ರಾಜಕೀಯ ಅಧೀರತೆ ಏಕೆ? ತಮಿಳುನಾಡಿನ ರಾಜಕೀಯವೇ ಹೀಗೆ. ಅಲ್ಲಿನ ರಾಜಕೀಯ ವೈಖರಿ ರಾಷ್ಟ್ರದಲ್ಲಿ ಇನ್ನೆಲ್ಲೂ ನೋಡಸಿಗದು. ಪ್ರಾದೇಶಿಕ ಪಕ್ಷಗಳ ಮೇಲೆ ಜನ ಇಟ್ಟಿರುವ ನಂಬಿಕೆಯ ಮೇಲೆ ಎರಡು ಕಳಗಂಗಳು ಅಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡು ರಾಷ್ಟ್ರೀಯ ಪಕ್ಷಗಳನ್ನು ದೂರವೇ ಇಟ್ಟಿವೆ. ಸಿನಿಮಾ ಹಾಗೂ ರಾಜಕಾರಣ ಮಿಳಿತಗೊಂಡಿರುವ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಕಳಗಂ, ಇನ್ನೊಂದು ಪಕ್ಷವನ್ನು ಹೇಗಾದರೂ ಮಟ್ಟಹಾಕಬೇಕು ಎನ್ನುವ ಧೋರಣೆಯಲ್ಲೇ ಮುಳುಗಿರುತ್ತವೆ. ತಮಿಳುನಾಡಿನ ದ್ರಾವಿಡಕಳಗಂ ಬೆಳೆದುಬಂದ ದಾರಿಯನ್ನು ಗಮನಿಸಿದರೆ ಸೇಡಿನ ಗಿಡಮರಗಳು ಅಕ್ಕಪಕ್ಕದಲ್ಲಿ ಉರುಳಿಬಿದ್ದಿರುವ ದೃಶ್ಯ ಕಾಣುತ್ತದೆ. ಈಗ ಮುಖ್ಯಮಂತ್ರಿ ಜಯಲಲಿತಾ ಅವರು ತುಳಿಯುತ್ತಿರುವ ದಾರಿ ಕೂಡ ಭಿನ್ನವಾಗೇನೂ ಇಲ್ಲ. ಕಾನೂನು ಬಾಹಿರ ಕೃತ್ಯಗಳಿಗೆ ಪ್ರಚೋದನೆ ನೀಡುವ ಹಾಗೂ ಶಾಂತಿಗೆ ಭಂಗ ತರುವ ರಾಜಕೀಯ ಪಕ್ಷಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಿ ಅವುಗಳನ್ನು ನಿಷೇಧಿಸಲಾಗುವುದು ಎಂದು ಅವರು ವಿಧಾನಸಭೆಯಲ್ಲಿಯೇ ಎಚ್ಚರಿಕೆಯ ಹೇಳಿಕೆ ನೀಡಿರುವುದು ಆಘಾತಕಾರಿ ಆಲೋಚನೆ. ಸರ್ವಾಧಿಕಾರಿ ವರ್ತನೆ. ಅಧಿಕಾರದಲ್ಲಿರುವ ಮುಖ್ಯಮಂತ್ರಿಯ ವಿರುದ್ಧ ನಡೆಯುವ ಚಳವಳಿಗಳೆಲ್ಲಾ ಅವರಿಗೆ ಭಯೋತ್ಪಾದನೆಯ ರೀತಿಯಲ್ಲಿ ಕಾಣಿಸುತ್ತಿರುವುದೇ ಅಧಿಕಾರಕ್ಕೆ ಅಂಟಿಕೊಂಡೇ ಇರಬೇಕೆನ್ನುವ ಅವರ ಹಟಮಾರಿ ಧೋರಣೆಗೆ ಸಾಕ್ಷಿಯಾಗಿದೆ. ಜನಸಾಮಾನ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಸರ್ವೇಸಾಮಾನ್ಯ. ಅದು ಜನಸಾಮಾನ್ಯರ ಹಕ್ಕು. ಪ್ರತಿಭಟನೆಯ ಸಮಯದಲ್ಲಿ ಕಲ್ಲುತೂರುವುದು, ಬೆಂಕಿ ಹಚ್ಚುವುದು, ಬಸ್‌ಗಳಿಗೆ ಜಖಂ ಮಾಡುವುದು ಎಲ್ಲ ರಾಜ್ಯಗಳಲ್ಲೂ ನಡೆಯುತ್ತದೆ. ಜನಸಾಮಾನ್ಯರ ಆಕ್ರೋಶ ವ್ಯಕ್ತವಾಗುವುದೇ ಹೀಗೆ. ಅದನ್ನು ಸರ್ಕಾರ ಕಾರ್ಯಕ್ರಮಗಳ ಮೂಲಕ ಹೋಗಲಾಡಿಸಬೇಕು. ಜನರ ಅಸಮಾಧಾನದ ಹಿನ್ನೆಲೆಯನ್ನು ಗಮನಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಹಲವು ಸಿದ್ಧಾಂತಗಳನ್ನು ಹೊಂದಿರುವ ಹಲವು ಪಕ್ಷಗಳು ಉದಯಿಸುವುದು ಸಾಮಾನ್ಯ ಸಂಗತಿ. ಅವುಗಳನ್ನು ಒಪ್ಪಿಕೊಳ್ಳುವುದು ಇಲ್ಲವೇ ತಿರಸ್ಕರಿಸುವುದು ಜನಸಾಮಾನ್ಯರಿಗೆ ಬಿಟ್ಟ ವಿಷಯ. ಇತ್ತೀಚೆಗೆ ವಿಳ್ಳುಪುರಂ ಸಮೀಪ ಪಟ್ಟಾಳಿ ಮಕ್ಕಳ್ ಕಟ್ಚಿ ಪಕ್ಷದ ಸಂಸ್ಥಾಪಕ ಎಸ್.ರಾಮದಾಸ್ ಅವರು ಉದ್ರೇಕಕಾರಿ ಭಾಷಣ ಮಾಡಿದರು. ಅಲ್ಲದೆ ರಾತ್ರಿ ಸಮಯ ಮೀರಿದ್ದರೂ ಅದನ್ನು ಉಲ್ಲಂಘಿಸಿ ಭಾಷಣ ಮಾಡಿದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ಬಂಧನದ ಅವಧಿಯಲ್ಲಿ ಹಾಗೂ ಬಿಡುಗಡೆಯ ನಂತರ ಪಿಎಂಕೆ ಪಕ್ಷದ ಕಾರ್ಯಕರ್ತರು ನಡೆಸಿದ ಗಲಭೆಯಿಂದಾಗಿ ಸರ್ಕಾರಿ ಬಸ್ಸುಗಳು ಸೇರಿದಂತೆ 859 ಬಸ್ಸುಗಳು ಜಖಂಗೊಂಡಿವೆ. ಪೆಟ್ರೋಲ್‌ಬಾಂಬ್‌ಗಳನ್ನು ಬಳಸಲಾಗಿದೆ. ಮೂವರು ಸತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ನಿಷೇಧ ನಿರ್ಧಾರದ ಹಿನ್ನೆಲೆಯಲ್ಲಿ ರಾಜಕೀಯವೂ ಇದೆ ಎನ್ನುವುದನ್ನು ಯಾರಾದರೂ ಗಮನಿಸಬಹುದು. ರಾಮದಾಸ್ ಅವರು ಸಂಸ್ಥಾಪಕರಾಗಿರುವ ಪಟ್ಟಾಳಿಮಕ್ಕಳ್ ಕಟ್ಚಿ ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಜಾತಿಗಳ ಅತಿ ದೊಡ್ಡ ಪಕ್ಷವಾಗಿದೆ. ಇತ್ತೀಚೆಗೆ ದಲಿತರ ಅತಿದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿರುವ ವಿಸಿಕೆ ಲಿಬರೇಷನ್ ಪ್ಯಾಂಥರ್ ಪಕ್ಷ ಪಿಎಂಕೆ ಜೊತೆ ಕೈಗೂಡಿಸಿದೆ. ಹೀಗೆ ರಾಮದಾಸ್ ಪ್ರಬಲವಾಗಿ ಬೆಳೆಯುವುದು ಜಯಲಲಿತಾ ಅವರು ಪ್ರತಿನಿಧಿಸುವ ಅಣ್ಣಾಡಿಎಂಕೆಗೆ ಬೇಡವಾಗಿದೆ. ರಾಜಕೀಯ ಮುತ್ಸದ್ಧಿತನ ತೋರಬೇಕಾದ ಜಯಲಲಿತಾ, ಅಧೀರರಂತೆ ವರ್ತಿಸುವುದು ಶೋಭೆಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.