ಬ್ಯಾಡ್ಮಿಂಟನ್‌ನಲ್ಲಿ ಹೊಸ ಹೆಜ್ಜೆ ಭಾರತದಲ್ಲಿ ಸದ್ಯ ಹೆಚ್ಚು ಜನಪ್ರಿಯವಾಗುತ್ತಿರುವ ಕ್ರೀಡೆ ಬ್ಯಾಡ್ಮಿಂಟನ್. ಸೈನಾ ನೆಹ್ವಾಲ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಟ್ಟ ಬಳಿಕ ಈ ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಮೂಡಿದೆ. ಬ್ಯಾಡ್ಮಿಂಟನ್ ಲೋಕದಲ್ಲಿ ಭಾರತ ಹೊಸ ಶಕ್ತಿಯಾಗಿ ಉದಯಿಸಿದೆ. ಸೈನಾ ಸಾಧನೆಯಿಂದ ಪ್ರೇರೇಪಿತರಾಗಿ ಯುವ ಆಟಗಾರರು ಅಪೂರ್ವ ಪ್ರದರ್ಶನ ತೋರುತ್ತಿದ್ದಾರೆ. ಪಿ.ವಿ.ಸಿಂಧು, ಪಿ.ಕಶ್ಯಪ್ ಸಾಧನೆಯೇ ಇದಕ್ಕೆ ಸಾಕ್ಷಿ. ಹೆಚ್ಚಿನ ಪೋಷಕರು ಬ್ಯಾಡ್ಮಿಂಟನ್ ಆಡಲು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ಪ್ರಗತಿ ಬಗ್ಗೆ ವಿದೇಶದ ಬ್ಯಾಡ್ಮಿಂಟನ್ ಪರಿಣತರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಮನಗಂಡ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಈಗ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ರೂಪಿಸಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಐಪಿಎಲ್ ಕ್ರಿಕೆಟ್ ಟೂರ್ನಿ ಈ ಪರಿಕಲ್ಪನೆಗೆ ಸ್ಫೂರ್ತಿ. ಆಗಸ್ಟ್ 14ರಂದು ಆರಂಭವಾಗಲಿರುವ ಐಬಿಎಲ್‌ಗೆ ಪೂರ್ವಭಾವಿಯಾಗಿ ನವದೆಹಲಿಯಲ್ಲಿ ನಡೆದ ಹರಾಜು ಯಶಸ್ವಿಯಾಗಿದೆ. ಈ ಮೂಲಕ ಬ್ಯಾಡ್ಮಿಂಟನ್ ಅಂಗಳದಲ್ಲೂ ಹಣ ಸದ್ದು ಮಾಡಲಾರಂಭಿಸಿದೆ. ಕೆಲ ಟೂರ್ನಿಗಳಲ್ಲಿ ಪಾಲ್ಗೊಂಡು ಬಹುಮಾನ ರೂಪದಲ್ಲಿ ಅಲ್ಪ ಹಣ ಪಡೆಯುತ್ತಿದ್ದವರು ಈಗ ಲಕ್ಷ ಲಕ್ಷ ರೂಪಾಯಿಗೆ ವಿವಿಧ ಫ್ರಾಂಚೈಸ್‌ಗಳ ಪಾಲಾಗಿದ್ದಾರೆ. ಸೈನಾ, ಕಶ್ಯಪ್, ಸಿಂಧು, ಅಷ್ಟೇನು ಹೆಸರು ಮಾಡಿರದ ಪ್ರದ್ಯಾ ಗಾದ್ರೆ ಹಾಗೂ ಮನೀಷಾ ಅವರನ್ನು ಖರೀದಿಸಲು ಫ್ರಾಂಚೈಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬೆಂಗಳೂರಿನ ಬೆಂಗಾ ಬೀಟ್ಸ್ ಸೇರಿದಂತೆ ಆರು ನಗರಗಳ ಫ್ರಾಂಚೈಸ್‌ಗಳು ಒಟ್ಟು 60 ಆಟಗಾರರನ್ನು ಖರೀದಿಸಿವೆ. ಸುನಿಲ್ ಗಾವಸ್ಕರ್ ಮುಂಬೈ ಫ್ರಾಂಚೈಸ್‌ನಲ್ಲಿ ಹಣ ತೊಡಗಿಸಿರುವ ಸುದ್ದಿ ಇದೆ. ಇದೊಂದು ಒಳ್ಳೆಯ ಬೆಳವಣಿಗೆ. ಹರಾಜಿನಲ್ಲಿ ಮಲೇಷ್ಯಾದ ಲೀ ಚೋಂಗ್ ವೀ, ಇಂಡೊನೇಷ್ಯಾದ ತೌಫಿಕ್ ಹಿದಾಯತ್ ಸೇರಿದಂತೆ ಪ್ರಮುಖ ದೇಶಗಳ ಆಟಗಾರರು ಪಾಲ್ಗೊಂಡಿದ್ದರು. ಆದರೆ ಟೂರ್ನಿಯ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿರುವ ಕಾರಣ ಚೀನಾದ ಆಟಗಾರರು ಭಾಗವಹಿಸುವುದಿಲ್ಲ. 18 ದಿನಗಳ ಈ ಲೀಗ್ ವಿಶ್ವದಲ್ಲಿಯೇ ಹೆಚ್ಚು ಬಹುಮಾನ ಹೊಂದಿರುವ ಬ್ಯಾಡ್ಮಿಂಟನ್ ಟೂರ್ನಿ ಎನಿಸಿದೆ. ವಿದೇಶಿ ಆಟಗಾರರ ಎದುರು ಸೆಣಸಲು ಹಾಗೂ ಬೆರೆಯಲು ನಮ್ಮ ಆಟಗಾರರಿಗೆ ಅಪೂರ್ವ ಅವಕಾಶ. ಆದರೆ ಆರಂಭದಲ್ಲೇ ಈ ಲೀಗ್ ವಿವಾದಗಳಿಗೆ ಕಾರಣವಾಗಿದೆ. ಟೂರ್ನಿಯನ್ನು ಹೆಚ್ಚು ಆಕರ್ಷಕವಾಗಿಸಲು ಮಹಿಳೆಯರ ಡಬಲ್ಸ್ ಪಂದ್ಯಗಳನ್ನೇ ಕೈಬಿಟ್ಟಿದ್ದಾರೆ. ಇದರಲ್ಲಿ ಫ್ರಾಂಚೈಸ್‌ಗಳ ಹಿತಾಸಕ್ತಿಯೂ ಅಡಗಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರೀಡೆಯ ಸ್ಕೋರಿಂಗ್ ಪದ್ಧತಿಯಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಕೆಲ ಕೋಚ್‌ಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ಯೋಜನೆ ಕೈಗೆತ್ತಿಕೊಂಡಾಗ ಆಕ್ಷೇಪ ಸಹಜ. ಈ ಕಾರಣ ಸಂಘಟಕರ ಮುಂದೆ ಈಗ ಹೊಸ ಸವಾಲು ಇದೆ. ದೇಶದಲ್ಲಿ ಬ್ಯಾಡ್ಮಿಂಟನ್ ಬೆಳೆದು, ಮತ್ತಷ್ಟು ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾದರೆ ಈ ಲೀಗ್ ಉದ್ದೇಶ ಸಾರ್ಥಕವಾಗಲಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.