ಶುದ್ಧ ನೀರು ಪೂರೈಸಿ ಜನರಿಗೆ ಕುಡಿಯಲು ಶುದ್ಧ ನೀರು ಪೂರೈಸುವುದು ಬೆಂಗಳೂರಿನ ಮುಂದಿರುವ ಬಹುದೊಡ್ಡ ಸವಾಲು. ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರು ಸಂಪೂರ್ಣ ಶುದ್ಧವಲ್ಲ ಎಂಬ ಸತ್ಯ ಗೊತ್ತಿದ್ದರೂ ಅದನ್ನೇ ಕುಡಿಯಬೇಕಾದ ಅನಿವಾರ್ಯ ಸ್ಥಿತಿ ಜನಸಾಮಾನ್ಯರದು. ನೀರಿನ ಪೈಪುಗಳು ಒಡೆದು, ಅದರಲ್ಲಿ ಒಳಚರಂಡಿ ನೀರು ಬೆರೆಯುವುದರಿಂದ ಆಗುವ ಅವಘಡಗಳ ವ್ಯಥೆ ಬೇರೆ ಬಗೆಯದು. ಆದರೆ, ಪೂರೈಕೆಯಾಗುತ್ತಿರುವ ನೀರೇ ಕಲುಷಿತ ಎಂಬುದು ಆತಂಕದ ವಿಷಯ. `ಜನಾಗ್ರಹ' ಸ್ವಯಂ ಸೇವಾ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಇಂತಹ ಆಘಾತಕಾರಿ ಅಂಶ ಹೊರಬಿದ್ದಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಶೇಕಡ 72ರಷ್ಟು ಮನೆಗಳಿಗೆ ಪೂರೈಕೆಯಾಗುವ ಕುಡಿಯುವ ನೀರು ಕಲುಷಿತವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ನಗರದ 7,910 ಮನೆಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ 5,734 ಮನೆಗಳಲ್ಲಿ ನೀರು ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿರುವುದು ಕಂಡುಬಂದಿದೆ. ಈ ಸಮೀಕ್ಷೆ ನಗರಾಡಳಿತಕ್ಕೆ ಎಚ್ಚರಿಕೆಯ ಗಂಟೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರಿಗೆ ಮುಂಚೂಣಿ ಸ್ಥಾನ ಇದೆ. ಆದರೆ, ಈ ಬೆಳವಣಿಗೆಗೆ ತಕ್ಕಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಆಗಿಲ್ಲ. ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ ಹಲವು ಪ್ರದೇಶಗಳಲ್ಲಿ ಸಂಪೂರ್ಣ ಹದಗೆಟ್ಟಿದೆ. ಮಹಾನಗರಪಾಲಿಕೆ ಹಾಗೂ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮೂಲ ಸೌಕರ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಕುಡಿಯಲು ಯೋಗ್ಯವಾದ ಶುದ್ಧ ನೀರು ಪೂರೈಸುವುದು ಜಲಮಂಡಳಿಯ ಜವಾಬ್ದಾರಿ. ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಪ್ರತ್ಯೇಕ ಖಾಸಗಿ ವ್ಯವಸ್ಥೆ ಇದ್ದರೂ ಮನೆಗಳಿಗೆ ಪೂರೈಸುವ ನೀರು ಶುದ್ಧವಾಗಿದೆಯೇ ಇಲ್ಲವೇ ಎಂಬುದನ್ನು ಆಗಿಂದಾಗ್ಗೆ ಪರೀಕ್ಷಿಸುವ, ನೀರು ಪೂರೈಕೆಗೆ ಹಾಕುವ ಪೈಪುಗಳು ಒಳಚರಂಡಿ ಪೈಪುಗಳ ಪಕ್ಕ ಇರದಂತೆ ನೋಡಿಕೊಳ್ಳುವ ವ್ಯವಸ್ಥೆ ಇಲ್ಲ. ಅಂತಹ ವ್ಯವಸ್ಥೆ ರೂಪಿಸಬೇಕು. ನಿರಂತರ ನೀರು ಪೂರೈಕೆ ಇನ್ನೂ ಸಾಧ್ಯವಾಗಿಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಬೇಕು. ನೀರು ಸಂಪರ್ಕ ಜಾಲದ ಸಮಗ್ರ ನಕ್ಷೆ ಸಿದ್ಧವಾಗಬೇಕು. ಯಾವ ಪೈಪು ಎಷ್ಟು ಹಳೆಯದು, ಅದನ್ನು ಯಾವಾಗ ಬದಲಿಸಬೇಕು ಎಂಬ ಮಾಹಿತಿ ಅದರಲ್ಲಿ ಇರಬೇಕು. ನಗರದ ಜನಸಂಖ್ಯೆ ಕೋಟಿ ಮುಟ್ಟಿದೆ. ಸುತ್ತಮುತ್ತಲಿನ ಹಳ್ಳಿಗಳೆಲ್ಲ ನಗರದೊಳಗೆ ಸೇರಿಕೊಂಡಿವೆ. ಇಷ್ಟೊಂದು ಜನರಿಗೆ ಅಗತ್ಯ ಪ್ರಮಾಣದಲ್ಲಿ ಶುದ್ಧ ನೀರು ಪೂರೈಸುವುದು ಸವಾಲಿನ ಕೆಲಸ. ನಗರದ ಕೆಲವೆಡೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಶುದ್ಧವಾಗಿಲ್ಲ ಎಂಬ ಸಂಗತಿಯನ್ನು ಹೈಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸ್ವಯಂ ಪ್ರೇರಿತವಾಗಿ ದಾಖಲು ಮಾಡಿಕೊಂಡಿರುವುದು ಪರಿಸ್ಥಿತಿಯ ತೀವ್ರತೆಯನ್ನು ಎತ್ತಿತೋರಿಸುವಂತಿದೆ. ನೀರಿನ ಮೂಲಗಳನ್ನು ಶುದ್ಧವಾಗಿಡಲು ಜನರ ಸಹಕಾರವೂ ಅಗತ್ಯ. ನೀರಿನ ಕೊರತೆ ನೀಗಿಸಲು ಮಳೆ ನೀರು ಸಂಗ್ರಹ ಒಂದೇ ಸುಸ್ಥಿರ ಮಾರ್ಗೋಪಾಯ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.