ಬಡತನ ನಿವಾರಣೆ ಜಾದೂ ಬಡತನಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗ ಬಿಡುಗಡೆ ಮಾಡಿರುವ ಅಂಕಿಸಂಖ್ಯೆ ಅನುಮಾನಗಳಿಗೆ ಎಡೆಮಾಡಿದೆ. ದೇಶದಲ್ಲಿ ಬಡತನ ಭಾರಿ ಪ್ರಮಾಣದಲ್ಲಿ ಕುಸಿದಿದೆ ಎಂದು ಬಿಂಬಿಸುವ ಆಯೋಗದ ವರದಿ, ವಿವಿಧ ವಲಯಗಳಿಂದ ಟೀಕಾಸ್ತ್ರಗಳನ್ನು ಎದುರಿಸಬೇಕಾಗಿದೆ. ಇದರ ಹಿಂದೆ ಭಾರತದ ಪ್ರಗತಿ ಚಿತ್ರಣವನ್ನು ವೈಭವೀಕರಿಸುವ ಹುನ್ನಾರ ಅಡಗಿದೆ ಎಂದು ರಾಜಕೀಯ ವಿಶ್ಲೇಷಕರು ಶಂಕಿಸಿದ್ದಾರೆ. ವರದಿಯಲ್ಲಿ ದಾಖಲಾಗಿರುವ ಕುಸಿತದ ವಾರ್ಷಿಕ ಪ್ರಮಾಣ ಹಾಗೆಯೇ ಮುಂದುವರಿದಲ್ಲಿ ಮುಂದಿನ ದಶಕದಲ್ಲಿ ದೇಶದಲ್ಲಿ ಬಡತನ ಪೂರ್ಣ ಪ್ರಮಾಣದಲ್ಲಿ ನಿವಾರಣೆ ಆಗಲಿದೆ. 2004-05ರಲ್ಲಿ ಬಡತನ ಪ್ರಮಾಣ ಶೇ 37.2ರಷ್ಟಿತ್ತು. ಅದು 2011-12ರಲ್ಲಿ ಶೇ 21.9ಕ್ಕೆ ಕುಸಿದಿದೆ ಎಂದು ಆಯೋಗ ತಿಳಿಸಿದೆ. ಏಳು ವರ್ಷಗಳಲ್ಲಿ ಶೇ 15.3ರಷ್ಟು ಅಗಾಧ ಇಳಿಕೆ! ಈ ಜಾದೂ ಹೇಗೆ ಸಾಧ್ಯವಾಯಿತು ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಆಯೋಗದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ 25.7ರಷ್ಟು ಜನರು ಮತ್ತು ನಗರ ಪ್ರದೇಶದಲ್ಲಿ ಶೇ 13.7ರಷ್ಟು ಮಂದಿ ಕಡುಬಡವರು. ಬಡತನ ನಿವಾರಣೆಗೆ ಕಾಂಗ್ರೆಸ್ 1971ರಲ್ಲಿ `ಗರೀಬಿ ಹಠಾವ್' ಘೋಷಣೆ ಹೊರಡಿಸಿತ್ತು. ಈ ಮೂಲಕ ಮತದಾರರನ್ನು ಮೋಡಿ ಮಾಡಿದ್ದು ಬಿಟ್ಟರೆ, ಬಡತನದಲ್ಲಿ ಗಣನೀಯ ಕುಸಿತವಂತೂ ಆಗಲಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಾನು ಅಧಿಕಾರಕ್ಕೆ ಬಂದ ಬಳಿಕ ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದು ತೋರಿಸಿಕೊಳ್ಳಲು ಈ ಅಂಕಿಸಂಖ್ಯೆಗಳ ಮೊರೆ ಹೋಗಿರಬಹುದೆಂಬ ಗುಮಾನಿ ಕೆಲವರಲ್ಲಾದರೂ ಮೂಡಿದ್ದರೆ ಅದಕ್ಕೆ ಅವಾಸ್ತವ ಅಂಕಿಸಂಖ್ಯೆಗಳೇ ಕಾರಣ. ಅದರಲ್ಲೂ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಇರುವ ಕಾರಣ ಇಂತಹದೊಂದು ಅನುಮಾನ ಬರುವುದು ಸಹಜವೇ ಆಗಿದೆ. ಈ ಸಮೀಕ್ಷೆಗೆ ಸುರೇಶ್ ತೆಂಡೂಲ್ಕರ್ ಸಮಿತಿಯ ಸೂತ್ರಗಳನ್ನು ಆಧಾರವಾಗಿ ಇಟ್ಟುಕೊಂಡಿರುವುದೂ ಟೀಕೆಗಳಿಗೆ ಗುರಿಯಾಗಿದೆ. ಈ ವಿಧಾನ ದೋಷಪೂರ್ಣವಾದದ್ದು ಎಂಬಂತಹ ಅಭಿಪ್ರಾಯ ಈ ಹಿಂದೆಯೇ ಆರ್ಥಿಕ ತಜ್ಞರಿಂದ ವ್ಯಕ್ತವಾಗಿದೆ. ಹೀಗಾಗಿಯೇ ಈ ಬಗ್ಗೆ ಪರಿಶೀಲಿಸಲು ಸಿ.ರಂಗರಾಜನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಮುಂದಿನ ವರ್ಷ ಅದು ವರದಿಯನ್ನು ಸಲ್ಲಿಸಲಿದೆ. ಅಷ್ಟರಲ್ಲೇ ತೆಂಡೂಲ್ಕರ್ ಸಮಿತಿಯ ಶಿಫಾರಸುಗಳನ್ನೇ ಪರಿಗಣಿಸಿ ಬಡವರ ಸಂಖ್ಯೆ ಲೆಕ್ಕಹಾಕಲಾಗಿದೆ. ಈ ಬಗೆಯ ಸಮೀಕ್ಷೆಗಳು, ಸರ್ಕಾರಗಳ ನೀತಿಗಳ ನಿರೂಪಣೆಗಳನ್ನು ದೋಷಪೂರ್ಣವಾಗಿಸಬಹುದು ಎಂಬುದು ಗಂಭೀರವಾದ ಸಂಗತಿ. ಬಿಜೆಪಿ ಮತ್ತು ಎಡಪಕ್ಷಗಳು ಈ ಅಂಕಿಸಂಖ್ಯೆಗಳ ಸರ್ಕಸ್ಸನ್ನು ತೀವ್ರವಾಗಿ ಟೀಕಿಸಿರುವುದರಲ್ಲಿ ಅರ್ಥ ಇಲ್ಲದೇ ಇಲ್ಲ. ಬಡತನದ ಪ್ರಮಾಣ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದು ಯಾರೂ ವಾದಿಸಲಾರರು. ಆದರೆ ಅಗಾಧ ಪ್ರಮಾಣದ ಈ ಇಳಿಕೆ ಹೇಗೆ ಸಾಧ್ಯ ಎಂಬುದು ಪ್ರಶ್ನೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.