ಕಾಗದದ ಹುಲಿ ಬೇಕಿಲ್ಲ ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ) ಮಸೂದೆ 2013ಕ್ಕೆ ರಾಜ್ಯ ವಿಧಾನಸಭೆ ಶುಕ್ರವಾರ ಸರ್ವಾನುಮತದ ಒಪ್ಪಿಗೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗುಳುವುದು, ಮೂತ್ರ ವಿಸರ್ಜನೆ, ಒಣ ತಾಜ್ಯ ಮತ್ತು ಹಸಿ ತ್ಯಾಜ್ಯವನ್ನು ವಿಂಗಡನೆ ಮಾಡದೆ ಇರುವಂತಹ ಸಂದರ್ಭಗಳಲ್ಲಿ ರೂ 100ರಿಂದ ರೂ 1000ವರೆಗೆ ದಂಡ ವಿಧಿಸುವ ಅವಕಾಶವನ್ನು ಈ ಮಸೂದೆಯಲ್ಲಿ ಕಲ್ಪಿಸಲಾಗಿದೆ. ಐದು ಬಾರಿ ತಪ್ಪು ಮಾಡಿದರೆ ಮೂರು ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಬಹುದಾದ ಈ ಮಸೂದೆ ಎಷ್ಟರ ಮಟ್ಟಿಗೆ ಜಾರಿಯಾಗಬಹುದು ಎಂಬುದು ಈಗಿನ ಪ್ರಶ್ನೆ. ಬೆಂಗಳೂರಿನಂತಹ ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಂಡು ಬರುತ್ತದೆ. ಸಭ್ಯತೆಯ ದೃಷ್ಟಿಯಿಂದ ಇದು ಶುದ್ಧ ತಪ್ಪು. ಇನ್ನು ಮುಂದೆ ಕಾನೂನಿನ ದೃಷ್ಟಿಯಿಂದಲೂ ತಪ್ಪು. ಆದರೆ ನಾಗರಿಕರಿಗೆ ಒದಗಿಸಿರುವ ಮೂಲಸೌಕರ್ಯಗಳಾದರೂ ಎಷ್ಟಿವೆ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಸಮೀಕ್ಷೆಗಳ ಪ್ರಕಾರ, ಬೆಂಗಳೂರು ನಗರಕ್ಕೆ ಸದ್ಯ ಬೇಕಾಗಿರುವುದು 5,000 ಶೌಚಾಲಯಗಳು. ಆದರೆ ಈಗ ಇರುವುದು 504 ಮಾತ್ರ. ಅದರಲ್ಲೂ ಬಳಕೆಗೆ ಯೋಗ್ಯವಾಗಿರುವುದು 200 ಮಾತ್ರ. ನಗರ ಪಾಲಿಕೆ ಆಗಲಿ, ಸರ್ಕಾರವಾಗಲಿ ಇವುಗಳ ನಿರ್ವಹಣೆ ತನ್ನ ಜವಾಬ್ದಾರಿ ಎಂದು ಎಂದೂ ಭಾವಿಸಿಲ್ಲ. ಬಳಕೆಗೆ ಯೋಗ್ಯವಲ್ಲದ ಶೌಚಾಲಯಗಳು ದೂರದಿಂದಲೇ ದುರ್ಗಂಧ ಬೀರಿ ತಮ್ಮ ಅಸ್ತಿತ್ವವನ್ನು ಸಾರುತ್ತವೆ. ಹಲವೆಡೆ ಇವು ಅನೈತಿಕ ಕಾರ್ಯಗಳ ತಾಣಗಳೂ ಆಗಿವೆ. ಸಿಂಗಪುರವನ್ನು ಉದಾಹರಣೆಯಾಗಿಟ್ಟುಕೊಂಡು ನಗರದ ಅಭಿವೃದ್ಧಿ ಮಾಡುತ್ತೇವೆ ಎನ್ನುವ ರಾಜಕಾರಣಿಗಳು ಮೊತ್ತ ಮೊದಲಿಗೆ ಮೂಲಸೌಲಭ್ಯಗಳನ್ನು ಒದಗಿಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸರ್ಕಾರೇತರ ಸಂಸ್ಥೆಗಳು ಪ್ರತಿಫಲಾಪೇಕ್ಷೆ ಇಲ್ಲದೆ ನಿರ್ಮಿಸಿದ ಶೌಚಾಲಯಗಳೂ ನಿರ್ವಹಣೆ ಇಲ್ಲದೆ ನಿಷ್ಪ್ರಯೋಜಕವಾಗಿವೆ. ಕಾನೂನಿಗೆ ಹಲ್ಲು ಬರುವುದು ಕಾನೂನು ನಿರ್ಮಾತೃಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದಾಗ. ಬೆಂಗಳೂರಿನಲ್ಲಿ ಕಸ ನಿರ್ವಹಣೆಯೂ ವಿಫಲವಾಗಿದೆ. ಹಲವು ಬಡಾವಣೆಗಳಲ್ಲಿ ದಿನನಿತ್ಯ ಕಸ ಸಾಗಣೆ ಹಗಲು ಕನಸಾಗಿದೆ. ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ ಬಗ್ಗೆ ಜನರು ಪ್ರಶ್ನಿಸಿದರೆ ನಗರಪಾಲಿಕೆ ಗುತ್ತಿಗೆದಾರರತ್ತ ಬೆಟ್ಟು ತೋರಿಸುತ್ತದೆ. ಅಧಿಕಾರಿಗಳೇ ಜವಾಬ್ದಾರಿಯಿಂದ ಕೆಲಸ ನಿರ್ವಹಿಸದೇ ಇದ್ದಾಗ ಗುತ್ತಿಗೆದಾರರಿಂದ ಸಮರ್ಥ ನಿರ್ವಹಣೆ ನಿರೀಕ್ಷಿಸುವಂತಿಲ್ಲ. ಮೂಲದಲ್ಲಿಯೇ ಹಸಿ ಮತ್ತು ಒಣ ಕಸ ನಿರ್ವಹಣೆಯನ್ನು ಮಾಡುವುದನ್ನು ನಿರೀಕ್ಷಿಸುವ ಮಹಾ ನಗರಪಾಲಿಕೆ ಮೊದಲಿಗೆ ಕಸ ಸಾಗಣೆ ಪ್ರತಿ ನಿತ್ಯ ಆಗುವಂತೆ ನೋಡಿಕೊಳ್ಳಬೇಕು. ವಿಂಗಡಿಸಿದ ಕಸ ಬಳಕೆ ಆಗಬೇಕು. ಇಲ್ಲದಿದ್ದಲ್ಲಿ ಅದು ಇನ್ನೊಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಇದನ್ನು ಮಾಡದೆ ದಂಡ, ಜೈಲು ಶಿಕ್ಷೆಯ ಬೆದರಿಕೆ ಒಡ್ಡುವುದು ಹಾಸ್ಯಾಸ್ಪದ. ಈಗಾಗಲೇ ಕಳಪೆ ದರ್ಜೆಯ ಪ್ಲಾಸ್ಟಿಕ್ ಬಳಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ ಸರ್ಕಾರ ಇದರ ಜಾರಿಯಲ್ಲಿ ಪೂರ್ಣ ವಿಫಲವಾಗಿದೆ. ಹತ್ತರೊಡನೆ ಹನ್ನೊಂದು ಎಂಬಂತೆ ಹೊಸ ಕಾನೂನು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ. ಮಸೂದೆ ರಚನೆಯ ಸಂದರ್ಭದಲ್ಲಿ ಇರುವ ಗಾಂಭೀರ್ಯ ಅದರ ಜಾರಿಯ ಸಂದರ್ಭದಲ್ಲಿಯೂ ಇರುವುದನ್ನು ಜನರು ನಿರೀಕ್ಷಿಸುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.