ಆತುರದ ಹೆಜ್ಜೆ ಮುಖ್ಯಮಂತ್ರಿ ಸ್ಥಾನ ಪಡೆಯುವ ಕನಸು ಕೈಗೂಡಿದ ಮೊದಲ ದಿನವೇ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಕೊಡುಗೆಗಳ ಸಿಹಿ ಉಣಬಡಿಸಿದ್ದಾರೆ. ಆದರೆ, ರಾಜ್ಯದ ಬೊಕ್ಕಸಕ್ಕೆ ಒಟ್ಟು 4,409 ಕೋಟಿ ರೂಪಾಯಿ ಮೊತ್ತದ ದೊಡ್ಡ ಹೊರೆ ಬೀಳುವಂಥ ಸಬ್ಸಿಡಿ, ಸಾಲ ಮನ್ನಾ ಹಾಗೂ ಸಹಾಯಧನ ನೀಡುವ ನಿರ್ಧಾರವನ್ನು ಸಂಪುಟ ರಚನೆಗೂ ಮೊದಲೇ ಪ್ರಕಟಿಸಿರುವುದು ಪಕ್ಷದ ಮುಖಂಡರನ್ನೇ ಬೆರಗಾಗಿಸಿದೆ. ಪ್ರಮಾಣ ವಚನ ಸ್ವೀಕರಿಸಿದ ಮರು ಗಳಿಗೆಯಲ್ಲೇ ಏಕವ್ಯಕ್ತಿ ಸಂಪುಟ ಸಭೆ ನಡೆಸಿ ಹಲವು ಜನಪ್ರಿಯ ಯೋಜನೆಗಳ ಜಾರಿಗೆ ಮಿಂಚಿನ ವೇಗದಲ್ಲಿ ತೀರ್ಮಾನ ಕೈಗೊಂಡಿರುವುದರ ಹಿಂದೆ ಏಕವ್ಯಕ್ತಿ ಪ್ರಭೆ ಪ್ರದರ್ಶಿಸುವ ಹುನ್ನಾರ ಏನಾದರೂ ಅಡಗಿದೆಯೇ ಎಂಬ ಅನುಮಾನ ಕೆಲವರಲ್ಲಾದರೂ ಮೂಡಿದ್ದರೆ ಅಚ್ಚರಿ ಏನಿಲ್ಲ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (ಬಿ.ಪಿ.ಎಲ್) ಪ್ರತಿ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲಿ ತಿಂಗಳಿಗೆ 30 ಕೆ.ಜಿ ಅಕ್ಕಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಫಲಾನುಭವಿಗಳಿಗೆ ಸಾಲ ಮನ್ನಾ ಮೊದಲಾದ ಯೋಜನೆಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು. ಈ ಭರವಸೆಗಳು ಸರ್ಕಾರ ರಚನೆಯಾದ ಮೊದಲ ದಿನವೇ ಈಡೇರಿವೆ. ಇದರ ಅನುಕೂಲ ರಾಜ್ಯದ 1.38 ಕೋಟಿ ಜನರಿಗೆ ಆಗಲಿದೆ. ಆದರೆ, ಈ ಯೋಜನೆಗಳಿಗೆ ಹಣವನ್ನು ಹೊಂದಿಸುವುದು ಸರ್ಕಾರಕ್ಕೆ ಸವಾಲಿನ ಕೆಲಸ ಆಗಬಹುದು. ಮುಂದಿನ ತಿಂಗಳು ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ, ಮಹತ್ವದ ನಿರ್ಧಾರಗಳನ್ನು ಅಲ್ಲಿ ಪ್ರಕಟಿಸಲು ಅವಕಾಶ ಇತ್ತು. ಚರ್ಚೆ, ಸಮಾಲೋಚನೆಗಳಿಲ್ಲದ ಯಾವುದೇ ನಿರ್ಧಾರ ಏಕಪಕ್ಷೀಯ. ಪ್ರಜಾತಂತ್ರ ವ್ಯವಸ್ಥೆಗೆ ಒಗ್ಗುವುದಿಲ್ಲ. `ಅಹಿಂದ' ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಸಿದ್ದರಾಮಯ್ಯ ಸಾಲ ಮನ್ನಾ ಮೂಲಕ ಆ ವರ್ಗದ ಜನರನ್ನು ಸಂತುಷ್ಟಪಡಿಸಲು ಪ್ರಯತ್ನಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಜನಪ್ರಿಯತೆಯ ಜಾಡು ಹಿಡಿದಿರುವುದು ಸ್ಪಷ್ಟ. ಅನಗತ್ಯ ವೆಚ್ಚ ಕಡಿತ ಮತ್ತು ಸೋರಿಕೆ ತಡೆಗಟ್ಟಿ ಸಂಪನ್ಮೂಲ ಸಂಗ್ರಹ ಹೆಚ್ಚಿಸುವ ಆಶಯ ಒಳ್ಳೆಯದೇ. ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಈ ವಿಚಾರದಲ್ಲಿ ಅವರಿಗೆ ನೆರವಾಗಬಹುದು. ಭ್ರಷ್ಟಾಚಾರದ ಬೇರು ಹೆಚ್ಚು ಆಳಕ್ಕೆ ಇಳಿಯುತ್ತಿದೆ. ಅದಕ್ಕೆ ಕಡಿವಾಣ ಹಾಕುವುದು ತುರ್ತು ಅಗತ್ಯ. ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಮತ್ತು ವರ್ಚಸ್ಸು ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ತುರ್ತಾಗಿ ಆಗಬೇಕಾಗಿದೆ. ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು. ವಿದ್ಯುತ್ ಕೊರತೆಯು ಅಭಿವೃದ್ಧಿಯ ಹಾದಿಯಲ್ಲಿ ತೊಡರುಗಾಲಾಗಿದೆ. ಹೊಸ ಸರ್ಕಾರದ ಆದ್ಯತಾ ಪಟ್ಟಿಯಲ್ಲಿ ವಿದ್ಯುತ್ ಉತ್ಪಾದನೆ ಪ್ರಮುಖ ಸ್ಥಾನ ಪಡೆದರೆ ಒಂದು ಬೃಹತ್ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ದೊರೆಯಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.