ಸುರಕ್ಷತೆಗೆ ಸಿಗಲಿ ಆದ್ಯತೆ ಆಕಸ್ಮಿಕ ಅಪಘಾತಗಳೆಂದರೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಮೀರಿ ಸಂಭವಿಸುವ ಘಟನೆಗಳು. ಬೇಲೂರು ಸಮೀಪದ ವಿಷ್ಣುಸಮುದ್ರ ಕೆರೆಗೆ ಬಸ್ ಬಿದ್ದ ಘಟನೆಯಲ್ಲಿ ಆಕಸ್ಮಿಕ ಅಂಶಕ್ಕಿಂತ ಹೆಚ್ಚಾಗಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದ ವ್ಯವಸ್ಥೆಯ ಪಾಲೇ ಹೆಚ್ಚಾಗಿದೆ. ವಿಸ್ತಾರವಾಗಿರುವ ಈ ಕೆರೆಗೆ ಒಂದೂವರೆ ಕಿಲೋಮೀಟರ್‌ನಷ್ಟು ಉದ್ದದ ದಂಡೆಯಿದೆ. ಈ ದಂಡೆ ರಸ್ತೆಯಾಗಿಯೂ ಬಳಕೆಯಾಗುತ್ತದೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ದಂಡೆಗೆ ತಡೆಗೋಡೆಯಿಲ್ಲ. 1972ರಲ್ಲಿ ಮಂಡ್ಯ ತಾಲ್ಲೂಕಿನಲ್ಲಿ ವಿಶ್ವೇಶ್ವರಯ್ಯ ನಾಲೆಯ ದಂಡೆಯಿಂದ ಉರುಳಿದ ಬಸ್ 120 ಜನರನ್ನು ಬಲಿತೆಗೆದುಕೊಂಡಾಗಲೇ ರಸ್ತೆಗಳಿರುವ ರಾಜ್ಯದ ಎಲ್ಲಾ ನಾಲೆ, ಕೆರೆ ಮತ್ತು ಹೊಳೆಗಳ ದಂಡೆಗೆ ತಡೆಗೋಡೆಗಳನ್ನು ನಿರ್ಮಿಸಿದ್ದರೆ ಆಮೇಲೆ ಸಂಭವಿಸಿದ ಈ ಬಗೆಯ ಹತ್ತಾರು ಅಪಘಾತಗಳಲ್ಲಿ ನೂರಾರು ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುವುದನ್ನು ತಡೆಯಬಹುದಿತ್ತು. ಆದರೆ, ಯಾವ ಸರ್ಕಾರವೂ ಈ ಬಗೆಯ ತಡೆಗೋಡೆಗಳನ್ನು ಆದ್ಯತೆ ಎಂದು ಪರಿಗಣಿಸಲಿಲ್ಲ. ಕಳೆದ ಎರಡು ದಶಕಗಳಲ್ಲಿ ಸಂಭವಿಸಿರುವ ಈ ಬಗೆಯ ಅಪಘಾತಗಳನ್ನು ನೋಡಿದರೆ ಎಲ್ಲಿ ತಪ್ಪಿದೆ ಎಂಬುದು ಅರಿವಾಗುತ್ತದೆ. 2005ರಲ್ಲಿ ಆಲಮಟ್ಟಿ ಎಡದಂಡೆ ಕಾಲುವೆಗೆ ಬಸ್ ಬಿದ್ದು 58 ಜನರು, 1999ರಲ್ಲಿ ಹರಿಹರ ತಾಲ್ಲೂಕಿನಲ್ಲಿ ದೇವರಬೆಳಕೆರೆ ಜಲಾಶಯಕ್ಕೆ ಬಸ್ ಉರುಳಿ 96 ಜನರು, ಅದೇ ವರ್ಷ ಉಚ್ಚಂಗಿ ದುರ್ಗದಲ್ಲಿ ಪುಷ್ಕರಣಿಗೆ ಬಸ್ ಬಿದ್ದು 45 ಜನರು ಮೃತಪಟ್ಟಿದ್ದರು. 1997ರಲ್ಲಿ ಚಿತ್ರದುರ್ಗದ ಸಂತೆಹೊಂಡಕ್ಕೆ ಬಸ್ ಉರುಳಿ 62 ಮಂದಿ ಸತ್ತಿದ್ದರು. 