ವಿಶ್ವಕೋಶ ನಿಲ್ಲದಿರಲಿ ಮೈಸೂರು ವಿಶ್ವವಿದ್ಯಾಲಯದ ಅತ್ಯಂತ ಪ್ರತಿಷ್ಠಿತ ಮತ್ತು ಉಪಯುಕ್ತ ಯೋಜನೆಗಳಲ್ಲಿ ಒಂದಾದ ಕನ್ನಡ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶ ಯೋಜನೆಗಳು ಸಿಬ್ಬಂದಿ ಕೊರತೆಯಿಂದ ಕುಂಟುತ್ತಿದೆ. ಇದಕ್ಕಾಗಿ ಮೈಸೂರು ವಿಶ್ವವಿದ್ಯಾಲಯದ ಆಡಳಿತವನ್ನು ದೂರದೇ ವಿಧಿ ಇಲ್ಲ. ರಾಜ್ಯ ಸರ್ಕಾರ ಇದಕ್ಕಾಗಿ ನೀಡಬೇಕಾದ ಹಣವನ್ನು ನೀಡಿದ್ದರೂ ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವುದು ಸಮರ್ಥನೀಯ ಅಲ್ಲ. ವಿಶ್ವವಿದ್ಯಾಲಯದ ಕುಲಪತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರು, ವಿಶ್ವಕೋಶ ವಿಭಾಗದ ಕಾರ್ಯನಿರ್ವಾಹಕ ಸಂಪಾದಕರು ತಕ್ಷಣವೇ ಈ ಯೋಜನೆ ಚುರುಕಿಗೆ ಕ್ರಮ ಕೈಗೊಳ್ಳಬೇಕು. ಸದ್ಯಕ್ಕೆ ವಿಶ್ವಕೋಶ ವಿಭಾಗದಲ್ಲಿ ನಾಲ್ವರು ಉಪ ಸಂಪಾದಕರಿದ್ದಾರೆ. ಕಾರ್ಯನಿರ್ವಾಹಕ ಸಂಪಾದಕರೂ ಕೂಡ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 10 ಸ್ಥಾನಗಳು ಖಾಲಿ ಇವೆ. ಇದು ಮೈಸೂರು ವಿಶ್ವವಿದ್ಯಾಲಯಕ್ಕೆ ಶೋಭೆ ತರುವ ವಿಷಯ ಅಲ್ಲ. ಕನ್ನಡ ವಿಶ್ವಕೋಶ ಅತ್ಯಂತ ಮಹತ್ವದ ಗ್ರಂಥ ಸಂಪುಟಗಳು. ಭಾಷಾ ದೃಷ್ಟಿಯಿಂದ ಕೂಡ ಇದು ಮುಖ್ಯವಾದುದು. ಭವಿಷ್ಯದ ಪೀಳಿಗೆಗೆ ಆಕರ ಗ್ರಂಥಗಳೂ ಹೌದು. ಇಂತಹ ಮಹತ್ವದ ಯೋಜನೆಯ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲ. ಬ್ರಿಟಾನಿಕ ವಿಶ್ವಕೋಶಗಳ ಮಾದರಿಯಲ್ಲಿ ಕನ್ನಡ ವಿಶ್ವಕೋಶ ಸಂಪುಟಗಳನ್ನು ಹೊರತಂದು ಇತರ ಭಾಷೆಗಳಿಗೂ ಮೈಸೂರು ವಿಶ್ವವಿದ್ಯಾಲಯ ಮಾದರಿಯಾಗಿತ್ತು. 1969ರಲ್ಲಿ ಕನ್ನಡ ವಿಶ್ವಕೋಶದ ಮೊದಲ ಸಂಪುಟ ಬಂತು. ಆರು ತಿಂಗಳಿನಲ್ಲಿಯೇ ಇದನ್ನು ಹೊರ ತರಲಾಗಿತ್ತು. ಆರಂಭದ ಕೆಲವು ಸಂಪುಟಗಳು ಬೇಗ ಬೇಗನೆ ಬಂದವು. ನಂತರ ಈ ಕಾರ್ಯ ನಿಧಾನವಾಗತೊಡಗಿತು. ಕುವೆಂಪು ಜನ್ಮ ಶತಾಬ್ದಿ ಸಂದರ್ಭದಲ್ಲಿ ಅಂತೂ ಎಲ್ಲ 14 ಸಂಪುಟಗಳನ್ನೂ ಹೊರತರಲಾಯಿತು. ನಂತರದ ದಿನಗಳಲ್ಲಿ ಸಂಪುಟಗಳ ಪರಿಷ್ಕರಣ ಮತ್ತು ಪುನರ್ ಮುದ್ರಣದ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಈ ನಡುವೆ ವಿಷಯ ವಿಶ್ವಕೋಶದ ಯೋಜನೆಯನ್ನು ಕೈಗೆತ್ತಿಗೊಳ್ಳಲಾಯಿತು. 1979ರಲ್ಲಿ 1,700 ಪುಟಗಳ ಕರ್ನಾಟಕ ವಿಷಯ ವಿಶ್ವಕೋಶ ಬಂತು. ಪ್ರಾಣಿ ವಿಜ್ಞಾನ, ಜಾನಪದ, ಇತಿಹಾಸ ಮತ್ತು ಪುರಾತತ್ವ, ಭೂಗೋಳ ವಿಜ್ಞಾನ ಕುರಿತ ಸಂಪುಟಗಳು ಹೊರಬಂದಿವೆ. ಕರ್ನಾಟಕ ಕುರಿತ ವಿಷಯ ವಿಶ್ವಕೋಶದ ಪರಿಷ್ಕೃತ ಆವೃತ್ತಿ 2006ರಲ್ಲಿ ಎರಡು ಸಂಪುಟಗಳಲ್ಲಿ ಬಿಡುಗಡೆಯಾಗಿದೆ. ವಿಷಯ ವಿಶ್ವಕೋಶವನ್ನು ಆರಂಭಿಸಿದ ದಿನಗಳಲ್ಲಿ 30 ಸಂಪುಟಗಳನ್ನು ಹೊರ ತರಲು ನಿರ್ಧರಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ವಿಶ್ವಕೋಶದ ಕೆಲಸವನ್ನು ಹೊರ ಗುತ್ತಿಗೆ ನೀಡುವ ಪರಿಪಾಠ ಕೂಡ ಜಾರಿಗೆ ಬಂತು. ಆದರೂ ಕೂಡ ಈ ಕೆಲಸ ನಿರೀಕ್ಷಿತ ವೇಗವನ್ನು ಪಡೆದುಕೊಳ್ಳಲಿಲ್ಲ. ಇವುಗಳ ಸಿ.ಡಿ. ತರುವ ಯೋಜನೆಯೂ ಇದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಸಿಕ್ಕಿರುವುದರಿಂದ ಆ ಮೂಲಕ ಬರುವ ಅನುದಾನವನ್ನೂ ಬಳಸಿಕೊಂಡು ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ವಿಶ್ವಕೋಶ ವಿಭಾಗಕ್ಕೆ ಬಂದರೆ ಸೇವಾ ಭದ್ರತೆ ಇಲ್ಲ ಹಾಗೂ ಬಡ್ತಿ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಹೊಸಬರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ. ಈ ಸಮಸ್ಯೆಯನ್ನು ವಿಶ್ವವಿದ್ಯಾಲಯ ಬಗೆಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.