ಹತಾಶೆಯ ಪ್ರತೀಕ ಆಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ಭಾರತೀಯ ಕಾನ್ಸುಲೇಟ್ ಕಚೇರಿಯನ್ನೇ ಗುರಿಯಾಗಿ ಇಟ್ಟುಕೊಂಡು ನಡೆಸಿದ ಭಯೋತ್ಪಾದನಾ ದಾಳಿ ಹತಾಶೆಯ ಪ್ರತೀಕ. ಇದರಲ್ಲಿ ಅದೃಷ್ಟವಶಾತ್ ಭಾರತೀಯ ರಾಯಭಾರ ಸಿಬ್ಬಂದಿ ಮತ್ತು ಭಾರತೀಯ ನಾಗರಿಕರಿಗೆ ಯಾವುದೇ ಜೀವಹಾನಿ ಆಗಿಲ್ಲ. ಆದರೆ 9 ಅಮಾಯಕ ಮಕ್ಕಳು ಸೇರಿದಂತೆ 12 ಮಂದಿ ಸತ್ತಿದ್ದಾರೆ. ಇವರೆಲ್ಲ ಆ ದೇಶದವರು. ಅಂದರೆ ಉಗ್ರರಿಗೆ ತಮ್ಮದೇ ದೇಶದ ಪ್ರಜೆಗಳ ಮೇಲೂ ಕನಿಕರ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಐದು ವರ್ಷಗಳಲ್ಲಿ ಇದು ಆಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿ ಮೇಲೆ ನಡೆದ ಮೂರನೇ ದಾಳಿ. 2008 ಮತ್ತು 2009ರಲ್ಲಿ ಕಾಬೂಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಉಗ್ರರ ದಾಳಿಗೆ ತುತ್ತಾಗಿತ್ತು. ಆಗ ಭಾರತೀಯರೂ ಸೇರಿ ಅನೇಕರು ಸತ್ತಿದ್ದರು. ಈಗಿನ ದಾಳಿಗಳಲ್ಲಿ ತನ್ನ ಪಾತ್ರ ಇಲ್ಲ ಎಂದು ತಾಲಿಬಾನ್ ಹೇಳುತ್ತಲೇ ಇದೆ. ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ `ಹಕ್ಕಾನಿ'ಯ ಕೈವಾಡ ಇರಬಹುದು ಎಂಬ ಅನುಮಾನ ದಟ್ಟವಾಗಿದೆ. ಹಕ್ಕಾನಿ ಕೂಡ ಸ್ವತಂತ್ರ ಸಂಘಟನೆಯಲ್ಲ. ಅದು ಪಾಕಿಸ್ತಾನದಲ್ಲಿ ತಾಲಿಬಾನ್‌ನ ಇನ್ನೊಂದು ರೂಪ. ಜಲಾಲಾಬಾದ್ ದಾಳಿಯ ಹಿಂದೆ ಯಾರೇ ಇದ್ದರೂ ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ನಡೆಯಬೇಕಿರುವ ಭಾರತ- ಪಾಕ್ ಪ್ರಧಾನಿಗಳ ಸಭೆ ಮೇಲೆ ಇದು ಕರಿನೆರಳು ಬೀರುವುದಂತೂ ಖಚಿತ. ಭಾರತ ಮತ್ತು ಪಾಕಿಸ್ತಾನಗಳ ಗೃಹ, ಜಲಸಂಪನ್ಮೂಲ ಕಾರ್ಯದರ್ಶಿಗಳ ಮಟ್ಟದಲ್ಲಿ ದ್ವಿಪಕ್ಷೀಯ ಸಭೆಗಳು ಆರಂಭವಾಗಬೇಕಿದ್ದ ಹೊತ್ತಿನಲ್ಲಿಯೇ ದಾಳಿ ನಡೆದಿರುವುದು ಎರಡೂ ದೇಶಗಳ ಸಂಬಂಧ ಸುಧಾರಣೆಯನ್ನು ವಿರೋಧಿಸುವವರ ಕೃತ್ಯ ಎನ್ನಬಹುದು. ಅಲ್ಲದೆ, ಆಫ್ಘಾನಿಸ್ತಾನದ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಕಾರ್ಯದಲ್ಲಿ ಅನೇಕ ಭಾರತೀಯ ಕಂಪೆನಿಗಳು ತೊಡಗಿಸಿಕೊಂಡಿವೆ. ರಸ್ತೆ, ಕಟ್ಟಡ ನಿರ್ಮಾಣ, ವಿದ್ಯುತ್ ಉತ್ಪಾದನೆ, ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಆಫ್ಘನ್ ಸೇನಾ ಸಿಬ್ಬಂದಿಗೆ ತರಬೇತಿ ನೀಡಲು ಭಾರತ ಸಮ್ಮತಿಸಿದೆ. ಎರಡೂ ದೇಶಗಳು ಹೀಗೆ ಪರಸ್ಪರ ಹತ್ತಿರವಾಗುತ್ತಿರುವುದು ಪಾಕಿಸ್ತಾನಕ್ಕೆ ಇಷ್ಟವಾಗುತ್ತಿಲ್ಲ. ಭಾರತವನ್ನು ತನ್ನ ಪ್ರತಿಸ್ಪರ್ಧಿಯಂತೆ ಕಾಣುತ್ತಿದೆ. ಇದೇ ಕಾರಣದಿಂದಲೇ, ತನ್ನ ನೆಲದಲ್ಲಿ ಬೆಳೆದ ಉಗ್ರಗಾಮಿಗಳು ಬೇರೊಂದು ದೇಶಕ್ಕೆ ಹೋಗಿ ಭಾರತೀಯರ ಮೇಲೆ ದಾಳಿ ಮಾಡಿದರೂ, ತಡೆಯದೇ ಮೌನ ವಹಿಸುತ್ತಿದೆ. ಇದು ಎರಡೂ ದೇಶಗಳ ಬಾಂಧವ್ಯ ಬೆಳೆಸುವ ದಾರಿಯಲ್ಲಿ ದೊಡ್ಡ ಅಡಚಣೆ ಎಂಬುದನ್ನು ಪಾಕಿಸ್ತಾನ ಅರಿಯಬೇಕು. ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಿ, ತನಗೇನೂ ಗೊತ್ತೇ ಇಲ್ಲ ಎಂಬಂಥ ಸೋಗಲಾಡಿ ವರ್ತನೆ ನಿಲ್ಲಿಸಬೇಕು. ನೆರೆಯ ರಾಷ್ಟ್ರದ ಜತೆ ನಡೆದುಕೊಳ್ಳುವ ರೀತಿ ಇದಲ್ಲ. ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುವ ನೀತಿ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಕ್ಕೇ ಕಂಟಕವಾಗಿದೆ. ಆದರೂ ಅದು ಪಾಠ ಕಲಿಯುತ್ತಿಲ್ಲ. ಭಾರತ ಕೂಡ ಇಂಥ ದುಷ್ಕೃತ್ಯಗಳನ್ನು ಸರಿಯಾಗಿ ಮಟ್ಟ ಹಾಕಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.