ಕೆರೆಗಳ ರಕ್ಷಣೆ ಮಾಡಿ ಗ್ರಾಮೀಣ ಪ್ರದೇಶದ ಜೀವನಾಡಿಯಾದ ಕೆರೆಗಳು ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಣ್ಮರೆಯಾಗಿವೆ. ಅಳಿದುಳಿದ ಕೆರೆಗಳೂ ಒತ್ತುವರಿಗೆ ಒಳಗಾಗಿವೆ. ಇದರಿಂದಾಗಿ ಕುರಿ, ಮೇಕೆ, ದನಕರುಗಳಿಗೆ ಕುಡಿಯಲು ನೀರು ಸಹ ಸಿಗದಿರುವ ಸ್ಥಿತಿ ಒದಗಿದೆ. ನದಿ-ನಾಲೆಗಳ ಆಸರೆ ಇಲ್ಲದ ಬಯಲುಸೀಮೆಯ ಮಳೆಯಾಶ್ರಿತ ಜಿಲ್ಲೆಗಳಿಗೆ ಕೆರೆಗಳೇ ನೀರಿನ ಆಧಾರ. ಮೈಸೂರು ಸರ್ಕಾರ, 1968ರಲ್ಲಿ ಪ್ರಕಟಿಸಿದ ಗೆಜೆಟಿಯರ್ ಪ್ರಕಾರ ಈಗಿನ ಕೋಲಾರ ಜಿಲ್ಲೆಯಲ್ಲಿ 35,783 ಕೆರೆಗಳಿದ್ದವು. ಆ ಸಂಖ್ಯೆ ಈಗ 2,095ಕ್ಕೆ ಕುಸಿದಿದೆ ಎಂದು ದಾಖಲೆಗಳೇ ಹೇಳುತ್ತವೆ. ಈ ಕೆರೆಗಳೂ ಸುಸ್ಥಿತಿಯಲ್ಲಿ ಇಲ್ಲ. ಬಹುಪಾಲು ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಹೆಚ್ಚಿನವು ಒತ್ತುವರಿಗೆ ಒಳಗಾಗಿವೆ. ಕೋಲಾರ ತಾಲ್ಲೂಕಿನ ಸೀಸಂದ್ರ ಗ್ರಾಮದ ಕೆರೆ ಅಂಗಳದಲ್ಲೇ ರೈತರೊಬ್ಬರು ಕೊಳವೆಬಾವಿ ಕೊರೆಸಿ, ಹನಿ ನೀರಾವರಿಯನ್ನೂ ಅಳವಡಿಸಿ ಕೃಷಿ ಚಟುವಟಿಕೆ ನಡೆಸಿರುವುದು ವರದಿಯಾಗಿದೆ. ಕೆರೆಗಳ ಸ್ಥಿತಿಯನ್ನು ಇದು ಸಾಂಕೇತಿಕವಾಗಿ ಬಿಂಬಿಸುತ್ತದೆ. ಬಹುಪಾಲು ಕೆರೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅನೇಕ ಕೆರೆಗಳು ಹೆಸರಿಗೆ ಮಾತ್ರ ಉಳಿದುಕೊಂಡಿವೆ. ಒತ್ತುವರಿ ಸಮಸ್ಯೆ ಗ್ರಾಮೀಣ ಪ್ರದೇಶಕ್ಕಷ್ಟೇ ಸೀಮಿತವಲ್ಲ. ನಗರ, ಪಟ್ಟಣಗಳಲ್ಲೂ ಕೆರೆಗಳು ಕರಗಿಹೋಗಿವೆ. ಬೆಂಗಳೂರಿನಲ್ಲಿ ಹಿಂದೆ ನೂರಾರು ಕೆರೆಗಳಿದ್ದವು. ನಗರ ಬೆಳೆದಂತೆಲ್ಲಾ ಕೆರೆಗಳು ಮರೆಯಾಗಿವೆ. ಕೆರೆ ಅಂಗಳದಲ್ಲಿ ಬೃಹತ್ ಕಟ್ಟಡಗಳು, ಬಸ್ ನಿಲ್ದಾಣಗಳು, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಕೆರೆ ಆಸುಪಾಸು ಜಮೀನು ಹೊಂದಿರುವವರು ಅವುಗಳನ್ನು ಒತ್ತುವರಿ ಮಾಡಿಕೊಂಡರೆ, ನಗರ ಪ್ರದೇಶಗಳಲ್ಲಿ ಹಣ, ಪ್ರಭಾವ ಮತ್ತು ತೋಳ್ಬಲ ಉಳ್ಳವರು ಎಕರೆಗಟ್ಟಲೆ ಕಬಳಿಸಿದ್ದಾರೆ. ಕೆರೆಗಳ ಒತ್ತುವರಿ ಬಹುದೊಡ್ಡ ಸಮಸ್ಯೆ. ಇದರಿಂದ ಆಗುವ ಪರಿಣಾಮಗಳೂ ಅಷ್ಟೇ ದೊಡ್ಡದು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೂ ಒಳಗೊಂಡಂತೆ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. 1,500 ಅಡಿ ಕೆಳಗೆ ಹೋದರಷ್ಟೇ ನೀರು! ಅಂತರ್ಜಲ ಮರುಪೂರಣಕ್ಕೆ ಇರುವ ಏಕೈಕ ಆಧಾರ ಕೆರೆಗಳು. ಅವುಗಳನ್ನೂ ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಕುಡಿಯಲು ಟ್ಯಾಂಕರ್‌ಗಳ ಮೂಲಕ ಹಳ್ಳಿಗಳಿಗೆ ನೀರು ಪೂರೈಸಬೇಕಾದ ಸ್ಥಿತಿ ಒದಗಬಹುದು. ಒತ್ತುವರಿ ತೆರವುಗೊಳಿಸುವುದು ಅಷ್ಟೇನೂ ಸುಲಭವಲ್ಲ. ಪಂಚಾಯ್ತಿ ಮಟ್ಟದಲ್ಲಿ ಆಗುವಂತಹ ಕೆಲಸವೂ ಅಲ್ಲ. ಹಾಗಂತ ಕೈಕಟ್ಟಿ ಕುಳಿತರೆ ಪರಿಣಾಮ ಭೀಕರವಾಗಿರುತ್ತದೆ. ಈ ಅಪಾಯವನ್ನು ಅರಿತು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಈಗ ಇರುವ ಕೆರೆಗಳನ್ನಾದರೂ ಉಳಿಸಿಕೊಳ್ಳುವುದು ತುರ್ತು ಅಗತ್ಯ. ಒತ್ತುವರಿ ತೆರವುಗೊಳಿಸುವುದರ ಜತೆಗೆ ಹೂಳನ್ನೂ ತೆಗೆದು ಕೆರೆಗಳ ಪುನಶ್ಚೇತನಕ್ಕೆ ದೃಢ ಹೆಜ್ಜೆ ಇಡಬೇಕು. ಕೆರೆಗಳ ಜಲಾನಯನ ಪ್ರದೇಶಗಳೂ ಸಂಕುಚಿತಗೊಳ್ಳುತ್ತಿವೆ. ಇವುಗಳ ರಕ್ಷಣೆಯೂ ಅವಶ್ಯ. ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ 3,579 ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಸುಮಾರು 26 ಸಾವಿರ ಕೆರೆಗಳಿವೆ. ಅವುಗಳ ಅಭಿವೃದ್ಧಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ಭರವಸೆ ನೀಡಿದೆ. ಬರಿ ಭರವಸೆ, ಘೋಷಣೆಗಳಿಂದ ಕೆರೆಗಳ ರಕ್ಷಣೆ ಮತ್ತು ಅಭಿವೃದ್ಧಿ ಸಾಧ್ಯವಿಲ್ಲ. ಬದ್ಧತೆ ಪ್ರದರ್ಶಿಸಬೇಕಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.