ಗಣಿ ಅಕ್ರಮ: ಕ್ರಮಕ್ಕೆ ವಿಳಂಬ ಬೇಡ ಅಧಿಕೃತ ವಿರೋಧ ಪಕ್ಷವಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆ ತಟ್ಟಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಏರಿದ ಮೇಲೆ ಈ ವಿಷಯದಲ್ಲಿ ಮೃದು ಧೋರಣೆ ತಳೆಯುತ್ತಿದೆಯೇ? ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಉನ್ನತ ಮಟ್ಟದ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ಗಣಿ ಅಕ್ರಮಗಳ ಬಗ್ಗೆ ರಾಜ್ಯದ ಗಮನ ಸೆಳೆಯಲು ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಅವರೇ ಆಡಿದ್ದ ಮಾತುಗಳಿಗೂ ಈಗ ಮುಖ್ಯಮಂತ್ರಿಯಾಗಿ ನೀಡಿರುವ ಹೇಳಿಕೆಗೂ ಎಷ್ಟೊಂದು ವ್ಯತ್ಯಾಸ! ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ಮಾತುಗಳಲ್ಲಿ ವ್ಯಕ್ತವಾದ ಜನಪರ ಕಾಳಜಿಯ ತೀವ್ರತೆ ಈಗ ಕಾಣುತ್ತಿಲ್ಲ. ಸಿದ್ದರಾಮಯ್ಯ ಮಾತ್ರವಲ್ಲ; ರಾಜ್ಯದ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಸಂದರ್ಭದಲ್ಲಿ ಏನೇನು ಮಾತನಾಡಿದ್ದರು ಎಂಬುದನ್ನು ಮರೆತಿರಲಾರರು. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪಾದಯಾತ್ರೆ ಸಂದರ್ಭದಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದರು. ಈಗ ಹದಿನಾರು ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದ್ದಾರೆ. ಎಷ್ಟಾದರೂ ಸರಿ, ನಷ್ಟದ ಹಣ ವಸೂಲು ಮಾಡುವ ವಿಷಯದಲ್ಲಿ ಹಿಂಜರಿಕೆ ಬೇಕಿಲ್ಲ. ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದು ಲೋಕಾಯುಕ್ತರ ವರದಿಯಲ್ಲಿ ಸ್ಪಷ್ಟವಾಗಿರುವುದರಿಂದ ಅದನ್ನು ಆಧಾರವಾಗಿ ಇಟ್ಟುಕೊಂಡು ಕಾಲಮಿತಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು. ಗಣಿ ಅಕ್ರಮಗಳಲ್ಲಿ ಭಾಗಿಯಾದವರ ಮೇಲಿರುವ ಆರೋಪಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಆರಂಭಿಸುವಂತೆ ಕಾಂಗ್ರೆಸ್ ಮುಖಂಡರೇ ಹಿಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತ್ವರಿತ ನ್ಯಾಯಾಲಯ ಆರಂಭಿಸುವ ಭರವಸೆಯನ್ನೂ ನೀಡಿದ್ದರು. ಈಗ ಈ ಕುರಿತು ಪರಿಶೀಲಿಸುವ ಮಾತನ್ನಾಡುತ್ತಿದ್ದಾರೆ! ವಿರೋಧ ಪಕ್ಷದಲ್ಲಿದ್ದಾಗ ಆಕ್ರೋಶ, ಅಧಿಕಾರಕ್ಕೆ ಬಂದಾಗ ಮೃದು ಧೋರಣೆ ಎಂದು ಜನರು ಭಾವಿಸುವಂತಿದೆ ಮುಖ್ಯಮಂತ್ರಿಯವರ ವರ್ತನೆ. ಗಣಿ ಅಕ್ರಮಗಳಿಗೆ ಉತ್ತೇಜನ ನೀಡಿದ ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು ಸಂಗ್ರಹಿಸಿದ್ದ ಅದಿರನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಿಕೊಂಡವರು, ತೆರಿಗೆ ವಂಚಕರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಇನ್ನಷ್ಟು ತನಿಖೆ, ವಿಚಾರಣೆ ನಡೆಸಿದರೆ ಸ್ವಪಕ್ಷೀಯರ ಬಣ್ಣವೂ ಬಯಲಾದೀತು ಎಂಬ ಆತಂಕ ಮುಖ್ಯಮಂತ್ರಿಯವರಿಗೆ ಇರಬಹುದೇ? ಕಾನೂನು ಕ್ರಮ ಜರುಗಿಸುವ ಬದ್ಧತೆಯನ್ನು ಮಾತಿನಲ್ಲೇ ವ್ಯಕ್ತಪಡಿಸುತ್ತ ವಿಷಯವನ್ನು ನನೆಗುದಿಗೆ ತಳ್ಳುವ ಧೋರಣೆಯನ್ನು ರಾಜ್ಯದ ಜನತೆ ಸಹಿಸುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅಕ್ರಮ ಗಣಿಗಾರಿಕೆಗೆ ನೆರವಾದ ಪ್ರಭಾವಿಗಳು, ಹಿರಿಯ ಅಧಿಕಾರಿಗಳನ್ನೂ ಉತ್ತರದಾಯಿಯಾಗಿಸಿ ಕ್ರಮ ಕೈಗೊಳ್ಳಬೇಕೆ ಹೊರತು ಕೆಳ ಹಂತದ ಸರ್ಕಾರಿ ನೌಕರರ ಮೇಲಷ್ಟೇ ಕ್ರಮ ಕೈಗೊಂಡು ಕಣ್ಣೊರೆಸುವುದು ಬೇಡ. ಎಲ್ಲ ತಪ್ಪಿತಸ್ಥರ ವಿರುದ್ಧವೂ ಕ್ರಮ ಜರುಗಿಸಬೇಕು. ಇದು ಜನರ ಅಪೇಕ್ಷೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.