲೆಯ ಮಟ್ಟದಲ್ಲೇ ಆಗಲಿ, ರಾಜ್ಯ ಮಟ್ಟದಲ್ಲೇ ಆಗಲಿ, ಆಡಳಿತದಲ್ಲಿ ಶಾಸಕರ ಅನಗತ್ಯ ಹಸ್ತಕ್ಷೇಪವನ್ನು ತಡೆಗಟ್ಟಬೇಕು. ಈ ವಿಷಯದಲ್ಲಿ ನೂತನ ಮುಖ್ಯಮಂತ್ರಿಗಳು ಬಿಗಿನಿಲುವು ತಳೆಯುವುದು ಅಪೇಕ್ಷಣೀಯ. ಅಲ್ಲದೆ ಉಸ್ತುವಾರಿ ಸಚಿವರ ನೇಮಕಾತಿ ಕೂಡ ಒಂದು ಪ್ರಹಸನದಂತೆ ಕಾಣುತ್ತದೆ. ಎಲ್ಲ ಜಿಲ್ಲೆಗಳಲ್ಲಿ ಒಬ್ಬೊಬ್ಬ ಉಸ್ತುವಾರಿ ಸಚಿವರನ್ನು ನೇಮಿಸುವುದು, ಯಾವ ಉದ್ದೇಶಕ್ಕಾಗಿ ಎನ್ನುವುದೇ ಅರ್ಥವಾಗುವುದಿಲ್ಲ. ಇಂತಹ ಅರ್ಥಹೀನ ಸಂಪ್ರದಾಯವನ್ನು ಕೈಬಿಡಲು ಸಾಧ್ಯವಾದರೆ ಎಷ್ಟು ಚೆನ್ನ. ಬಹಿರಂಗ ಸಭೆಯಲ್ಲಿ ಶಕ್ತಿ ಪ್ರದರ್ಶನ ತಪ್ಪಲ್ಲ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅದು ಸಲ್ಲ. ಪ್ರಮಾಣವಚನ ಎನ್ನುವುದು ಸಂವಿಧಾನಾತ್ಮಕ ಪಾವಿತ್ರ್ಯ ಹೊಂದಿರುವ ಘನತೆಯ ಕಾರ್ಯ. ಅದನ್ನೂ ಸಾರ್ವಜನಿಕ ಪ್ರದರ್ಶನ ಮಾಡುವ ಔಚಿತ್ಯ ಏನು? ವೈಚಾರಿಕತೆಯ ಲೇಪವನ್ನೂ ಹೊಂದಿರುವ ನೂತನ ಮುಖ್ಯಮಂತ್ರಿಗಳು ಸಂಪ್ರದಾಯದ ಹಾದಿಯಲ್ಲಿ ಕಣ್ಣುಮುಚ್ಚಿ ಸಾಗದೆ, ಪ್ರತಿಯೊಂದು ಹೆಜ್ಜೆಯಲ್ಲೂ ಹೊಸತನವನ್ನು ಬಿಡುಬೀಸಾಗಿ ಆರಂಭಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.