ಭರವಸೆಗಳು ಕಾರ್ಯಗತವಾಗಲಿ ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟದ (ಫಿಕ್ಕಿ) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ರಾಜ್ಯದ ಬೆಳವಣಿಗೆಯ ಬಗ್ಗೆ ಕೆಲವು ಕಹಿ ಸತ್ಯಗಳು ಪ್ರಸ್ತಾಪವಾಗಿವೆ. ತಯಾರಿಕಾ ವಲಯದಲ್ಲಿ ರಾಜ್ಯದ ಬೆಳವಣಿಗೆಯ ದರ ಶೇ 4.09. ರಾಷ್ಟ್ರೀಯ ಬೆಳವಣಿಗೆಯ ಸರಾಸರಿ ದರ ಶೇ 7.16ಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ವೃದ್ಧಿದರವೂ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯೇ ಇದೆ. ವಾಣಿಜ್ಯೋದ್ಯಮ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಜ್ಯದಲ್ಲಿ ಏಕಗವಾಕ್ಷಿ ವ್ಯವಸ್ಥೆಯೇನೋ ಇದೆ. ಆದರೆ ವಾಸ್ತವವಾಗಿ ಇದೂ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ವಾಣಿಜ್ಯೋದ್ಯಮಕ್ಕೆ ಸಹಕಾರಿಯಾಗಿರುವ ರಾಷ್ಟ್ರದ ಮೊದಲ 17 ನಗರಗಳನ್ನು ವಿಶ್ವಬ್ಯಾಂಕ್ ವರದಿ ಪಟ್ಟಿಮಾಡಿದ್ದು, ಈ ಪಟ್ಟಿಯಲ್ಲಿ ಬೆಂಗಳೂರಿಗೆ ದಕ್ಕಿರುವುದು 13ನೇ ಸ್ಥಾನ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಇಂದು ರಾಜ್ಯ ಅಥವಾ ಬೆಂಗಳೂರಿನಲ್ಲಿ ಉದ್ಯಮಗಳ ಪ್ರಸ್ತಾಪ ಬಂದಾಗಲೆಲ್ಲ ಸಾಫ್ಟ್‌ವೇರ್ ಕ್ಷೇತ್ರದ ಪ್ರಸ್ತಾಪವಾಗುತ್ತದೆ. ಮಾಹಿತಿ ತಂತ್ರಜ್ಞಾನ ಸೇವೆಗಳ ರಫ್ರು ವಲಯದಲ್ಲಿ ರಾಜ್ಯದ ಪಾಲು ದೊಡ್ಡದೇ ಇದೆ ಎಂಬುದೂ ನಿಸ್ಸಂಶಯ. ಹೀಗಾಗಿ, ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಅಗತ್ಯ ಬೆಂಬಲ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿರುವುದು ಪ್ರಸ್ತುತವಾದದ್ದು. ಇದಕ್ಕಾಗಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಆಶ್ವಾಸನೆಗಳನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ. ವಿಶೇಷವಾಗಿ 2017ರ ಒಳಗೆ ರಾಜ್ಯವನ್ನು ವಿದ್ಯುತ್ ಸ್ವಾವಲಂಬಿ ರಾಜ್ಯವನ್ನಾಗಿಸುವ ಬಗ್ಗೆ ಅವರು ನೀಡಿರುವ ಭರವಸೆ ಕಾರ್ಯಗತವಾಗುವುದು ಮುಖ್ಯ. ರಾಜ್ಯದ ಕೈಗಾರಿಕಾ ನೀತಿಗೆ ತಿದ್ದುಪಡಿಗಳನ್ನು ತಂದು 2014ರ ವೇಳೆಗೆ ನೂತನ ಕೈಗಾರಿಕಾ ನೀತಿ ಜಾರಿಗೆ ತರುವ ಆಶಾಭಾವವನ್ನೂ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಿದ್ದ ಸರ್ಕಾರಿ ಕ್ಷೇತ್ರದ ಉದ್ಯಮಗಳು ಜಾಗತೀಕರಣದಿಂದಾಗಿ ಬೆಂಗಳೂರಿನಲ್ಲಿ ನೆಲಕಚ್ಚಿದ ಬಳಿಕ ಉದ್ಯೋಗ ಆಧಾರಿತ ಉದ್ಯಮಗಳು ಬೆಳೆಯಲೇ ಇಲ್ಲ. ಅಧಿಕಾರಶಾಹಿಯ ನಿಧಾನ ಪ್ರವೃತ್ತಿ, ಭ್ರಷ್ಟಾಚಾರ, ದೂರದೃಷ್ಟಿ ಇಲ್ಲದ ರಾಜಕಾರಣಿಗಳ ಆಲಸ್ಯ ಪ್ರವೃತ್ತಿ ಇದಕ್ಕೆ ಕಾರಣ ಇರಬಹುದು. ಭಾರಿ ಪ್ರಮಾಣದಲ್ಲಿ ಜಮೀನು ಅಗತ್ಯ ಇರುವ ಉದ್ಯಮಗಳು ಸರ್ಕಾರಗಳ ನಿಷ್ಕ್ರಿಯತೆಯಿಂದ ರಾಜ್ಯದಿಂದ ಕಾಲುಕಿತ್ತಿವೆ. ಕೃಷಿ ಆಧಾರಿತ ಉದ್ಯಮಗಳಿಗೆ ರಾಜ್ಯದಲ್ಲಿ ಅವಕಾಶವಿದ್ದರೂ ಅವು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲೇ ಇಲ್ಲ. ಕಾಫಿ, ಚಹಾ, ರಬ್ಬರು, ಅಡಿಕೆ ಈ ಮುಂತಾದವುಗಳಿಗೆ ಸಂಬಂಧಪಟ್ಟ ಉದ್ಯಮಗಳ ಬೆಳವಣಿಗೆ ಹೆಚ್ಚಿದಷ್ಟು ರೈತನಿಗೇ ಲಾಭ. ದುರದೃಷ್ಟವೆಂದರೆ ಗಣಿ ಉದ್ಯಮ ಕೆಲ ಲೂಟಿಕೋರರ ವಶವಾಗಿ ರಾಜ್ಯದ ಮಾನ ಹರಾಜಾಗಿದೆ. ಹೊಸ ಕೈಗಾರಿಕಾ ನೀತಿ ಜಾರಿಗೊಳಿಸುವ ಮುಂಚೆ ಈ ಎಲ್ಲಾ ಅಂಶಗಳನ್ನೂ ಸರ್ಕಾರ ಗಮನಕ್ಕೆ ತಂದುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.