1986ರಲ್ಲಿ ಹಿರಿಯೂರು ಸಮೀಪ ವೇದಾವತಿ ನದಿಗೆ ಬಸ್ ಉರುಳಿ 19 ಜನರು ಮೃತಪಟ್ಟಿದ್ದರು. ಬೇಲೂರಿನ ಅಪಘಾತವೂ ಸೇರಿದಂತೆ ಈವರೆಗೆ ಸಂಭವಿಸಿರುವ ಸಾರ್ವಜನಿಕ ಸಾರಿಗೆ ವಾಹನ ನದಿ, ಕೆರೆ, ನಾಲೆಗೆ ಉರುಳಿರುವ ಎಲ್ಲಾ ಪ್ರಕರಣಗಳಲ್ಲಿಯೂ ಕಾಣಿಸುತ್ತಿರುವುದು ಮೂರು ತಪ್ಪುಗಳು. ದಂಡೆಗಳಿಗೆ ತಡೆಗೋಡೆ ಇಲ್ಲದಿರುವುದು, ಸಂಚಾರದ ಅರ್ಹತೆಯನ್ನೂ ಕಳೆದುಕೊಳ್ಳುವಷ್ಟು ಹಳೆಯ ವಾಹನಗಳು ಮತ್ತು ಚಾಲಕರ ನಿರ್ಲಕ್ಷ್ಯ. ಈ ಮೂರಕ್ಕೂ ಜವಾಬ್ದಾರಿ ಸರ್ಕಾರವೇ. ವಾಹನಗಳ ಸಂಚಾರಾರ್ಹತೆಯನ್ನು ಖಾತರಿಪಡಿಸಬೇಕಾದ ಸಾರಿಗೆ ಇಲಾಖೆಯ ಲಂಚಾವತಾರ ವಿವರಿಸಲಾಗದಷ್ಟು ದೊಡ್ಡದು. ಬಸ್ಸುಗಳಲ್ಲಿ ಮಿತಿ ಮೀರಿದ ಪ್ರಯಾಣಿಕರು. ಇದಕ್ಕೆ ಪುಟವಿಟ್ಟಂತೆ ಕೆರೆಗಳ ದಂಡೆಯ ಮೇಲಿರುವ ರಸ್ತೆಗಳಿಗೆ ತಡೆಗೋಡೆ ನಿರ್ಮಿಸದ ಪಂಚಾಯತ್‌ರಾಜ್ ಸಂಸ್ಥೆಗಳು, ಲೋಕೋಪಯೋಗಿ ಇಲಾಖೆ. ಪರಿಣಾಮವಾಗಿ ಆಕಸ್ಮಿಕವೊಂದು ದುರಂತವಾಗಿ ಬದಲಾಗುವ ವಾತಾವರಣವಿದೆ. ಇದನ್ನು ತಡೆಯುವುದಕ್ಕೆ ಸರ್ಕಾರ ಮುಖ್ಯವಾಗಿ ಮಾಡಬೇಕಾಗಿರುವುದು ರಸ್ತೆ ಮತ್ತು ವಾಹನ ಸುರಕ್ಷತೆಗೆ ಆದ್ಯತೆ ನೀಡುವುದು. ಚಾಲಕರಿಗೆ ಸೂಕ್ತ ತರಬೇತಿ ಕೊಡುವುದು. ಇಂತಹ ಅಪಘಾತಗಳು ಸಂಭವಿಸಿದಾಗ ಅದನ್ನು ಹೇಗೆ ತಡೆಯಬಹುದಾಗಿತ್ತು ಎಂಬುದನ್ನು ತನಿಖೆ ಮಾಡಿ ಅಧಿಕಾರಿಗಳ ವೈಫಲ್ಯವಿದ್ದರೆ ಅವರನ್ನು ಉತ್ತರದಾಯಿಗಳನ್ನಾಗಿಸಿ ಕಠಿಣ ಕ್ರಮ ಕೈಗೊಳ್ಳುವುದು. ಸಂತೆಹೊಂಡದ ಅಪಘಾತ ನಡೆದಾಗ ಅದರ ಕುರಿತಂತೆ ವಿಭಾಗಾಧಿಕಾರಿಯೊಬ್ಬರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರು. ಆ ವರದಿ ಏನಾಗಿದೆ ಎನ್ನುವುದು ಈವರೆಗೆ ಗೊತ್ತಿಲ್ಲ. ಮುಂದಿನ ತನಿಖೆಗಳು ಅದೇ ದಾರಿ ಹಿಡಿಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಇದು ಅನೇಕ ಪ್ರಾಣಗಳನ್ನು ಉಳಿಸುವ ಕ್ರಿಯೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.