ಆರ್ಥಿಕ ಚೇತರಿಕೆ ಹಾದಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರವು ಏಪ್ರಿಲ್ ತಿಂಗಳಲ್ಲಿ ಶೇ 4.89ಗೆ ಇಳಿದಿರುವುದು ಮತ್ತು ಕೈಗಾರಿಕಾ ಬೆಳವಣಿಗೆಯು ಮಾರ್ಚ್ ತಿಂಗಳಲ್ಲಿ ಶೇ 2.5ರಷ್ಟು ವೃದ್ಧಿ ದಾಖಲಿಸಿರುವುದು, ನಿರಾಶೆಯ ಕಾರ್ಮೋಡದಲ್ಲಿ ಆಶಾವಾದದ ಬೆಳ್ಳಿಕಿರಣವಾಗಿದ್ದು, ದೇಶದ ಅರ್ಥ ವ್ಯವಸ್ಥೆ ಮತ್ತೆ ಪುನಶ್ಚೇತನದ ಹಾದಿಗೆ ಮರಳುತ್ತಿರುವ ಸಂಕೇತಗಳಾಗಿವೆ. ಸಗಟು ಸೂಚ್ಯಂಕವು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿರುವುದು ಮಹತ್ವದ ವಿದ್ಯಮಾನ. ಹಾಗೆಯೇ ಹಣದುಬ್ಬರವು 2009ರ ನವೆಂಬರ್ ತಿಂಗಳ ನಂತರ ಇದೇ ಮೊದಲ ಬಾರಿಗೆ ಶೇ 5ಕ್ಕಿಂತ ಕೆಳಗೆ ಇಳಿದಿದೆ. ಇದರಿಂದ ಷೇರು ಪೇಟೆಯಲ್ಲಿಯೂ ಖರೀದಿ ಉತ್ಸಾಹ ಗರಿಗೆದರಿದ್ದರೆ, ರೂಪಾಯಿ ಮೌಲ್ಯವರ್ಧನೆಯೂ ಆಗಿದೆ. ಬ್ಯಾಂಕ್ ಬಡ್ಡಿ ದರಗಳನ್ನು ಇನ್ನಷ್ಟು ತಗ್ಗಿಸುವ ಉದ್ಯಮದ ಬೇಡಿಕೆಗೆ ಇನ್ನಷ್ಟು ಬಲ ಬಂದಿದೆ. ಹಣದುಬ್ಬರದ ಮೇಲೆ ನಿಗಾ ಇರಿಸಲಾಗಿದ್ದು, ಒಂದು ವೇಳೆ ನಾಟಕೀಯವಾಗಿ ಬೆಲೆಏರಿಕೆ ಮಟ್ಟ ಕುಸಿದರೆ ಬಡ್ಡಿ ದರ ಕಡಿಮೆ ಮಾಡುವುದಾಗಿ `ಆರ್‌ಬಿಐ' ಇತ್ತೀಚೆಗಷ್ಟೇ ಹೇಳಿಕೆ ನೀಡಿತ್ತು. ಕೇಂದ್ರೀಯ ಬ್ಯಾಂಕ್ ತನ್ನ ವಾಗ್ದಾನದಂತೆ ನಡೆದುಕೊಂಡರೆ, ದಶಕದಲ್ಲಿಯೇ ಅತ್ಯಂಕ ಕಡಿಮೆ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿರುವ ಅರ್ಥವ್ಯವಸ್ಥೆಗೆ ಅಪೇಕ್ಷಿತ ಚೇತರಿಕೆ ದೊರೆಯಲಿದೆ. ಸಗಟು ಹಣದುಬ್ಬರ ಸಹನೀಯ ಮಟ್ಟಕ್ಕೆ ಇಳಿದಿದ್ದರೂ, ಚಿಲ್ಲರೆ ಹಣದುಬ್ಬರ ಮಾತ್ರ ಈಗಲೂ ಗರಿಷ್ಠ ಮಟ್ಟದಲ್ಲಿಯೇ (ಶೇ 9.4) ಇರುವುದು ಮಾತ್ರ ಕಳವಳಕ್ಕೆ ಕಾರಣವಾಗಿದೆ. 