ಕಣ್ಣೊರೆಸುವ ತಂತ್ರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಮಗೆ ಈ ದೇಶದಲ್ಲಿ ಯಾವುದೇ ಅಂಕುಶ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ. ಎರಡು ತಿಂಗಳ ಹಿಂದೆ ದೇಶದಾದ್ಯಂತ ಸುದ್ದಿಯಾಗಿದ್ದ ಸ್ಪಾಟ್‌ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸುತ್ತಿರುವ ತನಿಖಾ ಪ್ರಕ್ರಿಯೆಯನ್ನೇ ಅದು ಕಡೆಗಣಿಸಿದೆ. ಈ ಹಗರಣಗಳ ಬಗ್ಗೆ ತನಿಖೆಗಾಗಿ ಬಿಸಿಸಿಐ ಸ್ವತಃ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಆಯೋಗ ರಚಿಸಿತು. ಆ ಆಯೋಗ ಇದೀಗ ತನ್ನ ವರದಿಯನ್ನೂ ಸಲ್ಲಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ತಾನ ರಾಯಲ್ಸ್‌ನ ರಾಜ್ ಕುಂದ್ರಾ ಅವರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಂತಹ ಬಲವಾದ ಪುರಾವೆಗಳಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಈ ವಿವಾದದ ಬಿಸಿ ತಾರಕಕ್ಕೇರಿದ್ದಾಗ ಅದನ್ನು ತಣ್ಣಗಾಗಿಸಲು ಈ ತನಿಖಾ ಆಯೋಗವನ್ನು ರಚಿಸಲಾಗಿತ್ತು. ಇದೊಂದು ಕಣ್ಣೊರೆಸುವ ತಂತ್ರ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಮೇಯಪ್ಪನ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮೇಯಪ್ಪನ್ ಅವರ ಮಾವ ಎನ್. ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ವ್ಯಾಪಕ ಒತ್ತಡ ಬಂದಿತ್ತು. ಆಗ ಅವರು ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿ ಜಗಮೋಹನ್ ದಾಲ್ಮಿಯ ಅವರನ್ನು `ಹಂಗಾಮಿ' ಅಧ್ಯಕ್ಷರಾಗಿ ನೇಮಕಗೊಳ್ಳುವಂತೆ ನೋಡಿಕೊಂಡರಲ್ಲದೆ, ತಾವು `ಅಧಿಕಾರ ರಹಿತ ಅಧ್ಯಕ್ಷ'ರಾಗಿ ಉಳಿದರು. ಇದೀಗ ಬಿಸಿಸಿಐನ ತನಿಖಾ ಆಯೋಗ ನೀಡಿರುವ ವರದಿಯನ್ನೇ ಬೆನ್ನಿಗಿಟ್ಟುಗೊಂಡು ಶ್ರೀನಿವಾಸನ್ ಮತ್ತೆ ಬಿಸಿಸಿಐ ಅಧ್ಯಕ್ಷ ಗಾದಿಗೆ ಏರಲು ರಂಗ ಸಜ್ಜುಗೊಳಿಸಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಎದ್ದಿದೆ. ಈ ನಡುವೆ ಕ್ರೀಡಾ ಇಲಾಖೆ ಹೇಳಿಕೆಯೊಂದನ್ನು ನೀಡಿದ್ದು `ಪೊಲೀಸ್ ತನಿಖಾ ವರದಿ ಬರುವವರೆಗಾದರೂ ಬಿಸಿಸಿಐ ಕಾಯಬೇಕು' ಎಂದರೆ, ಬಿಸಿಸಿಐ `ಇಬ್ಬರು ನ್ಯಾಯಮೂರ್ತಿಗಳ ಸಮಿತಿಯ ವರದಿಗೇ ನಾವು ಬದ್ಧ' ಎಂದಿದೆ. ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣಗಳೆಲ್ಲವೂ ಕ್ರೀಡಾಂಗಣದ ಹೊರಗೆ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡಿವೆ. ಇದು ಕ್ರಿಮಿನಲ್ ಪ್ರಕರಣ. ಇದರ ಬಗ್ಗೆ ಏಕಾಏಕಿ ಬಿಸಿಸಿಐ ಅಧ್ಯಕ್ಷರೇ ತನಿಖಾ ಸಮಿತಿಯೊಂದನ್ನು ನೇಮಿಸುವುದು, ಆ ವರದಿಯಲ್ಲಿ ತಮ್ಮ ಅಳಿಯನ ಮೇಲಿರುವ `ಆರೋಪಗಳಿಗೆ ಸಾಕ್ಷ್ಯಾಧಾರ ಇಲ್ಲ' ಎಂದು ಹೇಳಲಾಗಿದೆ ಎಂದು ಪ್ರಕಟಿಸುವಂತಹ ಪ್ರಕ್ರಿಯೆ ನಿಜಕ್ಕೂ ಲಜ್ಜೆಗೇಡಿತನದ ಪರಮಾವಧಿ. ಈ ಕ್ರಿಮಿನಲ್ ಪ್ರಕರಣದ ಬೇರುಗಳು ಭೂಗತ ಲೋಕದಲ್ಲಿಯೂ ಸುತ್ತಿಕೊಂಡಿವೆ ಎಂದು ದೆಹಲಿಯ ಉನ್ನತ ಪೊಲೀಸ್ ಅಧಿಕಾರಿಗಳೇ ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪೊಲೀಸ್ ತನಿಖೆಯನ್ನೇ ಕಡೆಗಣಿಸಿ ಬಿಸಿಸಿಐ `ಸರ್ವಾಧಿಕಾರಿ'ಯಂತೆ ವರ್ತಿಸುತ್ತಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಧಿಕ್ಕರಿಸುವಂತಹ ನಡವಳಿಕೆಯಾಗಿದೆ. ಬಿಸಿಸಿಐ ಇನ್ನಾದರೂ ತನ್ನ ಇಂತಹ ಠೇಂಕಾರಗಳನ್ನು ನಿಲ್ಲಿಸಿ, ಈ ದೇಶದ ಕಾನೂನು ವ್ಯವಸ್ಥೆಯನ್ನು ಗೌರವಿಸುವುದನ್ನು ಕಲಿಯಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.