ಮತ್ತೆ ಹೊರೆ ಬೇಡ ಬೆಲೆ ಏರಿಕೆ ಎಂಬುದು ಯಾವುದೋ ಒಂದು ನೆಪದಲ್ಲಿ, ಅಗತ್ಯ ವಸ್ತುಗಳ ರೂಪದಲ್ಲಿ ಸಿಡಿಲಿನಂತೆ ಎರಗುತ್ತಲೇ ಇದೆ. ಇದರ ಹೊಡೆತಕ್ಕೆ ಜನಸಾಮಾನ್ಯರ ಬದುಕು ಸೂತ್ರ ಕಿತ್ತ ಗಾಳಿಪಟದಂತೆ ಆಗಿದೆ. ವರ್ಷದ ಆರಂಭದ್ಲ್ಲಲೇ ಹಾಲಿನ ಬೆಲೆ ಲೀಟರ್‌ಗೆ ಮೂರು ರೂಪಾಯಿಯಷ್ಟು ಏರಿ, ಕುಟುಂಬದ ಆದಾಯ- ವೆಚ್ಚದ ತಕ್ಕಡಿ ಸಮತೋಲನ ತಪ್ಪಿತ್ತು. ತಿಂಗಳ ಹಿಂದೆ ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಾಯಿತು. ಅದರ ಬೆನ್ನಿಗೇ ಪೆಟ್ರೋಲ್ ಮತ್ತಷ್ಟು ತುಟ್ಟಿಯಾಯಿತು. ಇದರ ನಡುವೆ ದಿನಬಳಕೆಯ ಇನ್ನಿತರ ಅವಶ್ಯ ವಸ್ತುಗಳ ಬೆಲೆಯಲ್ಲೂ ಏರಿಕೆ ಆಗುತ್ತಲೇ ಇದೆ. ಈ ಎಲ್ಲದರ ಹೊಡೆತ ಸಾಲದೆಂಬಂತೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್), ಗ್ರಾಹಕರಿಗೆ ಮತ್ತೊಂದು ಗುದ್ದು ನೀಡಲು ನಿರ್ಧರಿಸಿರುವುದು ಸಮರ್ಥನೀಯವಲ್ಲ. ನಂದಿನಿ ಸಿಂಗಲ್ ಟೋನ್ಡ್ ಹಾಲಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಲು ಕೆಎಂಎಫ್ ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಪ್ರಸ್ತಾವಕ್ಕೆ ಸರ್ಕಾರದ ಒಪ್ಪಿಗೆ ಪಡೆದು, ಪರಿಷ್ಕೃತ ದರವನ್ನು ಆಗಸ್ಟ್ 10ರಿಂದ ಜಾರಿಗೆ ತರಲು ಹೊರಟಿರುವ ಅದರ ಉದ್ದೇಶ ಜನರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ. ನೆರೆಹೊರೆ ರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿನ ಹಾಲಿನ ಬೆಲೆ ಕಡಿಮೆ ಎಂಬುದು ನಿಜವಾದರೂ ಆರು ತಿಂಗಳ ಅಂತರದಲ್ಲಿ ಎರಡು ಸಲ ದರ ಏರಿಸಿದರೆ ಭರಿಸುವುದು ಕಷ್ಟಸಾಧ್ಯ. ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳಿಗೆ ಹಾಲಿನ ದರ ಏರಿಕೆಯಿಂದ ಹೆಚ್ಚಿನ ಹೊರೆ ಬೀಳಲಿದೆ. ಅಲ್ಲದೇ ನಂದಿನಿ ಹಾಲು ಖರೀದಿಸುವ ಹೋಟೆಲ್‌ಗಳು, ಸಿಹಿ ತಿನಿಸು ತಯಾರಕರು ಹಾಲಿನ ಬೆಲೆ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಗಳೂ ಇವೆ. ಇವನ್ನೆಲ್ಲ ಗಮನದಲ್ಲಿ ಇರಿಸಿಕೊಂಡು ಕೆಎಂಎಫ್ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದು ವಿಹಿತ. ರೈತರ ಹೆಸರನ್ನು ಮುಂದಿಟ್ಟುಕೊಂಡು ಇಲ್ಲಿಯವರೆಗೂ ಹಾಲಿನ ದರವನ್ನು ಹೆಚ್ಚಿಸುತ್ತಿದ್ದ ಕೆಎಂಎಫ್ ಈ ಬಾರಿ ಮೂಲ ಸೌಕರ್ಯದ ಮಂತ್ರ ಜಪಿಸುತ್ತಿದೆ. ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯ ಧನವನ್ನು ರಾಜ್ಯ ಸರ್ಕಾರ ರೂ 2ರಿಂದ 4ಕ್ಕೆ ಹೆಚ್ಚಿಸಿದ್ದರಿಂದ ಹಾಲಿನ ಸಂಗ್ರಹ ಹೆಚ್ಚಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ವೃದ್ಧಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ ಎಂಬುದು ಕೆಎಂಎಫ್ ವಾದ. ಅಂದರೆ ಈಗಿನ ಉದ್ದೇಶಿತ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ದರವೇನೂ ಸಿಗುವುದಿಲ್ಲ. ಈ ಹಿಂದೆಯೂ ಹಾಲಿನ ಬೆಲೆ ಏರಿಕೆಯ ಹೆಚ್ಚಿನ ಭಾಗ ಆಡಳಿತ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಕ್ಕೆ ಸರಿದೂಗಿಸುವ ಪ್ರಯತ್ನಗಳೇ ಅನೇಕ ಸಲ ಆಗಿವೆ. ನಷ್ಟ ತುಂಬಿಕೊಳ್ಳಲು, ಮೂಲ ಸೌಕರ್ಯ ವೃದ್ಧಿ ಹೀಗೆ ಎಲ್ಲದಕ್ಕೂ ಬೆಲೆ ಏರಿಕೆಯೇ ಪರಿಹಾರ ಎನ್ನುವಂತಾಗಿರುವುದು ವಿಷಾದನೀಯ. ನಷ್ಟದ ಕಾರಣಗಳನ್ನು ಪತ್ತೆಹಚ್ಚಿ, ಸರಿಪಡಿಸಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವ ಕಡೆ ಆಡಳಿತ ಮಂಡಳಿ ಗಮನಹರಿಸಿದರೆ ಹಾಲಿನ ಬೆಲೆಯನ್ನು ಪದೇ ಪದೇ ಹೆಚ್ಚಿಸುವ ಅನಿವಾರ್ಯ ಎದುರಾಗಲಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.