2012-13ರಲ್ಲಿ ಕೈಗಾರಿಕಾ ರಂಗದ ಸಾಧನೆ 20 ವರ್ಷಗಳಲ್ಲಿಯೇ ಅತ್ಯಂತ ಕೆಳಮಟ್ಟದಲ್ಲಿದ್ದ ಹಿನ್ನೆಲೆಯಲ್ಲಿ, ಸರಕು ತಯಾರಿಕೆ, ಭಾರಿ ಯಂತ್ರೋಪಕರಣ, ಕಾರ್ಖಾನೆ ಉತ್ಪಾದನೆಯು ಮತ್ತೆ ಅಭಿವೃದ್ಧಿ ಪಥಕ್ಕೆ ಮರಳಿರುವುದು ಆಶಾದಾಯಕವಾಗಿದೆ. ಇದೇ ಪ್ರವೃತ್ತಿ ಮುಂದುವರೆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ (2013-14) ಆರ್ಥಿಕ ಬೆಳವಣಿಗೆ ದರವು ಶೇ 6ರ ಗಡಿ ದಾಟಲಿದೆ ಎಂದು ಆಶಿಸಬಹುದು. ಕೈಗಾರಿಕೆಯ ಬೆಳವಣಿಗೆಯು ಉತ್ತಮ ಸಾಧನೆ ತೋರಿಸಿದ್ದರೂ, ಉದ್ಯಮವು ಇನ್ನೂ ಕುಂಠಿತ ಬೆಳವಣಿಗೆಯ ಗಂಡಾಂತರದಿಂದ ಪಾರಾಗಿಲ್ಲ. ಚಿನ್ನದ ಆಮದು ಪ್ರಮಾಣ ಹೆಚ್ಚಳಗೊಂಡು ಚಾಲ್ತಿ ಖಾತೆ ಕೊರತೆಯೂ ಹೆಚ್ಚಿದೆ. ದುಬಾರಿ ಬಡ್ಡಿ ದರಗಳು ಸರಕುಗಳ ತಯಾರಿಕೆ ಮತ್ತು ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಪುನಶ್ಚೇತನದ ವೇಗ ಕಾಯ್ದುಕೊಂಡು ವೃದ್ಧಿ ದರ ಹೆಚ್ಚಳಗೊಳ್ಳಲು ಬ್ಯಾಂಕ್ ಬಡ್ಡಿ ದರಗಳು ತಕ್ಷಣಕ್ಕೆ ಅಗ್ಗವಾಗಬೇಕಾಗಿದೆ. ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಳಗೊಳ್ಳಬೇಕಾಗಿದೆ. ಬಂಡವಾಳ ಹೂಡಿಕೆಯೇ ಆರ್ಥಿಕ ಪುನಶ್ಚೇತನದ ಮೊಟ್ಟ ಮೊದಲ ಆದ್ಯತೆಯಾಗಬೇಕಾಗಿದೆ. ಹಿತಕರವಲ್ಲದ ಚಾಲ್ತಿ ಖಾತೆ ಕೊರತೆಯು `ಆರ್‌ಬಿಐ'ನ ಸಕಾರಾತ್ಮಕ ನಡೆಗೆ ಅಡ್ಡಿ ಒದಗಿಸುವ ಸಾಧ್ಯತೆ ಇದ್ದರೂ, ಕೇಂದ್ರೀಯ ಬ್ಯಾಂಕ್ ತನ್ನ ಹಣಕಾಸು ನೀತಿಯ ಮಧ್ಯಂತರ ಪರಾಮರ್ಶೆವರೆಗೆ ಕಾಯದೇ ತುರ್ತಾಗಿ ಬಡ್ಡಿ ದರ ಇಳಿಸಲು ಮುಂದಾದರೆ ಸದ್ಯದ ಅನುಕೂಲಕರ ಪರಿಸ್ಥಿತಿಯ ಪ್ರಯೋಜನ ಪಡೆಯಲು ಸಾಧ್ಯವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.