ದುಬಾರಿ ದಂಡ ರೈಲು ಹೋದ ಮೇಲೆ ಟಿಕೇಟು ತೆಗೆದುಕೊಂಡಂತಾಗಿದೆ ಕೇಂದ್ರದಲ್ಲಿ ಕಾಂಗ್ರೆಸ್‌ನ ಸ್ಥಿತಿ. ರೈಲ್ವೆ ನೇಮಕಾತಿ ಹಗರಣದಲ್ಲಿ ರೈಲ್ವೆ ಸಚಿವ ಪಿ.ಕೆ.ಬನ್ಸಲ್ ಹಾಗೂ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಅಶ್ವನಿ ಕುಮಾರ್ ಅವರ ಬಗ್ಗೆ ಸೂಕ್ತ ನಿರ್ಧಾರವನ್ನು ಸೂಕ್ತ ಸಮಯದಲ್ಲೇ ತೆಗೆದುಕೊಳ್ಳದೆ ನೈತಿಕವಾಗಿ ಕಾಂಗ್ರೆಸ್ ಕುಸಿದಿದೆ. ಅಲ್ಲದೆ, ಇದರಿಂದ ದೊರೆಯಬಹುದಾಗಿದ್ದ ತಕ್ಷಣದ ರಾಜಕೀಯ ಲಾಭವನ್ನೂ ಕಳೆದುಕೊಂಡಿದೆ. ಹಗರಣಗಳ ಭಾರದಿಂದ ಈಗಾಗಲೇ ಕುಸಿದಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಸಮಯದಲ್ಲಿ ಧುತ್ತನೆ ಬಂದೆರೆಗಿದ ಅನಿರೀಕ್ಷಿತ ಹಗರಣಗಳನ್ನು ನಿಭಾಯಿಸಲು ಹೆಣಗಾಡಿತು. ಕಾಂಗ್ರೆಸ್‌ನ ವಾದ ಅಸಮರ್ಥನೀಯವಾಗಿತ್ತು. ವಿರೋಧ ಪಕ್ಷವಾದ ಬಿಜೆಪಿಯ ಪ್ರತಿಭಟನೆ ಮೇಲುಗೈಯಾಗತೊಡಗಿದಾಗ ಇಬ್ಬರು ಸಚಿವರ ತಲೆದಂಡ ಅನಿವಾರ್ಯವಾಯಿತು. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಗಳಿಸುವ ಮೂಲಕ ಆತ್ಮಸ್ಥೈರ್ಯ ಮೂಡಿಸಿಕೊಂಡಿದ್ದ ಕಾಂಗ್ರೆಸ್ ಉತ್ಸಾಹದಿಂದಲೇ ಈ ಆಪಾದನೆಗಳನ್ನು ತಳ್ಳಿಹಾಕಿತ್ತು. ವಿರೋಧಪಕ್ಷದ ಆಪಾದನೆಗಳನ್ನು ನಿರಾಕರಿಸಿ, ಸಚಿವರನ್ನು ಸಮರ್ಥಿಸಿಕೊಳ್ಳಲಾರಂಭಿಸಿತು. ಕಾಂಗ್ರೆಸ್‌ನಲ್ಲಿರುವ ದೂರದೃಷ್ಟಿಯ ಕೊರತೆಯನ್ನು ಇದು ತೋರಿಸುತ್ತದೆ. ಯಾವುದೇ ತೀರ್ಮಾನವನ್ನು ರಾಜಕೀಯ ಚತುರತೆಯಿಂದ ಮಾಡಬೇಕಾಗುತ್ತದೆ. ಹಗರಣದಲ್ಲಿ ಸಿಲುಕಿರುವ ವಾಸನೆ ಬಡಿಯಲಾರಂಭಿಸುತ್ತಿದ್ದಂತೆಯೇ ದೃಢ ನಿರ್ಧಾರ ತೆಗೆದುಕೊಂಡಿದ್ದರೆ, ಸಂಸತ್‌ಕಲಾಪ ವೃಥಾ ಹಾಳಾಗುವುದು ತಪ್ಪುತ್ತಿತ್ತು. ಸಚಿವರ ರಾಜೀನಾಮೆಯ ಜೊತೆಗೆ ಪ್ರಧಾನಿಯವರ ರಾಜೀನಾಮೆಗೂ ಹಟ ಹಿಡಿದಿರುವ ಬಿಜೆಪಿ ಈಗ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ತೀರ್ಮಾನಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆನೀಡಿದೆ. ಆದರೂ ಈಗ ಪ್ರಧಾನಿಯವರ ಕಚೇರಿಯನ್ನು ಈ ವಿಷಯದಲ್ಲಿ ದೂರವಿಟ್ಟಿರುವುದೇಕೆ ಎನ್ನುವ ಪ್ರಶ್ನೆಗೂ ಕಾಂಗ್ರೆಸ್ ಸಮರ್ಥ ಉತ್ತರ ಕೊಡಬೇಕಾಗುತ್ತದೆ. ಸಚಿವರ ರಾಜೀನಾಮೆ ಅನಗತ್ಯ ಎಂದೇ ವಾದಿಸುತ್ತಿದ್ದ ಸರ್ಕಾರ, ಆಹಾರ ಭದ್ರತಾ ಮಸೂದೆ ಸೇರಿದಂತೆ ಇತರ ಮಹತ್ವದ ಮಸೂದೆಗೆ ಅಂಗೀಕಾರ ಪಡೆಯುವ ಅವಕಾಶವನ್ನು ಈ ಗದ್ದಲದಲ್ಲಿ ಕಳೆದುಕೊಂಡಿತು. ಆರಂಭದಲ್ಲಿ ಈ ವಿಷಯವನ್ನು ಹಗುರವಾಗಿ ತೆಗೆದುಕೊಂಡ ಸರ್ಕಾರ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನ ಎಚ್ಚರಿಕೆ, ಹಾಗೂ ರೈಲ್ವೆ ಇಲಾಖೆ ಲಂಚ ಪ್ರಕರಣದಲ್ಲಿ ಹೊಸಹೊಸ ದಾಖಲೆಗಳು ಹೊರಬೀಳುತ್ತಿರುವ ಬೆಳವಣಿಗೆಯಿಂದಾಗಿ ಎಚ್ಚೆತ್ತುಕೊಂಡಿತಲ್ಲದೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿ, ಸಚಿವರ ರಾಜೀನಾಮೆಗೆ ಸಲಹೆ ಮಾಡಿತು. ನಿಕಟವಾಗಿರುವ ಈ ಸಚಿವರನ್ನು ಪ್ರಧಾನಿ ರಕ್ಷಿಸುತ್ತಿದ್ದಾರೆ ಎನ್ನುವ ಆಪಾದನೆ ಕೂಡ ನೇರನುಡಿ ಹಾಗು ಸ್ವಚ್ಛ ವರ್ಚಸ್ಸು ಹೊಂದಿರುವ ಪ್ರಧಾನಿ ಮನಮೋಹನಸಿಂಗ್ ಅವರ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ತಂದಿತ್ತು. ಕಲ್ಲಿದ್ದಲು ಸಚಿವಾಲಯದಲ್ಲಿ ನಡೆದ ಹಗರಣಗಳಿಗೆ ಉತ್ತರಕೊಡುವಾಗ ಅನಿವಾರ್ಯವಾಗಿ ಪ್ರಧಾನಿ ಅವರನ್ನು ಎಳೆತರುವ ಕಿರಿಕಿರಿಯಿಂದಾಗಿ ಪಕ್ಷ ಮತ್ತಷ್ಟು ಮುಜುಗರದ ಸ್ಥಿತಿಯನ್ನು ಎದುರಿಸಬೇಕಾಯಿತು. ಕೊನೆಗೂ ಕೇಂದ್ರದ ಇಬ್ಬರು ಸಚಿವರ ನಿರ್ಗಮನವಾಗಿದೆ. ಪಕ್ಷಕ್ಕೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಅವರು ನಿರ್ಗಮಿಸಿಲ್ಲ. ಭ್ರಷ್ಟಾಚಾರದಂತಹ ಕೂಗು ಕೇಳಿ ಬಂದಾಗ ಪ್ರಧಾನಿ ಅವರು ತಕ್ಷಣಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ. ಈಗ ಅದನ್ನು ಅರಿಯದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷ ಅದಕ್ಕೆ ದೊಡ್ಡ ಪ್ರಮಾಣದ ದಂಡವನ್ನೇ ತೆರಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.