ಕ್ಲಿಷ್ಟಕರ ಹಾದಿ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯನ್ನು ಪಾಕ್ ಮತದಾರರು ತಿರಸ್ಕರಿಸಿದ್ದಾರೆ. ಈ ಚುನಾವಣೆಯಲ್ಲಿ ಪಿಪಿಪಿ ಮೂರನೇ ಸ್ಥಾನ ಪಡೆದು ಹೀನಾಯ ಸೋಲನುಭವಿಸಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್ -ಎನ್ ) ಬಹುಮತ ಗಳಿಸಿದೆ. ಬದಲಾವಣೆಗಾಗಿ ನೀಡಲಾದ ಸ್ಪಷ್ಟ ಜನಾದೇಶ ಇದು. ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ನವಾಜ್ ಷರೀಫ್ ಸಜ್ಜಾಗಿದ್ದಾರೆ. ಅಸ್ತಿತ್ವದಲ್ಲಿದ್ದ ನಾಗರಿಕ ಸರ್ಕಾರ ಮತ್ತೊಂದು ನಾಗರಿಕ ಸರ್ಕಾರ ಅಸ್ತಿತ್ವಕ್ಕೆ ಬರಲು ಅನುವು ಮಾಡಿಕೊಡುತ್ತಿರುವುದು 65 ವರ್ಷಗಳ ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲು. ಹೀಗಾಗಿ ಇದು ಐತಿಹಾಸಿಕ ಚುನಾವಣೆ. ತಾಲಿಬಾನ್ ನಡೆಸಿದ ಹಿಂಸಾಚಾರಗಳ ಹೊರತಾಗಿಯೂ ಜನರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದಾರೆ. ಈ ಹಿಂದೆ ಪಿಎಂಎಲ್-ಎನ್ ಅಧಿಕಾರದಲ್ಲಿದ್ದ ಸಂದರ್ಭಗಳಲ್ಲಿ ಅದರ ಆಡಳಿತ ಪಿಪಿಪಿಗಿಂತ ಹೆಚ್ಚೇನೂ ಭಿನ್ನವಾಗಿರಲಿಲ್ಲ, ಆದರೆ ಕಳೆದ ಐದು ವರ್ಷಗಳಲ್ಲಿ ಪ್ರತಿಪಕ್ಷವಾಗಿ ಪಿಎಂಎಲ್-ಎನ್ ಒಂದಷ್ಟು ಹೊಣೆಗಾರಿಕೆ ಪ್ರದರ್ಶಿಸಿದೆ . ಪಿಪಿಪಿ ಸರ್ಕಾರ ಪದಚ್ಯುತಗೊಳಿಸಲು ಈ ಹಿಂದಿನಂತೆ ಅದು ಮಿಲಿಟರಿ ಮೊರೆ ಹೋಗಿಲ್ಲ. ಈಗ ಆಡಳಿತ ಪಕ್ಷವಾಗಿ ಇದೇ ಪ್ರಬುದ್ಧತೆಯನ್ನು ಪಿಎಂಎಲ್ -ಎನ್ ಪ್ರದರ್ಶಿಸಬೇಕಿದೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನವಾಜ್ ಷರೀಫ್ ಅವರು ರಾಷ್ಟ್ರವನ್ನು ಕಾಡುತ್ತಿರುವ ಸಮಸ್ಯೆಗಳ ನಿರ್ವಹಣೆಗೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ರಾಷ್ಟ್ರದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದ್ದು ಭ್ರಷ್ಟಾಚಾರ ವ್ಯಾಪಕವಾಗಿದೆ. ಆಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪಾತ್ರವೇನು? ಎಂಬ ವಿಚಾರವೂ ಅಂತರರಾಷ್ಟ್ರೀಯ ನೆಲೆಯಲ್ಲಿ ಮುಖ್ಯವಾದದ್ದು. ಮುಂದಿನ ವರ್ಷ ಆಫ್ಘಾನಿಸ್ತಾನದಿಂದ ನ್ಯಾಟೊ ಸೇನೆ ವಾಪಸಾತಿಯ ನಂತರ ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ಅನ್ನು ಬೆಳೆಸುವಂತಹ ಹಸ್ತಕ್ಷೇಪ ಎಸಗಲಾರರೆಂಬ ನಿರೀಕ್ಷೆ ವಿಶ್ವಸಮುದಾಯದ್ದು. ಭಾರತ-ಪಾಕಿಸ್ತಾನ ಶಾಂತಿ ಪ್ರಕ್ರಿಯೆ ಪುನರುಜ್ಜೀವಗೊಳಿಸುವ ಮಾತುಗಳನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ನವಾಜ್ ಷರೀಫ್ ಹೇಳಿದ್ದಾರೆ. ಷರೀಫ್ ಅವರನ್ನು ಬಾಂಧವ್ಯ ಸುಧಾರಣೆಯ ಬೆಂಬಲಿಗರಾಗಿಯೇ ಭಾರತದಲ್ಲಿ ಕಾಣಲಾಗುತ್ತದೆ. 1999ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆ ಶಾಂತಿ ಪ್ರಕ್ರಿಯೆಯನ್ನು ಷರೀಫ್ ಆರಂಭಿಸಿದ್ದರು. ಆದರೆ ಆಗಿನ ಸೇನಾ ಮುಖ್ಯಸ್ಥ ಜನರಲ್ ಪರ್ವೆಜ್ ಮುಷರಫ್ ನಡೆಸಿದ ಕ್ಷಿಪ್ರ ಕ್ರಾಂತಿಯಿಂದಾಗಿ ಪದಚ್ಯುತಗೊಂಡು ದೇಶಭ್ರಷ್ಟರಾಗದ್ದರು ಷರೀಫ್. ಈಗ ಷರೀಫ್ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರಲು ಅಣಿಯಾಗುತ್ತಿರುವಾಗ ಮುಷರಫ್ ಗೃಹಬಂಧನದಲ್ಲಿರುವುದು ಕಾಕತಾಳೀಯ. ಈ ಮಾಜಿ ಸೇನಾನಾಯಕನನ್ನು ಷರೀಫ್ ಹೇಗೆ ನಡೆಸಿಕೊಳ್ಳುತ್ತಾರೆಂಬುದನ್ನು ಪಾಕಿಸ್ತಾನಿ ಮಿಲಿಟರಿ ಗಮನಿಸುತ್ತಿರುತ್ತದೆ ಎಂಬುದು ವಾಸ್ತವಿಕ ಸತ್ಯ. ಸಂಪ್ರದಾಯಶೀಲರಾದ ಷರೀಫ್, ಮತೀಯ ಗುಂಪುಗಳ ಜೊತೆ ನಿಕಟವಾಗಿರುವವರು. ಪಾಕಿಸ್ತಾನದಲ್ಲಿ ನೆಲೆ ಪಡೆದಿರುವ ಭಾರತ ವಿರೋಧಿ ಭಯೋತ್ಪಾದನಾ ಗುಂಪುಗಳ ವಿರುದ್ಧ ಅವರು ಹೇಗೆ ಕ್ರಮಗಳನ್ನು ಕೈಗೊಳ್ಳುವರು ಎಂಬುದು ಭಾರತಕ್ಕೆ ಮುಖ್ಯವಾಗುತ್ತದೆ. ಪಾಕಿಸ್ತಾನದ ಹಿತದ ದೃಷ್ಟಿಯಿಂದ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವರೆಂಬ ನಿರೀಕ್ಷೆ ವಿಶ್ವಸಮುದಾಯದ್ದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.